

| ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯ ಅಬಕಾರಿ ಇಲಾಖೆ ನೂತನವಾಗಿ ಪರಿಚಯಿಸಿರುವ ಸಾಫ್ಟ್ವೇರ್ ಕೈಕೊಟ್ಟ ಪರಿಣಾಮ ಕಳೆದ 5 ದಿನಗಳಿಂದ ವೈನ್ಶಾಪ್ ಮಾಲೀಕರು ಫಜೀತಿಗೀಡಾಗಿದ್ದಾರೆ. ವೈನ್ಶಾಪ್ ಅಥವಾ ಬಾರ್ಗೆ ಬೇಕಾದ ಮದ್ಯವನ್ನು ತಾವೇ ಆನ್ಲೈನ್ ಮೂಲಕ ದಾಸ್ತಾನು ಬುಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಇಲಾಖೆ ಇದಕ್ಕೆ www.excisepayment.kar.nic.in ತಂತ್ರಾಂಶ ಅಭಿವೃದ್ಧಿಪಡಿಸಿ ಏ.1ರಿಂದ ಜಾರಿಗೆ ತಂದಿತ್ತು. ಆದರೆ ತಂತ್ರಾಂಶ ಕೈಕೊಟ್ಟಿದ್ದರಿಂದಾಗಿ ಮಾಲೀಕರು ‘ಎಣ್ಣೆ’ಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತಾಗಿದೆ.
ಸಮಸ್ಯೆ ಏನು?: ರಾಜ್ಯದ ಎಲ್ಲ ಬಾರ್ಗಳಿಗೂ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್ಬಿಸಿಎಲ್)ದ ಮೂಲಕವೇ ಮದ್ಯ ಪೂರೈಕೆಯಾಗುತ್ತದೆ. ಈ ಮೊದಲು ಬಾರ್ನವರು ಅಗತ್ಯವಿರುವ ಮದ್ಯವನ್ನು ಫೋನ್ ಮೂಲಕ ಆರ್ಡರ್ ಮಾಡಿ, ಬ್ಯಾಂಕ್ನಲ್ಲಿ ಹಣ ಪಾವತಿಸಿದ ತಕ್ಷಣ ಪೂರೈಕೆಯಾಗುತ್ತಿತ್ತು.
ಬಾರ್ ಮಾಲೀಕರು ಕುಳಿತಲ್ಲಿಯೇ ಮದ್ಯ ಆರ್ಡರ್ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಕೆಎಸ್ಬಿಎಸಿಎಲ್ ತಂತ್ರಾಂಶವನ್ನು ಜಾರಿಗೆ ತಂದಿದೆ. ಇದಕ್ಕಾಗಿ ಪರವಾನಗಿ ಹೊಂದಿರುವ ಪ್ರತಿ ವೈನ್ ಶಾಪ್ ಮತ್ತು ಬಾರ್ ಮಾಲೀಕರಿಗೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಸಹ ನೀಡಲಾಗಿದೆ.
ಇದರ ಮೂಲಕ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯೊಳಗೆ ಬಾರ್ಗಳು ಮದ್ಯ ಆರ್ಡರ್ ಮಾಡಬೇಕು. ಬಳಿಕ ಹಣ ಪಾವತಿಸಿ, ಮದ್ಯ ಪಡೆದುಕೊಳ್ಳಬೇಕು. ಆದರೆ, ತಂತ್ರಾಂಶ ಕೈಕೊಟ್ಟ ಕಾರಣದಿಂದಾಗಿ ಇಡೀ ರಾಜ್ಯದಲ್ಲಿ ಪ್ರತಿದಿನ 5-6 ಬೇಡಿಕೆ (ಇಂಡೆಂಟ್)ಗಳು ಮಾತ್ರ ದೊರೆಯುತ್ತಿವೆ. ಬೇಡಿಕೆ ದೊರೆತರೂ ಸಾಗಾಟಕ್ಕೆ ಪರವಾನಗಿ ದೊರೆಯದ ಕಾರಣದಿಂದಾಗಿ ಮದ್ಯ ತುಂಬಿದ ಲಾರಿಗಳು ಕೆಎಸ್ಬಿಸಿಎಲ್ನ ದಾಸ್ತಾನು ಮಳಿಗೆ ಬಳಿಯೇ ಪರಿವಾನಗಿಗಾಗಿ ಕಾಯುತ್ತಾ ಕುಳಿತುಕೊಳ್ಳುವಂತಾಗಿದೆ.
