

ಬೆಂಗಳೂರು: ಅಕ್ರಮ, ನಕಲಿ ಮದ್ಯ ವಹಿವಾಟು, ಸೋರಿಕೆ ನಿಯಂತ್ರಣದಿಂದಾಗಿ ಅಬಕಾರಿ ಮೂಲದಿಂದ ಮೊದಲೆರಡು ತ್ರೈಮಾಸಿಕದಲ್ಲಿ ನಿರೀಕ್ಷೆಗೆ 68.76 ಕೋಟಿ ರೂ. ಹೆಚ್ಚುವರಿ ಆದಾಯ ರಾಜ್ಯದ ಬೊಕ್ಕಸಕ್ಕೆ ಜಮೆಯಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾಹಿತಿ ನೀಡಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡು, ಪಾರದರ್ಶಕತೆ ಹಾಗೂ ದಕ್ಷತೆಗೆ ಒತ್ತು ನೀಡಲಾಗಿದೆ ಎಂದರು.
ಮೊದಲ ಎರಡು ತ್ರೈಮಾಸಿಕದಲ್ಲಿ 16,290 ಕೋಟಿ ರೂ. ಆದಾಯ ಸಂಗ್ರಹ ನಿರೀಕ್ಷೆಗೆ ಎದುರಾಗಿ 16,358.76 ಕೋಟಿ ರೂ. ಸಂಗ್ರಹವಾಗಿದೆ. ಇಲಾಖೆ ಅಧಿಕಾರಿಗಳು ದಕ್ಷತೆಯ ಕೆಲಸಕ್ಕೆ ನಿದರ್ಶನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜವಾಬ್ದಾರಿ ಮರೆತು, ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣ 31 ಎ ದರ್ಜೆ, 20 ಬಿ ದರ್ಜೆ ಹಾಗೂ 40 ಅಬಕಾರಿ ಅಧೀಕ್ಷಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ವಿವರಿಸಿದರು.
ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಗಿಗಳನ್ನು ಎಸ್.ಬಂಗಾರಪ್ಪ ಆಡಳಿತಾವಧಿಯಲ್ಲಿ ನೀಡಿದ್ದೇ ಕೊನೆ ಮತ್ತೆಂದೂ ನೀಡಿಲ್ಲ. ಈಗ ನಿಷ್ಕ್ರಿಯವಾಗಿರುವ ಪರವಾನಗಿಗಳನ್ನು ಮರು ಹರಾಜು ಹಾಕುವ ಚಿಂತನೆ ನಡೆದಿದ್ದು, ಹೊಸ ಪರವಾನಗಿ ಎಂಬ ವ್ಯಾಖ್ಯಾನ ಬೇಡವೆಂದರು.
ಇಲಾಖೆಯ ಸಿಎಲ್-2 (ಚಿಲ್ಲರೆ ವ್ಯಾಪಾರ), ಸಿಎಲ್-11ಸಿ (ಮಾರಾಟ ಮಳಿಗೆ) ಸೇರಿ ಒಟ್ಟು 571 ಪರವಾನಗಿಗಳು ನಿಷ್ಕ್ರಿಯವಾಗಿದ್ದು, ಹರಾಜು ಮೂಲಕ ನೀಡಲೆಂದು ನಿಯಮಗಳಿಗೆ ತಿದ್ದುಪಡಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಆರ್.ಬಿ.ತಿಮ್ಮಾಪುರ ತಿಳಿಸಿದರು.
ಇಲಾಖೆಯಲ್ಲಿ ಭ್ರಷ್ಟಾಚಾರ ನಿಯಂತ್ರಿಸಿ ಪಾರದರ್ಶಕತೆ ತರಲು ಸಾಕಷ್ಟು ಬದಲಾವಣೆ ಮಾಡಿದ್ದು, ಮೊದಲ ಬಾರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಗ್ರಾಹಕರು, ಮದ್ಯ ಮಾರಾಟ ಮಾಡುವವರು ಹಾಗೂ ಸರ್ಕಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ.
ಈ ಪೈಕಿ ಡಿಜಿಟಲ್ ವ್ಯವಸ್ಥೆ ಜಾರಿಗೆ ಆದ್ಯತೆ ನೀಡಲಾಗಿದೆ. ಪ್ರತಿ ವರ್ಷ ಬದಲು ಐದು ವರ್ಷಕ್ಕೊಮ್ಮೆ ಪರವಾನಗಿ ನವೀಕರಣ, ಅದೂ ಆನ್‌ಲೈನ್ ಮುಖಾಂತರ ಅವಕಾಶ ಕಲ್ಪಿಸಲಾಗಿದೆ. ಭ್ರಷ್ಟಾಚಾರದ ದೂರು ಕೊನೆಗಾಣಿಸಲು ಸಿಎಲ್-7 ಲೈಸನ್ಸ್ ನೀಡುವ ಹಂತಗಳನ್ನು ಕಡಿತಗೊಳಿಸಲಾಗಿದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಆಡಳಿತ ಸುಧಾರಣಾ ಆಯೋಗದ ಒಟ್ಟು 62 ಶಿಫಾರಸ್ಸುಗಳ ಬಗ್ಗೆ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜತೆ ಸಭೆ ನಡೆಸಿ ಶೇ. 95 ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಿದ್ದು, ಈ ಪೈಕಿ 13 ಶಿಫಾರಸ್ಸುಗಳು ಅನುಷ್ಠಾನವಾಗಿದ್ದರೆ, 49 ಶಿಫಾರಸ್ಸುಗಳು ಅನುಷ್ಠಾನದ ಹಂತದಲ್ಲಿವೆ ಎಂದು ತಿಳಿಸಿದರು.
ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರೀಮಿಯಂ ಮದ್ಯ ಮಾರಾಟ ದರ ಸ್ವಲ್ಪಮಟ್ಟಿಗೆ ಜಾಸ್ತಿಯಿದೆ ಎಂದು ಒಪ್ಪಿಕೊಂಡ ಸಚಿವರು, ಮಹಾರಾಷ್ಟ್ರ, ಗೋವಾ ರಾಜ್ಯಗಳ ಅಕ್ರಮ ಮದ್ಯ ಸಾಗಣೆ ಮೇಲೆ ಹದ್ದಿನಗಣ್ಣಿಡಲು ಸೂಚಿಸಲಾಗಿದೆ.
ಗಡಿಭಾಗದ ಚೆಕ್‌ಪೋಸ್ಟ್‌ಗಳ ಸಿಬ್ಬಂದಿಯನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಿಸುತ್ತಿರಬೇಕು ಎಂದು ಆಯುಕ್ತರಿಗೆ ನಿರ್ದೇಶಿಸಿದ್ದು, ಡ್ರಗ್ಸ್, ಗಾಂಜಾ ಮತ್ತು ಸಿ.ಎಚ್.ಪೌಡರ್ ಬಳಸಿ ನಕಲಿ ಮದ್ಯ ತಯಾರಿಕೆಯನ್ನು ನಿಯಂತ್ರಿಸಲು ಕ್ರಮವಹಿಸಲಾಗಿದೆ.
ಯುವಕರ ಆರೋಗ್ಯ, ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್‌ಗೆ ಕಡಿವಾಣ ಹಾಕಬೇಕು. ಎನ್‌ಡಿಪಿಎಸ್ ಕಾಯ್ದೆ ಸಮರ್ಪಕ, ಮತ್ತಷ್ಟು ಪರಿಣಾಮವಾಗಿ ಜಾರಿಗೊಳಿಸಲು ಸಭೆಯಲ್ಲಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.