ಹೇರ್ ಸ್ಟ್ರೈಟ್​​ನರ್​ನ​ ಅತಿಯಾದ ಬಳಕೆ ಕ್ಯಾನ್ಸರ್‌ಗೆ ಆಹ್ವಾನ ನೀಡಬಹುದು! ಎಚ್ಚರಿಕೆ ಅಗತ್ಯ

Hair Straighner
Published on

ಮದುವೆ ಅಥವಾ ಇನ್ನಾವುದೇ ಕಾರ್ಯಕ್ರಮಗಳಿಗೆ ಕೇಶ ವಿನ್ಯಾಸ ಮಾಡಿಕೊಳ್ಳಬೇಕು ಎಂದ ಕೂಡಲೇ ಥಟ್ಟನೇ ನಮ್ಮ ಕೈ ಹೇರ್ ಸ್ಟ್ರೈಟ್​​ನರ್ ಕಡೆಗೆ ಚಾಚುತ್ತದೆ. ಯಾವುದೇ ತರಹದ ಕೂದಲನ್ನಾದರೂ ಕ್ಷಣದಲ್ಲಿ ಗರಿಗರಿಯಾಗಿ, ನೆಟ್ಟಗೆ ಮಾಡುವ ಈ ಯಂತ್ರವು ನಮಗೆ ಬಹುಪಯೋಗಿಯಾಗಿದ್ದರೂ ಇದು ಉಂಟು ಮಾಡುವ ಅಡ್ಡ ಪರಿಣಾಮ ಒಂದೆರೆಡಲ್ಲ. ಅತಿಯಾದ ಹೇರ್ ಸ್ಟ್ರೈಟ್​​ನರ್​ಗಳ ಬಳಕೆಯು ಕೂದಲ ಹಾನಿಯಿಂದ ಆರಂಭಗೊಂಡು ಕ್ಯಾನ್ಸರ್ ತನಕ ಗಂಭೀರ ಅಪಾಯ ಉಂಟುಮಾಡುತ್ತದೆ ಎಂದರೆ ನಂಬುವಿರಾ? ನಂಬಲು ಕಷ್ಟವಾದರೂ ಹೇರ್ ಸ್ಟ್ರೈಟ್​​ನರ್​​ಗಳ ಅತಿಬಳಕೆಯು ಕ್ಯಾನ್ಸರ್​​ನಂತಹ ಕಾಯಿಲೆಗೆ ಕಾರಣವಾಗುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.

ಕೂದಲು ನೇರಗೊಳಿಸುವಿಕೆಯ ಅಡ್ಡಪರಿಣಾಮಗಳು
1. ಕೂದಲು ಒಣಗುತ್ತದೆ

ಪ್ರತಿದಿನ ಕೂದಲನ್ನು ಬಿಸಿ ಕಬ್ಬಿಣಕ್ಕೆ ಒಡ್ಡಿಕೊಂಡು ನೇರಗೊಳಿಸುವುದರಿಂದ ಕೂದಲು ತೇವಾಂಶ ಕಳೆದುಕೊಂಡು ಶುಷ್ಕತೆಗೆ ಒಳಗಾಗುತ್ತದೆ. ಇದರಿಂದ ಕೂದಲು ಶಾಶ್ವತವಾಗಿ ಹಾನಿಗೊಳಗಾಗುತ್ತದೆ. ಕೂದಲಿನ ಪೊರೆಯಲ್ಲಿರುವ ನೀರಿನಂಶವನ್ನು ಹೇರ್ ಸ್ಟ್ರೈಟ್​​ನರ್​​ ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಹೀಗಾಗಿಯೇ ತಲೆ ತೊಳೆದ ಬಳಿಕ ಕೂದಲು ಮೊದಲಿನಂತೆ ಯಥಾಸ್ಥಿತಿಗೆ ಮರಳುತ್ತದೆ. ಆದರೆ ಸಾಕಷ್ಟು ಶಾಖ ಉತ್ಪನ್ನಗಳನ್ನು ಬಳಸುವುದರಿಂದ ಕೂದಲನ್ನು ಪೋಷಿಸುವ ನೆತ್ತಿಯಲ್ಲಿನ ನೈಸರ್ಗಿಕ ತೈಲಗಳು ಒಣಗಿಹೋಗುತ್ತವೆ. ಇದರಿಂದ ಕೂದಲು ಇಂತಹ ತೈಲಗಳಿಂದ ವಂಚಿತಗೊಂಡು ಶಾಶ್ವತವಾಗಿ ಹಾನಿಗೊಳಗಾಗುತ್ತದೆ.

