ಧಾರವಾಡ: ಇತಿಹಾಸವನ್ನು ಪುನರ್ ರಚಿಸುವಲ್ಲಿ ನಮಗೆ ನಾಣ್ಯಗಳು ಪ್ರಮುಖ ಆಕರಗಳಾಗಿವೆ. ವಿದ್ಯಾರ್ಥಿಗಳು ನಾಣ್ಯಗಳ ಆಳವಾದ ಅಧ್ಯಯನ ಮಾಡಬೇಕು. ಆಗ ಮಾತ್ರ ಒಂದು ಪ್ರದೇಶದ ಸಂಸ್ಕೃತಿ ಅರಿಯಲು ಸಾಧ್ಯ ಎಂದು ಕೆ.ಇ. ಬೋರ್ಡ್ ಕಾಲೇಜು ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ್ ಹೇಳಿದರು.
ನಗರದ ಕೆ.ಇ. ಬೋರ್ಡ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಪ್ರಾಚೀನ ಕಾಲದ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದ ನಾಣ್ಯಗಳು ಮತ್ತು ನೋಟುಗಳ ಅಧ್ಯಯನದಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ಬೆಳೆಸಿಕೊಂಡು ಇತಿಹಾಸ ಹಾಗೂ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಕಾಲೇಜು ಆಡಳಿತ ಕಾಯÁðಧ್ಯಕ್ಷ ಡಾ. ಸುನೀಲ ಪುರೋಹಿತ್ ಮಾತನಾಡಿ, ಹಳೆಯ ಕಾಲದ ಸಮಾಜ ಹಾಗೂ ಸಂಸ್ಕೃತಿ ಅರಿಯಲು ಇತಿಹಾಸ ತಾಯಿಬೇರು ಇದ್ದಂತೆ. ಪ್ರತಿಯೊಂದು ವಿಷಯವೂ ಚರಿತ್ರೆ ಹೊಂದಿರುತ್ತದೆ ಎಂದರು.
ಕಾಲೇಜು ಪ್ರಾಚಾರ್ಯ ಪ್ರೊ. ಎಂ.ಎ. ಸಿದ್ಧಾಂತಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೆ.ಎಸ್. ಮಡಿವಾಳರ ಸ್ವಾಗತಿಸಿದರು. ಪ್ರೊ. ಶಿವು ಗಾಯಕವಾಡ ವಂದಿಸಿದರು.