ನಿರೀಕ್ಷೆ ಹುಸಿಮಾಡಿದ ಬೊಮ್ಮಾಯಿ ಬಜೆಟ್: ಆಯವ್ಯಯದ ಮೇಲೆ ಚರ್ಚೆ, ಸಿದ್ದರಾಮಯ್ಯ ವಾಗ್ದಾಳಿ..

Siddaramaiah
Published on

ಬೆಂಗಳೂರು: ಜನರ ನಿರೀಕ್ಷೆಗೆ ವಿರುದ್ಧವಾಗಿರುವ ಬಜೆಟ್ ಇದು. ಹೊಸ ಸಿಎಂ ಬಂದಾಗ ಒಂದು ಆಶ್ವಾಸನೆ ಪಟ್ಟಿ ಇಡುವ ರೀತಿ ಇದೆ. ಅಭಿವೃದ್ಧಿಗೆ ಪೂರಕವಾಗಿಯೂ ಇಲ್ಲ, ಬೆಳವಣಿಗೆ ಪೂರಕವೂ ಅಲ್ಲ, ಮುಂದಿನ ಮುನ್ನೋಟವೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸದ ಬಜೆಟ್ ಅನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಇವರು ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಮೂರು ಹಣಕಾಸು ವರ್ಷ ಮುಗಿದಿದೆ. ಮಂಡಿಸಿರುವ ಬಜೆಟ್ ನಾಲ್ಕನೆಯದು. ಈ ವರೆಗಿನ ಅವಧಿಯಲ್ಲಿ ಏನು ಮಾಡಿದ್ದೇವೆ ಎಂದು ಎಲ್ಲೂ ಹೇಳಿಲ್ಲ. ಸಾಧನೆಗಳೇನು ಎಂದು ತಿಳಿಸಿಲ್ಲ ಎಂದು ಟೀಕಿಸಿದರು. ಬೊಮ್ಮಾಯಿ ಪ್ರಥಮ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ನಾನು ಇಟ್ಟುಕೊಂಡಿದ್ದೆ. ಆದರೆ ಬಜೆಟ್ ನಂತರ ಆ ಎಲ್ಲ ನಿರೀಕ್ಷೆ ಹುಸಿಯಾಗಿದೆ ಎಂದು ಬಹಳ ಬೇಸರದಿಂದ ಹೇಳುತ್ತಿದ್ದೇನೆ ಎಂದರು. ರಾಜ್ಯದ ಒಟ್ಟು ಸಾಲ 5,18,366 ಕೋಟಿ ರೂ., 3 ವರ್ಷಗಳಲ್ಲಿ ಸುಮಾರು ರೂ. 2,64,368 ಕೋಟಿ ಸಾಲ ಮಾಡಿದ್ದಾರೆ. ಈ ಸಾಲಕ್ಕೆ ಬಡ್ಡಿ ರೂಪದಲ್ಲೇ ಈ ವರ್ಷ ರೂ. 27,000 ಕೋಟಿ ರೂ.ಗೂ ಅಧಿಕ ಹಣ ಪಾವತಿ ಮಾಡಬೇಕಿದೆ. ಮುಂದಿನ ವರ್ಷ ಇದು 29,397 ಕೋಟಿ ರೂ. ಆಗಲಿದೆ. ಜತೆಗೆ ರೂ. 14,000 ಕೋಟಿ ಅಸಲು ಪಾವತಿಸಬೇಕಾಗುತ್ತದೆ. ಹೀಗೆ ಹೆಚ್ಚುತ್ತಾ ಹೋದರೆ ಅಭಿವೃದ್ಧಿ ಕಾರ್ಯ ಹೇಗೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು. ಕಳೆದ ಬಾರಿ ರಾಜ್ಯ ಸರ್ಕಾರದ ಬದ್ಧತಾ ವೆಚ್ಚ ಶೇ.102 ಇತ್ತು. ಅದನ್ನು ನಾನು ಟೀಕಿಸಿದ್ದೆ. ಹಾಗಾಗಿ ಈ ಬಾರಿ ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಯೋಜನೆ ಆಧಾರಿತ ಬದ್ಧ ವೆಚ್ಚ ಮತ್ತು ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಯೋಜನೆ ಆಧಾರಿತವಲ್ಲದ ಬದ್ಧ ವೆಚ್ಚ ಎಂದು ಎರಡು ಭಾಗ ಮಾಡಿ ಲೆಕ್ಕವೇ ಸಿಗದಂತೆ ಗೊಂದಲಮಯವಾಗಿಸಿದ್ದಾರೆ ಎಂದು ಅಧಿಕಾರಿಗಳ ಗ್ಯಾಲರಿ ನೋಡುತ್ತಾ ಅಸಮಾಧಾನ ಹೊರಹಾಕಿದರು.