2. ಕೂದಲಿನ ತುದಿ ಒಡೆಯುವುದು ಅಥವಾ ಹೇರ್ ಸ್ಲಿಟ್

ಹೆಸರೇ ಸೂಚಿಸುವಂತೆ ಕೂದಲಿನ ತುದಿಗಳು ಎರಡು ಅಥವಾ ಹೆಚ್ಚಿನ ಭಾಗಗಳಾಗಿ ವಿಭಜಿಸಿದಾಗ ಸ್ಲಿಟ್ ಎಂಡ್ಸ್ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಪರಿಸರದ ಅನೇಕ ಅಂಶಗಳು ಕಾರಣವಾದರೂ, ಕೂದಲು ನೇರಗೊಳಿಸುವ ಸಾಧನದಿಂದ ಇಂತಹ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹೇರ್ಸ್ಟ್ರೈಟ್​​ನರ್​ಗಳಿಂದ ಉತ್ಪತ್ತಿಯಗುವ ಶಾಖವು ಕೂದಲನ್ನು ಒಣಗಿಸಿ, ವಿಭಜಿತ ತುದಿಗಳಿಗೆ ಕಾರಣವಾಗುತ್ತದೆ.

3. ಕೂದಲು ಉದುರುವಿಕೆ

ಇಂಡಿಯನ್ ಡರ್ಮಟಾಲಜಿ ಆನ್‌ಲೈನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೇರ್ ಸ್ಟ್ರೈಟ್​​ನರ್​ ಮತ್ತು ಇತರ ಬಿಸಿ ಐರನ್‌ಗಳ ಅತಿಯಾದ ಬಳಕೆ ಕೂದಲು ಉದುರುವಿಕೆಗೆ ಮುಖ್ಯ ಕಾರಣ ಎಂದು ತಿಳಿಸಿದೆ. ಶಾಶ್ವತ ನೇರ ಕೂದಲು ಹೊಂದುವಂತಹ ಚಿಕಿತ್ಸೆ ಪಡೆದುಕೊಳ್ಳುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಇಂತಹ ಚಿಕಿತ್ಸೆಯಲ್ಲಿ ಕೂದಲ ಬೇರಿಗೆ ಗಂಭೀರ ಹಾನಿಯುಂಟಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

4. ಕೂದಲು ಒಣಗಿ, ಕೆದರಿದಂತಾಗುತ್ತದೆ

ಕೆದರಿಂದತಹ ಕೂದಲನ್ನು ನಯಗೊಳಿಸಲು ಹೇರ್ ಸ್ಟ್ರೈಟ್​​ನರ್​ಗಳನ್ನು ಬಳಸುವುದು ವಾಡಿಕೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಟ್ರೈಂಕಾಲಜಿ ಪ್ರಕಾರ, ಹೇರ್ ಸ್ಟ್ರೈಟ್​​ನರ್​ ಉಪಕರಣಗಳನ್ನು ಹೆಚ್ಚಾಗಿ ಬಳಸುವುದರಿಂದ ಕೂದಲು ಇನ್ನಷ್ಟು ಹದಗೆಟ್ಟು ಕೆದರುತ್ತದೆ ಮತ್ತು ಕೂದಲು ಕಳಾಹೀನವಾಗುತ್ತದೆ.

5. ನೆತ್ತಿಯಲ್ಲಿ ತುರಿಕೆ ಉಂಟಾಗುವುದು

ಹೇರ್ ಸ್ಟ್ರೈಟ್​​ನರ್​ಗಳ ನಿಯಮಿತ ಬಳಕೆಯು ನೆತ್ತಿಯಲ್ಲಿರುವ ನೈಸರ್ಗಿಕ ತೈಲಗಳನ್ನು ತೆಗೆದುಹಾಕುತ್ತದೆ. ಇದರಿಂದಾಗಿ ಕೂದಲ ಕಿರುಚೀಲಗಳು ಸಾವಿಗೀಡಾಗುತ್ತವೆ. ಕೂದಲು ಒಣಗಿ, ನೆತ್ತಿಯಲ್ಲಿ ತುರಿಕೆ ಉಂಟಾಗುತ್ತದೆ. ಆದರೆ ಇದರ ಅಡ್ಡಪರಿಣಾಮಗಳು ನೆತ್ತಿಗೆ ಸೀಮಿತವಾಗಿಲ್ಲ. ಹೊಸ ಅಧ್ಯಯನವೊಂದು, ಹೇರ್ ಸ್ಟ್ರೈಟ್​​ನರ್​ಗಳ ಅತಿ ಬಳಕೆಯು ಗರ್ಭಾಂಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ತಿಳಿಸಿದೆ.

