

ಬೆಂಗಳೂರು: ರಾಜ್ಯ ಸರ್ಕಾರದ ವೈಲ್ಯ, ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳ ವಿರುದ್ಧ ಬಿಜೆಪಿ ಪರಿಣಾಮಕಾರಿ ಹೋರಾಟ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸ್ವಪ್ರತಿಷ್ಠೆ ಕೈಬಿಟ್ಟು ಪಕ್ಷದ ಜತೆಗೆ ಕೈಜೋಡಿಸದಿದ್ದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಭಿನ್ನಮತೀಯರಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ವರಿಷ್ಠರು ನೇಮಿಸಿದ್ದಾರೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ನಾಯಕತ್ವ ಬದಲಾವಣೆಯಾಗುವುದಿಲ್ಲ ಎಂದರು.
ಭಿನ್ನಮತೀಯರ ಬಣವಲ್ಲ, ವೈಯಕ್ತಿಕ ಹಿತಾಸಕ್ತಿಗೆ ಸೇರಿದ ನಾಲ್ಕು ಜನರ ಗುಂಪು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಟೀಕಿಸುವುದು ಈ ಗುಂಪಿನ ಅಜೆಂಡಾ ಆಗಿದ್ದು. ಇವರ ಮಾತಿಗೆ ಪಕ್ಷದ ಕಾರ್ಯಕರ್ತರು ಕಿಮ್ಮತ್ತು ನೀಡುವುದಿಲ್ಲ ಛೇಡಿಸಿದರು.
ಪಕ್ಷದ ರಾಜ್ಯಾಧ್ಯಕ್ಷ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು ಒಟ್ಟಾಗಿ ಹೋರಾಟ, ಕಾಂಗ್ರೆಸ್ ಸರ್ಕಾರವನ್ನು ಕಟ್ಟಿಹಾಕುವ ಕೆಲಸ ಮಾಡುತ್ತಿದ್ದಾರೆ. ನಾಲ್ಕೈದು ಜನರ ಗುಂಪು ಇದನ್ನು ಸಹಿಸಲಾಗದೆ ಶ್ರೇಯಸ್ಸು ತನಗೆ ಸಲ್ಲಬೇಕೆಂದು ಹಪಾಹಪಿಸುತ್ತಿದೆ.
ದೆಹಲಿಯಲ್ಲಿ ಕೆಲವು ಲೋಕಸಭೆ ಸದಸ್ಯರು ನಮ್ಮ ರಕ್ಷಣೆಗೆ ನಿಂತಿದ್ದಾರೆ ಎಂದು ಹೇಳಿಕೊಂಡಿದ್ದು, ಜತೆಗೆ ನಿಂತವರ ಹೆಸರು ಬಹಿರಂಗಪಡಿಸಲಿ. ಪಕ್ಷದ ವರಿಷ್ಠರ ಸಲಹೆ-ಸೂಚನೆಗೆ ವಿರುದ್ಧವಾಗಿ ನಡೆಯುವುದಕ್ಕೆ ಯಾರಿಗೂ ಅವಕಾಶವಿಲ್ಲ ಎಂದರು.
ಭಿನ್ನಮತೀಯರಿಗೆ ಯಾರೆಲ್ಲ ಬೆಂಬಲಿಸುತ್ತಿದ್ದಾರೋ ಅವರು ಹೊರಗೆ ಬರಲಿ. ಪಕ್ಷದ ಹಿತವೇ ಮುಖ್ಯವಾಗಿದ್ದರೆ ಬೆನ್ನ ಹಿಂದೆ ನಿಲ್ಲುವುದು ಬಿಡಲಿ. ಇಷ್ಟರಲ್ಲೇ ಪಕ್ಷದ ಸಭೆ ಕರೆದು, ಯತ್ನಾಳ್ ಮತ್ತು ಅವರ ಗುಂಪಿನ ಬೆಂಬಲಕ್ಕೆ ನಿಂತವರಿಗೂ ತಕ್ಕ ಪಾಠ ಕಲಿಸುತ್ತೇವೆ ಎಂದು ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.