ಖಾದ್ಯ ತೈಲ ಬೆಲೆ ಇಳಿಕೆಯ ನಿರೀಕ್ಷೆ

Oil
Published on

ನವದೆಹಲಿ: ಹಬ್ಬದ ಋತುವಿನಲ್ಲಿ ಖಾದ್ಯ ತೈಲಗಳ ಕೊರತೆ ಆಗಬಾರದು ಮತ್ತು ಬೆಲೆ ಏರಿಕೆ ಕಾಡಬಾರದು ಎಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಬುಧವಾರ ಸೀಮಾ ಸುಂಕವನ್ನು ರದ್ದುಗೊಳಿಸಿದೆ. ಈ ಆದೇಶವು ತಾಳೆ, ಸೋಯಾ, ಸೂರ್ಯಕಾಂತಿ ಕಚ್ಚಾ ತೈಲಗಳಿಗೆ ಅನ್ವಯ. ಅಷ್ಟೇ ಅಲ್ಲ, ಇದು ಇಂದಿನಿಂದ 2022ರ ಮಾರ್ಚ್ 31ರ ತನಕ ಊರ್ಜಿತದಲ್ಲಿ ಇರಲಿದೆ. ಈ ವಿದ್ಯಮಾನವು ಖಾದ್ಯ ತೈಲಗಳ ಬೆಲೆ ಇಳಿಕೆಯನ್ನು ನಿರೀಕ್ಷಿಸುವಂತೆ ಮಾಡಿದೆ.

ಕಚ್ಚಾ ತಾಳೆ ಎಣ್ಣೆ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಶೇಕಡ 7.5 ಇತ್ತು. ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಕೃಷಿ ಸೆಸ್ ಶೇಕಡ 5 ಇತ್ತು. ಇದೇ ರೀತಿ ಕಚ್ಚಾ ತಾಳೆ ಎಣ್ಣೆ ಮೇಲಿನ ಸೀಮಾ ಸುಂಕ ಶೇಕಡ 8.25, ಸೋಯಾಬೀನ್ ಮತ್ತು ಸೂರ್ಯಕಾಂತಿ ಕಚ್ಚಾ ತೈಲದ ಮೇಲಿನ ಸೀಮಾ ಸುಂಕ ಶೇಕಡ 5.5 ಇತ್ತು. ಇದಕ್ಕೆ ಹೊರತಾಗಿ ಸೂರ್ಯಕಾಂತಿ, ಸೋಯಾಬೀನ್, ಪಾಮೋಲಿನ್, ಪಾಮ್ ಆಯಿಲ್​ಗಳ ವಿವಿಧ ರೀಫೈನ್ಡ್ ತೈಲಗಳ ಮೇಲಿನ ಮೂಲ ಸೀಮಾ ಸುಂಕವನ್ನು ಈಗಿರುವ ಶೇಕಡ 32.5ರಿಂದ ಶೇಕಡ 17.5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಡಿಟಿ) ತಿಳಿಸಿದೆ.

ವರ್ಷದಲ್ಲಿ ಶೇ. 46.15 ದರ ಏರಿಕೆ: ಜಾಗತಿಕ ವಹಿವಾಟು ಮತ್ತು ಸ್ಥಳೀಯ ಪೂರೈಕೆಯಲ್ಲಿನ ಹಿಡಿತದ ಕಾರಣ ಕಳೆದ ಒಂದು ವರ್ಷದಿಂದ ಖಾದ್ಯ ತೈಲದ ಧಾರಣೆ ಲೀಟರ್​ಗೆ ಸರಾಸರಿ 46.15ರಷ್ಟು ಏರಿಕೆ ಆಗಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಎಣ್ಣೆ ಮಿಲ್, ರಫ್ತು- ಆಮದು ದಾಸ್ತಾನುದಾರರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರಿಗೆ ದಾಸ್ತಾನು ಮಿತಿಯನ್ನು ಸರ್ಕಾರ ಕಳೆದ ವಾರ ವಿಧಿಸಿತ್ತು. ಈ ಮಿತಿ ಪ್ರಮಾಣವನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದು ಕೇಂದ್ರ ಆಹಾರ ಮತ್ತು ಪಡಿತರ ವಿತರಣೆ ಸಚಿವಾಲಯ ಹೇಳಿತ್ತು. ದೇಶದ ಒಟ್ಟಾರೆ ಖಾದ್ಯ ತೈಲ ಬಳಕೆಯಲ್ಲಿ ಶೇ. 60ರಷ್ಟು ಆಮದಾಗುತ್ತದೆ.

ಆಮದು ಸುಂಕದ ಹೊರೆಯನ್ನು ಇಳಿಸಿರುವ ಕಾರಣ, ಪ್ರಾದೇಶಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಲಿದೆ. ರೀಫೈನ್ಡ್ ತಾಳೆ ಎಣ್ಣೆಯ ಚಿಲ್ಲರೆ ಮಾರಾಟ ದರ ಲೀಟರಿಗೆ 8ರಿಂದ 9 ರೂಪಾಯಿ ಇಳಿಯಲಿದೆ. ಇದೇ ರೀತಿ ರೀಫೈನ್ಡ್ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ದರ ಲೀಟರಿಗೆ 12ರಿಂದ 15 ರೂಪಾಯಿ ಇಳಿಕೆಯಾಗಬಹುದು. | ಬಿ.ವಿ.ಮೆಹ್ತಾ ಸಾಲ್ವೆಂಟ್ ಎಕ್ಸ್​ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net