

ಗೌತಮ್ ರವೀಂದ್ರನಾಥ್ ಶೆಟ್ಟಿ, ಕುಂದಾಪುರ
ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಸದಸ್ಯ
ಬೆಂಗಳೂರು ಸಬರ್ಬನ್ ರೈಲಿಗೆ ಅನುದಾನ ಘೂಷಣೆ ಯಾಗಿದೆ. ಇದು ಆರಂಭವಾದರೆ ದಿನೆ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗಳಿಗೆ ಮೆಟ್ರೊ ರೈಲಿಗಿಂತಲೂ ಉತ್ತಮ ಪರಿಹಾರ ದೊರೆಯಲಿದೆ. ಇನ್ನು ಎಲ್ಲ ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳನ್ನು ಜೋಡಿಸುವ ತೇಜಸ್ ರೈಲಿನ ಓಡಾಟ ಘೊಷಣೆ
ಯಾಗಿದೆ. ಈಗಾಗಲೇ ಓಡುತ್ತಿರುವ ಮಡಗಾಂವ್-ಮುಂಬೈ ತೇಜಸ್ ರೈಲನ್ನು ಮಂಗಳೂರು - ಸುಬ್ರಹ್ಮಣ್ಯಕ್ಕೆ ವಿಸ್ತರಿಸಲು ಇದೊಂದು ಉತ್ತಮ ಅವಕಾಶವೂ ಆಗಿದೆ. ಖಾಸಗಿ ಪಾಲುದಾರಿಕೆ
ಯಲ್ಲಿ ನಿಲ್ದಾಣ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯಲಾಗಿದೆ. ಮಂಗಳೂರು ವಿಶ್ವ ದರ್ಜೆಯ ನಿಲ್ದಾಣ, ಕೊಂಕಣ ರೈಲ್ವೆ ಸಂಪೂರ್ಣ ಡಬ್ಲಿಂಗ್ಗೆ ಕೂಡ ಪ್ರಯತ್ನಿಸಬಹುದು.
ಭಾರತೀಯ ರೈಲ್ವೆಯನ್ನು ಸಂಪೂರ್ಣ ವಿದ್ಯುದೀಕರಣಗೊಳಿಸಲು ಇನ್ನೂ ನಾಲ್ಕು ವರ್ಷಗಳ ಗುರಿ ಇಟ್ಟುಕೊಳ್ಳಲಾಗಿದೆ. ಮಂಗಳೂರು - ಬೆಂಗಳೂರು ಮಾರ್ಗವೂ ವಿದ್ಯುದೀಕರಣಕ್ಕೆ ಒಳಗಾಗಲಿದೆ. ಸರಕು ಸಾಗಣೆ ರೈಲು ಮಾರ್ಗಕ್ಕೆ (ಡೆಡಿಕೇಟೆಡ್ ಗೂಡ್ಸ್ ಟ್ರೇನ್) ಉತ್ತೇಜನ ದೊರೆತಂತಾಗಿದೆ. ಇದರ ಫಲವಾಗಿ ಮಂಗಳೂರು ಬಂದರು ಮತ್ತು ಬೆಂಗಳೂರು-ಚೆನ್ನೈ ನಡುವೆ ಡೆಡಿಕೇಟೆಡ್ ಗೂಡ್ಸ್ ಕಾರಿಡಾರ್ ನಿರ್ವಣವಾದರೆ ಉದ್ಯಮ ಬೆಳವಣಿಗೆಯ ದೃಷ್ಟಿಯಿಂದ ಉತ್ತೇಜನ ಸಿಕ್ಕಂತಾಗುತ್ತದೆ. ಇನ್ನು, ಕಲಬುರಗಿ ಮತ್ತು ಮಂಗಳೂರು ವಿಭಾಗದ ಬೇಡಿಕೆಯಲ್ಲಿ ಕಲಬುರಗಿ ವಿಭಾಗದ ಬಹು ವರ್ಷಗಳ ಕನಸು ನನಸಾಗುವಂತೆ ಕಾಣಿಸುತ್ತಿದೆ. ಆದರೆ ಇದಕ್ಕಾಗಿ ಮೀಸಲಿಟ್ಟ ಹಣದ ವಿವರಗಳನ್ನು ಗಮನಿಸಬೇಕಾಗಿದೆ. ರೈಲು ಮಾರ್ಗಗಳ ಪಕ್ಕದ ಖಾಲಿ ಜಾಗಕ್ಕೆ ಸೋಲಾರ್ ಅಳವಡಿಕೆಯ ಘೊಷಣೆಯಾಗಿದೆ. ಇದು ವಿದ್ಯುತ್ ಕೊರತೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರಿಂದ ರಾಜ್ಯದ ಬಯಲು ಸೀಮೆಯ ಹಳಿಗಳಿರುವಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದೆ. ಸ್ಥಳೀಯ ವಿದ್ಯುತ್ ಬೇಡಿಕೆಯೂ ಪೂರೈಸುವಂತಾದರೆ ಉತ್ತಮ.