5 ದಿನ, 370 ಕೋಟಿ ರೂ. ನಷ್ಟ: ವಾರ್ಷಿಕ 27 ಸಾವಿರ ಕೋಟಿ ರೂ. ಆದಾಯ ಹೊಂದಿರುವ ಅಬಕಾರಿ ಇಲಾಖೆಗೆ ಕಳೆದ 5 ದಿನಗಳಿಂದ ಸುಮಾರು 370 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಆದರೆ, ಅಧಿಕಾರಿಗಳು ಇದನ್ನು ಅಲ್ಲಗಳೆಯುತ್ತಾರೆ. ಸದ್ಯಕ್ಕೆ ಸಾಫ್ಟ್್ಟೇರ್ ಸಮಸ್ಯೆಯಿಂದಾಗಿ ವಿತರಣೆಯಲ್ಲಿ ವಿಳಂಬವಾಗಿದೆ. ಆದರೆ, ಎಲ್ಲಿಯೂ ಮದ್ಯದ ಕೊರತೆ ಇಲ್ಲ. ಹೀಗಾಗಿ ನಷ್ಟದ ಮಾತೇ ಇಲ್ಲ ಎನ್ನುತ್ತಾರೆ. ಆದರೆ ಮಾಲೀಕರು ಹೇಳುವುದೇ ಬೇರೆ, ಬಹುತೇಕ ಬಾರ್ಗಳಲ್ಲಿ ಮದ್ಯ ಸಿಗುತ್ತಿಲ್ಲ. ರಾಜ್ಯದ ವಿವಿಧೆಡೆ ಕೂಡ ಇದೇ ಪರಿಸ್ಥಿತಿ ಇದೆ. ಸಮಸ್ಯೆ ಬಗೆಹರಿಯದಿದ್ದರೆ, ಇನ್ನೆರಡು ದಿನದಲ್ಲಿ ರಾಜ್ಯದ ಎಲ್ಲ ಬಾರ್ಗಳು ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ತಂತ್ರಾಂಶ ಹೊಸದಾಗಿರುವ ಕಾರಣ ಪೂರೈಕೆಯಲ್ಲಿ ವಿಳಂಬವಾಗಿದೆ ಹೊರತು ನಷ್ಟವಾಗಿಲ್ಲ. ರಾಜ್ಯಮಟ್ಟದಲ್ಲಿ ತಂತ್ರಾಂಶದಲ್ಲಿನ ದೋಷ ಪರಿಹಾರ ಕಾರ್ಯ ನಡೆದಿದೆ. | ನಿರ್ಮಲಾ ಉಪ ಆಯುಕ್ತೆ, ಅಬಕಾರಿ ಇಲಾಖೆ, ರಾಮನಗರ ವೆಬ್ ಇಂಡೆಂಟಿಂಗ್ ಮೂಲಕ ಮದ್ಯ ಖರೀದಿಸಲು ಕೆಎಸ್ಬಿಸಿಎಲ್ ಆದೇಶ ಮಾಡಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಹೊಸ ಪದ್ಧತಿಯಲ್ಲಿ ಮದ್ಯ ಖರೀದಿಸಲು ಸನ್ನದುದಾರರಿಗೆ ತೊಂದರೆ ಆಗುತ್ತಿದೆ. ಇದನ್ನು ಖಂಡಿಸಿ ರಾಜ್ಯದ ಎಲ್ಲ ಡಿಪೋದಲ್ಲೂ ಬುಧವಾರ ಪ್ರತಿಭಟನೆ ನಡೆಸುತ್ತೇವೆ. | ಬಿ.ಗೋವಿಂದರಾಜ ಹೆಗ್ಡೆ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ
ಪ್ರತಿಭಟನೆಗೆ ನಿರ್ಧಾರ: ಇನ್ನೊಂದೆಡೆ, ತಮ್ಮಿಷ್ಟದ ಬ್ರಾ್ಯಂಡ್ ದೊರೆಯದೆ ಮದ್ಯಪ್ರಿಯರೂ ಕಂಗಾಲಾಗಿದ್ದಾರೆ. ಬೇಸಿಗೆಯಲ್ಲಿ ಬಿಯರ್ ವಹಿವಾಟು ಹೆಚ್ಚಿದ್ದು, ಕಳೆದ 2 ದಿನಗಳಿಂದ ಇದಕ್ಕೆ ಹೊಡೆತ ಬಿದ್ದಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಮದ್ಯವೂ ದೊರೆಯದೆ ಬಡ ಮತ್ತು ಮಧ್ಯಮ ವರ್ಗದ ಪಾನಪ್ರಿಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಬುಧವಾರ ವೈನ್ಶಾಪ್ ಮಾಲೀಕರು ಕೆಬಿಎಸ್ಸಿಎಲ್ ದಾಸ್ತಾನು ಮಳಿಗೆ ಎದುರು ಪ್ರತಿಭಟನೆ ಮಾಡಲು ತೀರ್ವನಿಸಿದ್ದಾರೆ.