

ಸೊರಬ: ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಮಠದಲ್ಲಿ ಹುಣ್ಣಿಮೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ 225ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮ, ಸಮೂಹ ಮತ್ತು ಸಂಘಟನೆ ಒಟ್ಟಾಗಿ ಇದ್ದಾಗ ಪರಸ್ಪರ ಫಲ ಕಾಣಬಹುದು. ಬಂಧನಕ್ಕೆ ಒಳಗಾದ ಮನುಷ್ಯ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಸಮಚಿತ್ತವಾಗಿ ಯೋಚಿಸಿ ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.
12ನೇ ಶತಮಾನದ ಬಸವಾದಿ ಶರಣರು ಬದುಕಿನ ಮೌಲ್ಯದ ಬಗ್ಗೆ ತಮಗಿರುವ ಪರಿಕಲ್ಪನೆಯನ್ನು ವಚನಗಳ ಮೂಲಕ ಸಾರಿದರು. ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡಾಗ ವೈಚಾರಿಕ ಚಿಂತನೆ ಮೂಡಲು ಸಾಧ್ಯವಿದೆ. ಸನಾತನ ಧರ್ಮದಲ್ಲಿ ಋಷಿಗಳು ಪ್ರತಿ ಹಬ್ಬ ಹರಿದಿನಗಳಿಗೆ ವೈಜ್ಞಾನಿಕ ಸಿದ್ಧಾಂತ ಅಳವಡಿಸುವ ಮೂಲಕ ಮಹತ್ವ ತಂದುಕೊಟ್ಟಿದ್ದಾರೆ. ಮಳೆಗಾಲದಲ್ಲಿ ಆರೋಗ್ಯದಲ್ಲಿ ಏರುಪೇರು ಆಗುವುದರಿಂದ ಉಪವಾಸವಿರಲು ಶ್ರಾವಣ ಮಾಸ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ತಾಲೂಕು ವೀರಶೈವ ಸಮಾಜಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ ಹಾಗೂ ಸದಸ್ಯರನ್ನು ಮಠದಿಂದ ಸನ್ಮಾನಿಸಲಾಯಿತು. ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗುರುಕುಮಾರ್ ಪಾಟೀಲ್, ನಿಕಟಪೂರ್ವ ಅಧ್ಯಕ್ಷ ಬಸವರಾಜಪ್ಪ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಮಲ್ಲಿಕಾರ್ಜುನ ಗೌಡ, ರಾಜಶೇಖರಗೌಡ, ಡಿ.ಶಿವಯೋಗಿ, ಲಿಂಗರಾಜ ಗೌಡ, ವಿಜಯೇಂದ್ರ ತಲಗುಂದ, ಮಮತಾ, ಪುಷ್ಪಾ, ಜಯಮಾಲಾ, ಉಷಾ, ಷಣ್ಮುಖ ಇತರರಿದ್ದರು.