ಕೇಂದ್ರದ ಯೋಜನೆಗಳಲ್ಲಿ ರಾಜ್ಯದ ಪಾಲು ಹೆಚ್ಚಾಗುತ್ತಿದೆ. 2012-13ರಲ್ಲಿ ರಾಜ್ಯದ ಪಾಲು ಶೇ.27 ಮತ್ತು ಕೇಂದ್ರದ ಪಾಲು ಶೇ.73 ಇತ್ತು. 2013-14 ಕೇಂದ್ರದ ಪಾಲು 75 ಇದ್ದಿದ್ದು, 2014-15 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಪಾಲು ಶೇ.40ಕ್ಕೆ ಏರಿತು. 2018-19ರಲ್ಲಿ ರಾಜ್ಯದ ಪಾಲು ಶೇ.57ಕ್ಕೆ ಹೆಚ್ಚಾಯಿತು, ಕಳೆದ ಸಾಲಿನಲ್ಲಿ ರಾಜ್ಯದ ಪಾಲು ಶೇ.55 ಇದ್ದಿದ್ದು, ಈ ಸಾಲಿನಲ್ಲಿ ರಾಜ್ಯದ ಪಾಲು ಶೇ.49.85, ಕೇಂದ್ರದ ಪಾಲು 50.15 ಇದೆ ಎಂದು ವಿವರಿಸಿದರು. ಕರ್ನಾಟಕ ರಾಜ್ಯವೊಂದರಿಂದಲೇ ಕೇಂದ್ರ ಸರ್ಕಾರ ವಿವಿಧ ರೀತಿಯ ತೆರಿಗೆ ರೂಪದಲ್ಲಿ ಸುಮಾರು ರೂ. 3 ಲಕ್ಷ ಕೋಟಿ ರೂ.ಗಳನ್ನು ವಾರ್ಷಿಕವಾಗಿ ಸಂಗ್ರಹಿಸುತ್ತದೆ. ನಮ್ಮ ಪಾಲಿನ ತೆರಿಗೆಯಲ್ಲಿ ಶೇ.42 ಪಾಲು ನಮಗೆ ಕೊಡುವುದಾದರೆ 1,26,000 ಕೋಟಿ ರೂ. ನಮ್ಮ ರಾಜ್ಯಕ್ಕೆ ಕೇಂದ್ರ ಕೊಡಬೇಕು. ಆದರೆ ಅವರು ಕೊಡುತ್ತಿರುವುದು 44,000 ಕೋಟಿ ರೂ. ಮಾತ್ರ ಎಂದರು.