ಹೇರ್ ಸ್ಟ್ರೈಟ್​​ನರ್​ಗಳ ಬಳಕೆಯಿಂದಾಗುವ ಅಡ್ಡಪರಿಣಾಮಗಳು
1. ಸ್ತನ ಕ್ಯಾನ್ಸರ್
ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್​​ನಲ್ಲಿ ಪ್ರಕಟವಾದ ಅಧ್ಯಯನವು ಹೇರ್ ಸ್ಟ್ರೈಟ್​​ನರ್​ಗಳ ನಿಯಮಿತ ಬಳಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು 30 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಸ್ಟ್ರೈಟ್​​ನರ್​ ಬಳಸುವುದು ಮತ್ತು ಸ್ತನ ಕ್ಯಾನ್ಸರ್ ಅಭಿವೃದ್ಧಿಯಾಗುವ ನಡುವಿನ ಸಂಬಂಧವು, ಆಫ್ರಿಕನ್ ಅಮೇರಿಕನ್ ಮತ್ತು ಬಿಳಿ ಮಹಿಳೆಯರನ್ನು ಹೋಲುತ್ತದೆಯಾದರೂ, ಆಫ್ರಿಕನ್ ಅಮೇರಿಕನ್ ಮಹಿಳೆಯರು ಸ್ಟ್ರೈಟ್​​ನರ್​ ಅನ್ನು ಹೆಚ್ಚಾಗಿ ಬಳಸುತ್ತಾರೆ ಎಂಬುದನ್ನು ಅಧ್ಯಯನಗಳು ಕಂಡುಹಿಡಿದಿವೆ. ಹೇರ್ ಸ್ಟ್ರೈಟ್​​ನರ್​ಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಉಂಟು ಮಾಡುತ್ತದೆಯಾದರೂ, ಇದೇ ಏಕೈಕ ಕಾರಣವಲ್ಲ ಎಂಬುದನ್ನೂ ಸಂಶೋಧಕರು ತಿಳಿಸಿದ್ದಾರೆ.

2. ಗರ್ಭಾಶಯದ ಕ್ಯಾನ್ಸರ್

ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಜರ್ನಲ್‌ನಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ, ಹೇರ್ ಸ್ಟ್ರೈಟ್​​ನರ್​ಗಳನ್ನು ಬಳಸುವ ಮಹಿಳೆಯರು, ಈ ಶಾಖ ಉತ್ಪನ್ನಗಳನ್ನು ಎಂದಿಗೂ ಬಳಸದ ಮಹಿಳೆಯರಿಗಿಂತ ಹೆಚ್ಚಾಗಿ ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಾರೆ ಎಂದು ತಿಳಿಸಿದೆ. ಈ ಅಧ್ಯಯನವು 34 ಸಾವಿರ ಅಮೆರಿಕ ಮಹಿಳೆಯರನ್ನು ಅನುಸರಿಸಿತ್ತು. ಹೇರ್ ಸ್ಟ್ರೈಟ್​​ನರ್​ಗಳನ್ನು ಎಂದಿಗೂ ಬಳಸದ ಮಹಿಳೆಯರಿಗೆ ಗರ್ಭಾಶಯದ ಕ್ಯಾನ್ಸರ್ ಬರುವ ಅಪಾಯವು 1.64 ಪ್ರತಿಶತದಷ್ಟು ಇರುತ್ತದೆ.

ಆದರೆ ಈ ಶಾಖ ಉತ್ಪನ್ನಗಳನ್ನು ಬಳಸುವ ಮಹಿಳೆಯರಲ್ಲಿ ಈ ಅಪಾಯವು ಇದರ ದುಪ್ಪಟ್ಟಾಗಿರುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊAಡಿದ್ದಾರೆ. ಇದಲ್ಲದೆ ಕಪ್ಪುಮಹಿಳೆಯರು ಶೇ.80 ರಷ್ಟು ಈ ಅಪಾಯ ಎದುರಿಸುವ ಸಂಭವವಿದ್ದು, ಇದರೊಂದಿಗೆ ಅತಿಯಾಗಿ ರಾಸಾಯನಿಕಗಳ ಬಳಕೆಯು ಗರ್ಭಾಶಯ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹೇರ್ ಸ್ಟ್ರೈಟ್​​ನರ್​ಗಳಲ್ಲಿನ ಪ್ಯಾರಾಬೆನ್‌ಗಳು, ಬಿಸ್ಫೆನಾಲ್ ಎ, ಲೋಹಗಳು ಮತ್ತು ಫಾರ್ಮಾಲ್ಡಿಹೈಡ್ ಸೇರಿದಂತೆ ಇತರ ಅಂಶಗಳು ಗರ್ಭಾಶಯದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net