

| ಎಸ್. ರಾಜೇಂದ್ರ ಪ್ರಸಾದ್ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ
ಇದೊಂದು ಆಶಾದಾಯಕ ಬಜೆಟ್. ರೈತರ ಅನುಕೂಲಕ್ಕಾಗಿ ಹಲವು ಸುಧಾರಣಾ ಕ್ರಮಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೆಗೆದುಕೊಂಡಿರುವುದು ಸ್ಪಷ್ಟ. ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ದೇಶದಲ್ಲಿ ಗೋಧಿ, ಭತ್ತ, ದ್ವಿದಳ ಧಾನ್ಯಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಶೇಕಡ 1.5ರಷ್ಟು ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿರುವುದು ರೈತರಿಗೆ ಲಾಭ ತಂದುಕೊಡಲಿದೆ. ಇದರಿಂದ ಯಾವುದೇ ಭಯವಿಲ್ಲದೇ ಬೆಳೆ ಬೆಳೆಯಬಹುದಾಗಿದೆ. ಕೃಷಿ ಸಾಲದ ಮೊತ್ತವನ್ನು 16.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ. ಅದೇ ರೀತಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಬಂಡವಾಳಕ್ಕೆ 40 ಸಾವಿರ ಕೋಟಿ ರೂ. ತೆಗೆದಿಟ್ಟಿರುವುದು ಗ್ರಾಮೀಣ ಬದುಕು ಹಸನು ಮಾಡಲು ಸಹಕಾರಿಯಾಗಿದೆ.
ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮೂಲ ಸೇತುವೆಯಾಗಿರುವ ರಾಷ್ಟ್ರೀಯ ಕೃಷಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆ ಕಾಪಾಡಿಕೊಳ್ಳುವುದಕ್ಕೆ ಮಂಡಿಗಳ ಜೋಡಣೆ ಮಾಡುವುದರಿಂದ ವ್ಯಾಪಾರ ವೃದ್ಧಿಯಾಗುತ್ತದೆ. ವ್ಯಾಪಾರಸ್ಥರ ವಹಿವಾಟು ಹೆಚ್ಚಳಕ್ಕೆ ಇದೊಂದು ರೀತಿಯಲ್ಲಿ ಶಕ್ತಿ ತುಂಬಲಿದೆ. ಕೃಷಿ ಮಾಡಲು ಪ್ರಮುಖವಾಗಿ ಬೇಕಿರುವುದು ನೀರಾವರಿ ವ್ಯವಸ್ಥೆ. ಇದಕ್ಕಾಗಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ. ‘ಆಪರೇಷನ್ ಗ್ರೀನ್ ಸ್ಕೀಂ’ ಅಡಿಯಲ್ಲಿ ಈ ಮೊದಲು ಆಲೂಗಡ್ಡೆ, ಟೊಮ್ಯಾಟೋ, ಈರುಳ್ಳಿ ಮಾತ್ರ ಇದ್ದವು. ಈ ಬೆಳೆ ಬೆಳೆದವರಿಗೆ ಮಾತ್ರ ಸೌಕರ್ಯಗಳು ದೊರೆಯುತ್ತಿದ್ದವು. ಇದರ ಜತೆಗೆ ಇನ್ನೂ 22 ಬೆಳೆಗಳನ್ನು ಸೇರಿಸಿರುವುದರಿಂದ ರೈತರಿಗೆ ಸಹಾಯವಾಗಲಿದೆ.
ಕೃಷಿ ಕಾರ್ವಿುಕರು ಮತ್ತು ವಲಸೆ ಕಾರ್ವಿುಕರಿಗೆ ಪ್ರಯೋಜನವಾಗುವಂತೆ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ಯೋಜನೆಯನ್ನು ಜಾರಿಗೆ ತರಲು ಪ್ರಸ್ತಾಪಿಸಿರುವುದು ಬಡವರಿಗೆ ತುಂಬ ಪ್ರಯೋಜನಕಾರಿಯಾಗಿದೆ. ಹಸಿರು ವಿದ್ಯುತ್ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು ಸಮಗ್ರ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಪ್ರಾರಂಭಿಸಲಾಗುತ್ತಿದೆ. ಕೖಷಿ ಮೂಲಸೌಕರ್ಯ ಅಭಿವೃದ್ಧಿಗೋಸ್ಕರ ಕೖಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಉಪ ಕರ (ಸೆಸ್) ವಿಧಿಸುವುದನ್ನು ಪ್ರಸ್ತಾಪಿಸಲಾಗಿದೆ. ಸ್ಟಾರ್ಟ್ ಅಪ್ಗಳನ್ನು ಪ್ರೋತ್ಸಾಹಿಸಲು ತೆರಿಗೆ ರಜೆ ಮತ್ತು ಬಂಡವಾಳ ಲಾಭ ವಿನಾಯಿತಿ ಘೋಷಿಸಲಾಗಿದೆ. ಒಟ್ಟಾರೆಯಾಗಿ ಈ ಬಜೆಟ್ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಅಭಿವೃದ್ಧಿ, ಅಂತರ್ಗತ ಅಭಿವೃದ್ಧಿಗೆ ದಾರಿ ಮಾಡಿಕೊಡುವಂತಿದೆ. ಮಹತ್ವಾಕಾಂಕ್ಷೆಯ ಭಾರತದ ಅಡಿಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶ ಕೃಷಿ ಅಭಿವೃದ್ಧಿಗೆ ಪೂರಕವಾಗಿದೆ. ಇದು ಎಲ್ಲ ರೈತರಿಗೂ ಸಂತಸ ತರುವ ಬಜೆಟ್ ಆಗಿದೆ.