ಸಿದ್ದು ನೀಡಿದ ಎಚ್ಚರಿಕೆ

  1. ಈಗ ರಾಜಸ್ವ ಕೊರತೆಯ ಬಜೆಟ್ ಮಂಡಿಸಿದ್ದಾರೆ, ಈ ಕೊರತೆಯಾದ ಹಣವನ್ನು ಸಾಲದ ಮೂಲಕ ತೀರಿಸಬೇಕು. ಅಂದರೆ ಇದು ಸಾಲ ಮಾಡಿ ಹೋಳಿಗೆ ತಿಂದಂತಾಗುತ್ತೆ.
  2. ವರ್ಷಕ್ಕೆ ಅಸಲು, ಬಡ್ಡಿ ರೂಪದಲ್ಲಿ 43,000 ಕೋಟಿ ರೂ.ಗೂ ಅಧಿಕ ಹಣ ಪಾವತಿಸಬೇಕು. 2025-26ನೇ ಸಾಲಿಗೆ ಬಡ್ಡಿ ರೂಪದಲ್ಲೇ 42,789 ಕೋಟಿ ರೂ. ಪಾವತಿ ಮಾಡಬೇಕಾಗುತ್ತದೆ.
  3. ಒಂದೆಡೆ ಸಾಲ ಏರಿಕೆಯಾಗುತ್ತಿದೆ, ಇನ್ನೊಂದೆಡೆ ರಾಜ್ಯದ ಜಿಎಸ್​ಡಿಪಿ ಕಡಿಮೆಯಾಗುತ್ತಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ?
  4. ಸಾಲದ ಹಣವನ್ನು ಸಾಲದ ಬಡ್ಡಿ, ಅಸಲು ಕಟ್ಟಲು, ರಾಜಸ್ವ ಕೊರತೆ ಸರಿದೂಗಿಸಲು ಬಳಕೆ ಮಾಡಿದರೆ ರಾಜ್ಯ ಬೆಳವಣಿಗೆಯ ಹಾದಿಯಲ್ಲಿ ಮುಂದೆ ಸಾಗುತ್ತದೋ?
  5. 2023-24 ಕ್ಕೆ ರಾಜಸ್ವ ಕೊರತೆ 40,568 ಕೋಟಿ ರೂ. ಆಗುತ್ತದೆ. ರಾಜಸ್ವ ಸ್ವೀಕೃತಿ ಹೆಚ್ಚು ಮಾಡಿಕೊಳ್ಳದೆ ಹೋದರೆ ಈ ಕೊರತೆ ಸರಿದೂಗಿಸಲು ಮತ್ತೆ ಸಾಲ ಮಾಡಬೇಕಾಗುತ್ತೆ.

ಸಿಎಂ ಮೇಲೆ ಆರ್​ಎಸ್​ಎಸ್ ಪ್ರಭಾವ ಗಾಢ: ಬಜೆಟ್ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿಯವರ ಮೇಲೆ ಆರ್​ಎಸ್​ಎಸ್ ಪ್ರಭಾವದ ಕುರಿತು ಕುತೂಹಲದ ಚರ್ಚೆ ನಡೆಯಿತು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಬಜೆಟ್ ಮಂಡಿಸಿದ ಬಸವರಾಜ ಬೊಮ್ಮಾಯಿಗೆ ಅವರ ತಂದೆ ಎಸ್.ಆರ್.ಬೊಮ್ಮಾಯಿ ಪ್ರಭಾವ ಇದೆ ಎಂಬುದು ನನ್ನ ಅನಿಸಿಕೆ. ಬಜೆಟ್ ನೋಡಿದ ಮೇಲೆ ಆ ಪ್ರಭಾವ ಆರ್​ಎಸ್​ಎಸ್​ನವರ ಪ್ರಭಾವದ ಮುಂದೆ ಸೋತಿದೆ ಎಂದು ಅನಿಸಿದೆ ಎಂದರು.

