ದುಬಾರಿ ಕಾಮಗಾರಿ ಹೆಚ್ಚುವರಿ; ಜನಪ್ರತಿನಿಧಿ ಹಸ್ತಕ್ಷೇಪ, ಕನ್ಸಲ್ಟೆನ್ಸಿ ಆಳ್ವಿಕೆ ತಡೆಗೆ ತಂತ್ರ

Karnataka Govt
Published on

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಸರ್ಕಾರದ ವಿವಿಧ ಇಲಾಖೆಗಳ ಸಿವಿಲ್ ಕಾಮಗಾರಿಗಳಲ್ಲಿ ಎಸ್ಕಲೇಷನ್ (ಅಧಿಕ ಹೆಚ್ಚುವರಿ) ಸಂಪ್ರದಾಯ ಮಿತಿ ಮೀರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದಕ್ಕೆ ತಡೆಹಾಕಲು ಸರ್ಕಸ್ ಆರಂಭಿಸಿದೆ.

ಸರ್ಕಾರದ ಹತ್ತು ಹಲವು ಇಲಾಖೆಗಳ ಮೂಲಕ ನಡೆಯುವ ಸಿವಿಲ್ ಕಾಮಗಾರಿಗೆ ಆರಂಭದಲ್ಲಿ ಅಂದಾಜಿಸುವ ಲೆಕ್ಕವೇ ಒಂದಾದರೆ ಅಂತಿಮ ವೆಚ್ಚದ್ದು ಮತ್ತೊಂದು ಲೆಕ್ಕ. ಇದರಿಂದ ಹಣಕಾಸು ಹೊಂದಾಣಿಕೆ ಹಣಕಾಸು ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ. ಜತೆಗೆ ಭ್ರಷ್ಟಾಚಾರದ ದೊಡ್ಡ ಬಿಲ ಗೋಚರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಲೋಕೋಪಯೋಗಿ ಇಲಾಖೆ ನಿವೃತ್ತ ಪ್ರಧಾನ ಅಭಿಯಂತರ ಬಿ. ಗುರುಪ್ರಸಾದ್ ನೇತೃತ್ವದಲ್ಲಿ ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ ರಚಿಸಿತ್ತು. ಈ ಸಮಿತಿ ಒಂದು ವರ್ಷ ಅಧ್ಯಯನ ನಡೆಸಿ ಸಲ್ಲಿಸಿರುವ ವರದಿ ಶಿಫಾರಸುಗಳ ಅನುಷ್ಠಾನಕ್ಕೆ ಹಣಕಾಸು ಇಲಾಖೆ ದಾರಿ ಹುಡುಕುತ್ತಿದೆ.

