

ಪಿರಿಯಾಪಟ್ಟಣ: ಸ್ವಯಂ ಲಾಕ್‌ಡೌನ್‌ನಿಂದ ಹೋಟೆಲ್, ಬೇಕರಿ ಸೇರಿದಂತೆ ಮತ್ತಿತರ ವ್ಯಾಪಾರಕ್ಕೆ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಶನಿವಾರ ಶಾಸಕ ಕೆ.ಮಹದೇವ್ ಅವರಿಗೆ ಪಟ್ಟಣದ ವ್ಯಾಪಾರಸ್ಥರು ಮನವಿ ಸಲ್ಲಿಸಿದರು.
ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆವರೆಗೆ ವಹಿವಾಟು ನಡೆಸಿ ನಂತರ ಅಂಗಡಿ-ಮುಂಗಟ್ಟು ಮುಚ್ಚಬೇಕು ಎಂದು ಶಾಸಕ ಕೆ.ಮಹದೇವ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದಕ್ಕೆ ಕೆಲವು ವರ್ತಕರ ಸಂಘಗಳು ಸ್ವಯಂ ಪ್ರೇರಿತರಾಗಿ ಒಪ್ಪಿಗೆ ಸೂಚಿಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿತ್ತು.
ಇದರಿಂದ ಆತಂಕಗೊಂಡ ಪಟ್ಟಣದ ಹೋಟೆಲ್ ಉದ್ಯಮಿಗಳು, ಬೇಕರಿ ಅಂಗಡಿಗಳ ಮಾಲೀಕರು, ರಸ್ತೆ ಬದಿ ವ್ಯಾಪಾರಸ್ಥರು, ಕ್ಷೌರಿಕ ಅಂಗಡಿಯವರು ಸೇರಿದಂತೆ ವಿವಿಧ ರೀತಿಯ ವ್ಯಾಪಾರಸ್ಥರು ಪಟ್ಟಣದ ವೈದ್ಯೇಶ್ವರ ದೇವಸ್ಥಾನ ಮುಂಭಾಗ ಶನಿವಾರ ಸಭೆ ಸೇರಿದ್ದರು.
ತಾಲೂಕು ಆಡಳಿತದ ಈ ದಿಢೀರ್ ನಿರ್ಧಾರದಿಂದಾಗಿ ನಮ್ಮ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ನಾವೆಲ್ಲರೂ ಮತ್ತೊಮ್ಮೆ ಅರ್ಧ ದಿನ ವ್ಯಾಪಾರ ನಡೆಸಿದಲ್ಲಿ ಕುಟುಂಬದ ನಿರ್ವಹಣೆ ಕಷ್ಟವಾಗಲಿದೆ ಎಂಬ ಅಭಿಪ್ರಾಯಕ್ಕೆ ಬಂದರು. ಅಲ್ಲದೆ ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಬೇಕೆಂಬ ತೀರ್ಮಾನಿಸಿ, ಶಾಸಕ ಕೆ.ಮಹದೇವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಶಾಸಕ ಕೆ.ಮಹದೇವ್, ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಸಹಕರಿಸಬೇಕು. ಹೋಟೆಲ್ ಮತ್ತು ಬೇಕರಿ ಮಧ್ಯಾಹ್ನ ಮೂರು ಗಂಟೆವರೆಗೆ ಸೇವೆ ನೀಡಬೇಕು. ಬಳಿಕ ಸಂಜೆ ಏಳು ಗಂಟೆವರೆಗೆ ಪಾರ್ಸಲ್ ನೀಡಬೇಕು ಎಂದು ಸೂಚಿಸಿದರು. ಶಾಸಕರ ಸೂಚನೆಯನ್ನು ಒಪ್ಪಿಕೊಂಡ ವ್ಯಾಪಾರಸ್ಥರು ಅಲ್ಲಿಂದ ನಿರ್ಗಮಿಸಿದರು.
ತಹಸೀಲ್ದಾರ್ ಶ್ವೇತಾ.ಎನ್.ರವೀಂದ್ರ, ಹೋಟೆಲ್ ಉದ್ಯಮಿಗಳಾದ ಹರಿಪ್ರಿಯಾ ಕುಮಾರ್, ಶಂಕರ್ , ರಮೇಶ್, ಜಯಸ್ವಾಮಿ, ಉಮೇಶ್, ಶಿವಕುಮಾರ್, ಮಹದೇವ ಮತ್ತಿತರರು ಉಪಸ್ಥಿತರಿದ್ದರು.