

ಪಟನಾ: ಭಾರತೀಯ ಪುರಾತತ್ವ ಸರ್ವೆಕ್ಷಣಾಲಯ (ಎಎಸ್ಐ) ಬಿಹಾರದ ರಾಜಧಾನಿ ಪಟನಾದ ಕುಮ್ರಹಾರ್ ಪ್ರದೇಶದಲ್ಲಿ ಕೈಗೊಂಡ ಉತ್ಖನನದ ವೇಳೆ ಎರಡು ಸಾವಿರ ವರ್ಷಗಳ ಹಿಂದಿನ ಪಟ್ಟಣದ ಕುರುಹುಗಳು ಪತ್ತೆಯಾಗಿವೆ. ಇದು ಕುಶಾನರ ಅವಧಿಯ ನಗರ ಇರಬಹುದು ಎಂದು ಅಂದಾಜಿಸಲಾಗಿದೆ.
ಪಟನಾ ರೈಲ್ವೆ ನಿಲ್ದಾಣದ ಪೂರ್ವಕ್ಕೆ 6 ಕಿ.ಮೀ ದೂರದ ಕುಮ್ರಹಾರ್ ಪ್ರದೇಶದಲ್ಲಿ ಕೊಳದ ಪುನರುಜ್ಜೀವನದ ಕಾಮಗಾರಿ ಸಂದರ್ಭದಲ್ಲಿ ಹಳೆಯದಾದ ಇಟ್ಟಿಗೆ ಗೋಡೆಯ ಅವಶೇಷಗಳು ಗೋಚರಿಸಿದವು. ನಂತರ ಉತ್ಖನನವನ್ನು ಮುಂದುವರಿಸಿದಾಗ. ಎರಡು ಸಹಸ್ರಮಾನದ ಹಿಂದಿನ ಪಟ್ಟಣದ ಗೋಡೆಯಂತಹ ರಚನೆಗಳು ಕಂಡುಬಂದವು ಎಂದು ಎಎಸ್ಐ ಪಟನಾ ವೃತ್ತದ ಅಧೀಕ್ಷಕ ಪುರಾತತ್ತ್ವ ಶಾಸ್ತ್ರಜ್ಞೆ ಗೌತಮಿ ಭಟ್ಟಾಚಾರ್ಯ ಹೇಳಿದ್ದಾರೆ.
ಕೊಳದ ಒಳಗಿನ ಇಟ್ಟಿಗೆ ಗೋಡೆಗಳು ಗಮರ್ನಾಹವಾದ ಸಂಶೋಧನೆಯಾಗಿದೆ. ಉತ್ತರ ಭಾರತದಲ್ಲಿ ಆಳ್ವಿಕೆ ನಡೆಸಿದ ಕುಶಾನರ ಕಾಲದಲ್ಲಿ ಈ ಪಟ್ಟಣ ನಿರ್ಮಾಣ ಆಗಿರಬಹುದು ಎಂದು ತೋರುತ್ತದೆ. ವಿವರವಾದ ವಿಶ್ಲೇಷಣೆ ನಂತರವೇ ನಿರ್ದಿಷ್ಟ ತೀರ್ವನಕ್ಕೆ ಬರಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಿಷನ್ ಅಮೃತ್ ಸರೋವರ್ ಉಪಕ್ರಮದ ಭಾಗವಾಗಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ಪಟನಾದ ಹನ್ನೊಂದು ಕೊಳಗಳನ್ನು ಪುನರ್ಜ್ಜೀವಗೊಳಿಸುತ್ತಿದೆ.
ಇದೇ ಪ್ರದೇಶದಲ್ಲಿ ಈ ಹಿಂದೆ ನಡೆದ ಉತ್ಖನನದ ವೇಳೆ ಮೌರ್ಯ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದವು. ಪಟನಾದ ಹಿಂದಿನ ಹೆಸರು ಪಾಟಲೀಪುತ್ರವಾಗಿತ್ತು ಎನ್ನಲಾಗಿದ್ದು, ದಶಕಗಳ ಹಿಂದೆ ಉತ್ಖನನದ ವೇಳೆ ಸುಮಾರು 600 ಗೋಪುರಗಳು, 64 ಹೆಬ್ಬಾಗಿಲು, ಮರದ ಗೋಡೆಗಳನ್ನು ಹೊಂದಿದ್ದ ಮನೆಗಳು ಕಂಡು ಬಂದಿದ್ದವು.