ಪರಿಸ್ಥಿತಿ ಗಂಭೀರ: ವರದಿಯ ಕೆಲವು ಮಾಹಿತಿ ವಿಜಯವಾಣಿಗೆ ಲಭ್ಯವಾಗಿದೆ. ಅಧ್ಯಯನ ಉದ್ದೇಶಕ್ಕೆ ಪರಿಗಣಿಸಿದ ಸರಾಸರಿ ನೂರು ಕಾಮಗಾರಿಗಳ ಪೈಕಿ ಶೇ.75ಕ್ಕಿಂತ ಹೆಚ್ಚು ಕಾಮಗಾರಿಗಳಲ್ಲಿ ಎಸ್ಕಲೇಷನ್ ಮಾಡಲಾಗಿದೆ. ಸಾಕಷ್ಟು ಕಾಮಗಾರಿಗಳಲ್ಲಿ ಅಂದಾಜು ವೆಚ್ಚ ಶೇ.100 ಹೆಚ್ಚುವರಿಯಾಗಿದ್ದೂ ಇದೆ. ಆ ಮೂಲಕ ತಾಳಮೇಳ ತಪ್ಪಿಸುವುದು ಸ್ಪಷ್ಟವಾಗಿದೆ. ಹೇಗೆ ನಡೆಯುತ್ತದೆ ಭ್ರಷ್ಟಾಚಾರ?: ಸಾಮಾನ್ಯವಾಗಿ ಯಾವುದೇ ಇಲಾಖೆಯ ಸಿವಿಲ್ ಕಾಮಗಾರಿ ಮುನ್ನ ತಜ್ಞರ ನೆರವಿನಿಂದ ಅಂದಾಜು ಪಟ್ಟಿ ತಯಾರಿಸಲಾಗುತ್ತದೆ. ಕಾಮಗಾರಿಗೆ ಎಷ್ಟು ವೆಚ್ಚ ಆಗಲಿದೆ ಎಂದು ಅಂದಾಜಿಸಿ ಅದರ ಆಧಾರದ ಮೇಲೆ ಸರ್ಕಾರ ಅನುದಾನ ಹಂಚಿಕೆ ಮಾಡುತ್ತದೆ. ಇದಕ್ಕಾಗಿ ಟೆಂಡರ್ ಕರೆಯಲಾಗುತ್ತದೆ. ಆದರೆ, ಕಾಮಗಾರಿ ಮುಗಿಯುವ ಹಂತಕ್ಕೆ ಎಸ್ಕಲೇಷನ್ ಪ್ರಸ್ತಾಪ ಮಾಡಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡುವ ಪರಿಪಾಠ ನಡೆದಿದೆ. ಕೆಲವು ಪ್ರಕರಣಗಳಲ್ಲಿ ಎಸ್ಕಲೇಷನ್ ನೈಜ ಉದ್ದೇಶವೂ ಇರಬಹುದು, ಹೆಚ್ಚು ಪ್ರಕರಣಗಳಲ್ಲಿ ಕೈಚಳಕ ಆಗಿರಬಹುದು, ರಾಜಕೀಯ ನಾಯಕರ ಪ್ರಭಾವವೂ ಇರಬಹುದು. ಮೇಲ್ನೋಟಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಸಿಲುಕಿ ಎಸ್ಕಲೇಷನ್ ಅಸ್ತ್ರ ಬಳಸಲಾಗುತ್ತಿದೆ ಎಂಬುದೀಗ ಗುಟ್ಟಾಗೇನು ಉಳಿದಿಲ್ಲ. ಒಟ್ಟಾರೆ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ಜತೆಗೆ ಸರ್ಕಾರದ ಬೊಕ್ಕಸದ ಮೇಲೂ ಪರಿಣಾಮ ಬೀರುತ್ತಿದೆ.

ಲೋಪ ಎಲ್ಲೆಲ್ಲಿ?: ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸುವಾಗ ಸರ್ಕಾರ ಖಾಸಗಿ ಕನ್ಸಲ್ಟೆಂಟ್​ಗಳ ಮೇಲೆ ಪೂರ್ಣ ಅವಲಂಬಿಸಿದೆ. ಇದು ಸಮಸ್ಯೆಗೆ ಮೊದಲ ಕಾರಣ ಎಂದು ತಜ್ಞರ ಸಮಿತಿ ಗುರುತಿಸಿದೆ.

ಕಾಮಗಾರಿಗಳ ಅಂದಾಜು ಮಾಡುವ ಖಾಸಗಿ ಕಂಪನಿಗಳು ವರದಿ ಕೊಡುವಾಗ ಎಡವುತ್ತಿವೆ. ಜತೆಗೆ ಈ ಕನ್ಸಲ್ಟೆಂಟ್​ಗಳ ಮೇಲೆ ಒತ್ತಡ ಹೇರಿ ತಮಗೆ ಬೇಕಾದಂತೆ ಟೆಂಡರ್ ರೂಪಿಸುವ ಕೆಲಸ ನಿರಾತಂಕವಾಗಿ ನಡೆದಿದೆ ಎಂಬ ಅಂಶವನ್ನು ಪರೋಕ್ಷವಾಗಿ ಪ್ರಸ್ತಾಪಿಸಲಾಗಿದೆ. ಎರಡನೇ ಪ್ರಮುಖ ಅಂಶ ಎಂದರೆ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಮ್ಮ ಅಪ್ಲಿಕೇಶನ್ ಆಫ್ ಮೈಂಡ್ ಪ್ರಯೋಗಿಸುತ್ತಿಲ್ಲ. ಒಂದು ನಿರ್ದಿಷ್ಟ ಕಾಮಗಾರಿಗೆ ಎಷ್ಟು ವೆಚ್ಚವಾಗುತ್ತದೆ ಎಂದು ಸಿವಿಲ್ ಇಂಜಿನಿಯರ್​ಗೆ ಅರಿಯದ ವಿಚಾರವೇನಲ್ಲವಾದರೂ ತಮಗೆ ಉಸಾಬರಿಯೇ ಇಲ್ಲ ಎಂಬಂತೆ ಖಾಸಗಿ ವ್ಯಕ್ತಿ ಸಿದ್ಧಪಡಿಸಿದ ಅಂದಾಜು ಪಟ್ಟಿಯನ್ನು ಒಪ್ಪಿ ಸಹಿ ಹಾಕುವ ಪರಿಪಾಠ ಬೆಳೆದುಬಂದಿದೆ.

