

ಹೈದರಾಬಾದ್: ಮಾಜಿ ಸಚಿವ ಮತ್ತು ವೈಸಿಪಿ ಶಾಸಕ ಪರ್ನಿ ನಾನಿ ಅವರು ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ಸೂಪರ್ಸ್ಟಾರ್ ಪವನ್ ಕಲ್ಯಾಣ್ಗೆ ತಮ್ಮ ಎರಡು ಚಪ್ಪಲಿಗಳನ್ನು ಪ್ರದರ್ಶಿಸುವುದರ ಜೊತೆಗೆ ಎಚ್ಚರಿಕೆ ಸಂದೇಶ ರವಾನಿಸಿದ ನಾಟಕೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಪತ್ರಿಕಾಗೋಷ್ಠಿಯ ನೇರ ಪ್ರಸಾರದಲ್ಲೇ ಪರ್ನಿ ನಾನಿ ಅವರು ತಮ್ಮ ಎರಡು ಚಪ್ಪಲಿಗಳನ್ನು ಪವನ್ ಕಲ್ಯಾಣ್ ಹೆಸರು ಹೇಳಿ ಪ್ರದರ್ಶಿಸಿದರು. ನೀನು ಎಲ್ಲ ಸಮಯದಲ್ಲೂ ಚಪ್ಪಲಿಯನ್ನು ತೋರಿಸುತ್ತೀಯಲ್ಲ ನೀನೇನು ದೊಡ್ಡ ಗಂಡ್ಸಾ? ನಾನು ಎರಡು ಚಪ್ಪಲಿಗಳನ್ನು ತೋರಿಸುತ್ತೇನೆ. ನಿನಗಿಂತ ದೊಡ್ಡವನು ನಾನು ಎನ್ನುತ್ತಾ ಚಪ್ಪಲಿಗಳನ್ನು ಪ್ರದರ್ಶಿಸಿದ ನಾನಿ, ಎರಡು ಚಪ್ಪಲಿಗಳಿವೆ ಹುಷಾರ್! ಎರಡು ಕೂಡ ಹರಿದಿವೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸುವ ಮೂಲಕ ಪರ್ನಿ ನಾನಿ ವಿವಾದವನ್ನು ಮೈಮೇಲೆ ಎಳೆದುಕೊಂಡರು.
ಇದಕ್ಕೂ ಮುನ್ನ ಪವನ್ ಕಲ್ಯಾಣ್ ಅವರು ಕಾಕಿನಾಡದ ಕಥಿಪುಡಿಯ ಸಾರ್ವಜನಿಕ ಸಭೆಯಲ್ಲಿ ದ್ವೇಷದ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಪರ್ನಿ ನಾನಿ ಅವರು ತಿರುಗೇಟು ನೀಡಿದ್ದು, ಪವನ್ ಅವರ ಇಬ್ಬಗೆಯ ಮಾತು ತುಂಬಾ ಅಪಾಯಕಾರಿ ಎಂದಿದ್ದಾರೆ. ತಮ್ಮ ನಯವಾದ ಮಾತುಗಳಿಂದ ಅಮಾಯಕರನ್ನು ವಂಚಿಸುತ್ತಿದ್ದಾರೆ. ಪವನ್ ಅವರು ಹಿಂದಿನ ಟಿಡಿಪಿ ಸರ್ಕಾರದ ಭಾಗವಾಗಿದ್ದರು ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ನಾನಿ ಆರೋಪ ಮಾಡಿದ್ದಾರೆ.
ಚಂದ್ರಬಾಬು ನಾಯ್ಡು ಮತ್ತು ಟಿಡಿಪಿಗಾಗಿ ಪವನ್ ಅವರು ಮತಯಾಚನೆ ಮಾಡುತ್ತಿದ್ದಾರೆ. ಪವನ್ ಅವರು ಜನಸೇನಾ ಪಕ್ಷ ಕೇವಲ 15 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಜನಸೇನಾ ಸರ್ಕಾರ ರಚಿಸುವ ಪ್ರಶ್ನೆ ಎಲ್ಲಿದೆ ಎಂದರು. ವೈಎಸ್ಆರ್ಸಿಪಿ ಸರ್ಕಾರವು ಮುಂದಿನ ಅವಧಿಯಲ್ಲೂ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮುಂದುವರಿಸಲಿದೆ ಎಂದು ನಾನಿ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)