2008ರವರೆಗೂ ಬೊಮ್ಮಾಯಿಯವರಿಗೆ ಆರ್​ಎಸ್​ಎಸ್ ಸಂಪರ್ಕ ಇರಲಿಲ್ಲ, ನಂತರ ಬಿಜೆಪಿಗೆ ಹೋಗಿ, ಜಲಸಂಪನ್ಮೂಲ ಸಚಿವರಾಗಿ, ಗೃಹ ಸಚಿವರಾಗಿ ಈಗ ಸಿಎಂ ಆಗಿದ್ದಾರೆ. ಅವರಿಂದ ಬಹಳ ನಿರೀಕ್ಷೆ ಹೆಚ್ಚು ಮಾಡಿದ್ದೆ. ಯಡಿಯೂರಪ್ಪ ದಾರಿ ಬಿಟ್ಟುಬೇರೆ ದಾರಿಯಲ್ಲಿ ಹೋಗುತ್ತಾರೆಂದು ಭಾವಿಸಿದ್ದೆ. ಆದರೆ ಆರ್​ಎಸ್​ಎಸ್, ಬಿಜೆಪಿ ಸಿದ್ಧಾಂತ ಪ್ರಭಾವ ಜಾಸ್ತಿ ಇದೆ ಎಂದರು. ನಾನು, ಯಡಿಯೂರಪ್ಪ ಎಲ್ಲ ಆರ್​ಎಸ್​ಎಸ್. ಬೊಮ್ಮಾಯಿ ಅವರು ಈಗ ನಮಗಿಂತ ಜಾಸ್ತಿ ಆರ್​ಎಸ್​ಎಸ್ ಆಗಿದ್ದಾರೆಂದು ಸಿಎಂ ಕಡೆ ಕೈ ತೋರಿಸಿ ಆರ್.ಅಶೋಕ್ ಹೇಳಿದರು. ಅಶೋಕ್ ಅಭಿಪ್ರಾಯಕ್ಕೆ, ಆಬ್ಸಲ್ಯೂಲ್ಟಿ ಕರೆಕ್ಟ್ ಎಂದು ಸಿದ್ದರಾಮಯ್ಯ ಎಂದು ಷರಾ ಬರೆದರು. ಮಾತು ಮುಂದುವರಿಸಿದ ಅಶೋಕ್, ಆರ್​ಎಸ್​ಎಸ್ ಸಂಸ್ಕಾರ ಕೊಡುವ ಸಂಸ್ಥೆ. ಅದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ಅಲ್ಲಿಂದ ಬಂದುವರು ಒಳ್ಳೆಯ ಬಜೆಟ್ ಮಾಡಿದ್ದಾರೆಂದೇ ಅರ್ಥ ಎಂದು ಚರ್ಚೆಗೆ ನಿಲುವನ್ನು ಸಮರ್ಥಿಸಿಕೊಂಡರು. ಆರ್​ಎಸ್​ಎಸ್ ಮೂಲದಿಂದ ಬಂದ ನಿಮಗ್ಯಾರಿಗೂ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿಲ್ಲ. ಎಂದು ಸಿದ್ದರಾಮಯ್ಯ ಅಶೋಕ್​ರ ಕಾಲೆಳೆದರು. ತಿರುಗೇಟು ನೀಡಿದ ಅಶೋಕ್, ನೀವು ಜನತಾದಳದಿಂದ ಬಂದು ಸಿಎಂ ಆಗಿದ್ದಲ್ವಾ? ಎಂದು ನಗುನಗುತ್ತಲೇ ಸಿದ್ದರಾಯ್ಯರನ್ನು ಚಿವುಟಿದರು.