ಭೂ ಸ್ವಾಧೀನ ಆಗಬೇಕಾದ ದೊಡ್ಡ ಕಾಮಗಾರಿಗಳಲ್ಲಿ ಅಥವಾ ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾದ ಕಡೆಗಳಲ್ಲಿ ತರಾತುರಿಯಲ್ಲೋ ಅಥವಾ ರಾಜಕೀಯ ಒತ್ತಡದ ಕಾರಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಸುವುದು ಸರ್ಕಾರದ ಮೇಲೆ ಹೊರೆ ಹೆಚ್ಚಲು ಮುಖ್ಯ ಕಾರಣ ಎಂದು ಅಂದಾಜಿಸಲಾಗಿದೆ. ಸಿವಿಲ್ ಕಾಮಗಾರಿಗಳಲ್ಲಿ ಮಣ್ಣಿನ ಪರೀಕ್ಷೆ ಬಹುಮುಖ್ಯ ಸಂಗತಿ. ಅದರ ಆಧಾರದ ಮೇಲೆ ಕಾಮಗಾರಿಯ ಸ್ವರೂಪ ನಿರ್ಧಾರವಾಗುತ್ತದೆ. ಈ ಹಂತದಲ್ಲಿ ಉದಾಸೀನ ಮಾಡುವುದು ಹೊರೆ ಹೆಚ್ಚಲು ಕಾರಣವಾಗುತ್ತಿದೆ ಎಂದು ಸಮಿತಿ ಕಾರಣ ಹುಡುಕಿದೆ.

ಪರಿಹಾರಕ್ಕೆ ಪ್ರಯತ್ನ: ಹಣಕಾಸು ಇಲಾಖೆ ಈ ವರದಿಯನ್ನು ಗಂಭೀರ ವಾಗಿ ಪರಿಗಣಿಸಿದ್ದು, ಈಗಾಗಲೇ ಸಂಬಂಧ ಪಟ್ಟ ಎಲ್ಲಾ ಇಲಾಖೆ ಮುಖ್ಯಸ್ಥರ ಸಭೆ ನಡೆಸಿ ಸಮಿತಿ ಶಿಫಾರಸು ಬಗ್ಗೆ ರ್ಚಚಿಸಿದೆ. ಮುಂದಿನ ಹಂತದಲ್ಲಿ ಸಂಪುಟ ಸಭೆಯ ಮುಂದಿಟ್ಟು, ಇನ್ನೊಂದಿಷ್ಟು ಗಂಭೀರತೆ ಕೊಡುವ ಪ್ರಯತ್ನ ಮಾಡಿದೆ. ಮುಂದೆ ಈ ವರದಿ ಶಿಫಾರಸನ್ನು ಪಾಲಿಸಲು ನಿರ್ದಿಷ್ಟ ಚೌಕಟ್ಟು ರೂಪಿಸಲು ಸಂಪುಟ ಉಪ ಸಮಿತಿಗೆ ವಹಿಸುವ ಸಾಧ್ಯ ತೆಯೂ ಇದೆ.

ಪತ್ತೆಯಾದ ಅಂಶಗಳು

  • ಕನ್ಸಲ್ಟೆಂಟ್​ಗಳ ಹಿಡಿತ ಹೆಚ್ಚಾಗಿರುವುದು ಲೆಕ್ಕ ತಪ್ಪಲು ಪ್ರಮುಖ ಕಾರಣ
  • ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕಾಮಗಾರಿ ಸ್ವರೂಪ ಪಡೆದುಕೊಳ್ಳುವುದು
  • ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿಭಾಯಿಸದಿರುವುದು
  • ದೊಡ್ಡ ಕಾಮಗಾರಿ ಅನುಮತಿ ಪಡೆದು ಅದರಡಿ ಇತರ ಕಾಮಗಾರಿ ಜೋಡಣೆ
  • ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ಉಳಿದೆಡೆ ಕೋಡಿಂಗ್ ಇಲ್ಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net