ಅಶೋಕ್​ಗೆ ನೀರು ಕೊಡಿ!: ‘ಏಯ್ ಯಾರಪ್ಪ, ಇಲ್ಲಿ ಅಶೋಕ್​ಗೆ ನೀರು ಕೊಡಿ!’ ಎಂಬ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕಂದಾಯ ಸಚಿವರನ್ನು ಗೇಲಿ ಮಾಡಿದ ಪ್ರಸಂಗ ನಡೆಯಿತು. ಸಿದ್ದರಾಮಯ್ಯ ಬಜೆಟ್ ಮೇಲಿನ ಭಾಷಣ ಆರಂಭಿಸುತ್ತಿದ್ದಂತೆ ಸಚಿವ ಮುನಿರತ್ನ, ಆರ್.ಅಶೋಕ್ ಎದ್ದು ಹೊರಟಿದ್ದರು. ಇದನ್ನು ಗಮನಿಸಿದ ಸಿದ್ದರಾಮಯ್ಯ, ನಿಮ್ಮ ಸಿಎಂ ಬಜೆಟ್ ಮಂಡಿಸುವಾಗ ನಾವೆಲ್ಲ ಗಮನ ಇಟ್ಟು ಕೇಳಿದ್ದೇವೆ, ನಾವು ಮಾತನಾಡುವ ಓಡಾಡಿದರೆ ಹೇಗೆ, ಕುಳಿತುಕೊಂಡು ಕೇಳಬಹುದಲ್ಲವೇ ಎಂದು ಚಿವುಟಿದರು. ಪ್ರತಿಕ್ರಿಯೆ ನೀಡಿದ ಅಶೋಕ್, ನೀವು ಭಾಷಣ ಮಾಡಿ, ನಾನು ಕೇಳುತ್ತೇನೆ. ನೀರು ಕುಡಿಯೋಣ ಎಂದು ಹೊರಟೆ ಎಂದು ನೆಪ ಹೇಳಿದರು. ನೀರು ಇಲ್ಲಿಗೆ ತರಿಸಿ ಕುಡಿಯಬಹುದಲ್ವಾ, ಏಯ್ ನೀರು ಕೊಡಪ್ಪ ಅಶೋಕ್ ಅವರಿಗೆ ಎಂದು ಸಿದ್ದರಾಮಯ್ಯ ಅಲ್ಲಿದ್ದ ದಲಾಯತರಿಗೆ ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು. ವಿಚಾರ ಇಷ್ಟಕ್ಕೆ ನಿಲ್ಲಲು ಬಿ.ಎಸ್ ಯಡಿಯೂರಪ್ಪ ಬಿಡಲಿಲ್ಲ. ನೀರು ಇಲ್ಲ ಮತ್ತೊಂದು ಇಲ್ಲ, ನೀವು ಹೇಳಿದ ಮೇಲೆ ಇಲ್ಲಿ ಹೋಗಿ ಕುಳಿತಿದ್ದಾರೆ. ನೀವು ಹೇಳಲಿಲ್ಲ ಎಂದಿದ್ದರೆ ಎದ್ದು ಹೋಗುತ್ತಿದ್ದರು ಎಂದು ಹೇಳಿದಾಗ ಮತ್ತೆ ಸದನದಲ್ಲಿ ನಗು ಉಕ್ಕಿಬಂತು.

ಒಳಗಷ್ಟೇ ರಾಜಕೀಯ: ಬಜೆಟ್ ಮೇಲೆ ಚರ್ಚೆ ಆರಂಭಿಸಿದ ಸಿದ್ದರಾಮಯ್ಯ ಅವರನ್ನು ಸ್ಪೀಕರ್ ‘ಸ್ನೇಹ- ರಾಜಕೀಯ’ದ ಚರ್ಚೆಗೆ ಹೊರಳಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಸ್ನೇಹಿತರಾದ ಬಸವರಾಜ ಬೊಮ್ಮಾಯಿ ಎಂದು ಮಾತು ಆರಂಭಿಸಿದ್ದೀರಿ, ಈಗ ಬೇರೆ ರೀತಿ ಮಾತನಾಡುತ್ತಿದ್ದೀರಿ, ಸ್ನೇಹ ಎಂತಹದ್ದು ಎಂದು ಸ್ಪೀಕರ್ ಹಾಸ್ಯ ಮಾಡಿದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸ್ನೇಹ ಬೇರೆ, ರಾಜಕೀಯ ಬೇರೆ. ನನಗೂ ನಿಮಗೆ ಸ್ನೇಹ ಇದೆ. ವೈಚಾರಿಕ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಆದರೆ, ಮನುಷ್ಯದ ಸ್ನೇಹ ಇದೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನೀವು ನನ್ನನ್ನು ಪ್ರೀತಿಸುತ್ತೀರಿ. ಅದು ಮುಂದುವರಿಯುತ್ತದೆ ಎಂದರು. ಅದೇ ರೀತಿ ಹೊರಗಡೆ ಸಿಕ್ಕಾಗ ಬೊಮ್ಮಾಯಿ ಜತೆ ಬೇರೆ ರೀತಿ ಮಾತನಾಡುತ್ತೇನೆ, ಇಲ್ಲಿ ರಾಜಕೀಯವಾಗಿ ಮಾತನಾಡಲೇ ಬೇಕಲ್ಲ ಎಂದು ಹೇಳಿದರು. ಬಜೆಟ್ ನೋಡಿ ನೋವು ಎಂದು ಹೇಳಲೇ ಇಲ್ಲ, ಬೇಸರ ಎಂದು ಹೇಳಿದ್ದೇನೆ ಎಂದು ತಮ್ಮ ದಾಟಿಯನ್ನು ಸ್ಪಷ್ಟಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net