ವೈದ್ಯರು, ಪೊಲೀಸರಿಗೆ ಕೋವಿಡ್-19 ವಿಶೇಷ ಭತ್ಯೆ; ಕರ್ತವ್ಯ ನಿರತರ ವಿವರ ಕೇಳಿದ ರಾಜ್ಯ ಸರ್ಕಾರ

State- covid
Published on

ಕೀರ್ತಿನಾರಾಯಣ ಸಿ. ಬೆಂಗಳೂರು

ಜೀವವನ್ನೇ ಪಣಕ್ಕಿಟ್ಟು ಕರೊನಾ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಕರೊನಾ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ, ಅವರಿಗೆ ಕೋವಿಡ್-19 ವಿಶೇಷ ಭತ್ಯೆ ಕೊಡಲು ಆದೇಶಿಸಿದೆ. ಕೋವಿಡ್ ಆಸ್ಪತ್ರೆಗಳ ವಾರ್ಡ್​ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಮಾಸಿಕ 25 ಸಾವಿರ ರೂ. ಹಾಗೂ ಕರೊನಾ ಸೋಂಕಿತ ಮತ್ತು ಶಂಕಿತರ ಸಂಪರ್ಕಕ್ಕೆ ಒಳಗಾಗುವವರಿಗೆ ಮಾಸಿಕ 10 ಸಾವಿರ ರೂ. ಭತ್ಯೆ ನೀಡಲು ನಿರ್ಧರಿಸಲಾಗಿದೆ. ನೇರ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ, ಅಧಿಕಾರಿಗಳ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವಂತೆ ರಾಜ್ಯ ಡಿಜಿಪಿ ಹಾಗೂ ಆರೋಗ್ಯ ಇಲಾಖೆಗೆ ಒಳಾಡಳಿತ ಇಲಾಖೆ ಸೂಚಿಸಿದೆ.

ನಿಗದಿತ ನಮೂನೆಯಲ್ಲಿ ಪೊಲೀಸ್ ಸಿಬ್ಬಂದಿ/ ಅಧಿಕಾರಿ ಹೆಸರು, ಹುದ್ದೆ, ಠಾಣೆ ವಿವರ ಭರ್ತಿ ಮಾಡಿ ಕಳುಹಿಸುವಂತೆ ಸೂಚಿಸಲಾಗಿದ್ದು, ಈ ಜವಾಬ್ದಾರಿಯನ್ನು ಆಯಾ ಠಾಣಾಧಿ ಕಾರಿಗಳಿಗೆ ವಹಿಸಲಾಗಿದೆ. ಆದರೆ, ಎಲ್ಲ ಪೊಲೀಸ್ ಸಿಬ್ಬಂದಿ/ಅಧಿಕಾರಿ ಒಂದಲ್ಲ ಒಂದು ರೀತಿ ಕರೊನಾ ವಿರುದ್ಧದ ಹೋರಾಟ ದಲ್ಲಿ ನಿರತರಾಗಿದ್ದಾರೆ. ಯಾರ ಹೆಸರು ಕಳುಹಿಸಬೇಕು, ಯಾರ ಹೆಸರು ಬಿಡಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ.

ಲಾಕ್​ಡೌನ್ ಸಂದರ್ಭ ಪ್ರತಿ ಸಿಬ್ಬಂದಿಯೂ ರಸ್ತೆಯಲ್ಲಿ ನಿಂತು ಪಾಳಿ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯೂ ಪರೋಕ್ಷವಾಗಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಕಂಟೇನ್ಮೆಂಟ್ ಪ್ರದೇಶ, ಸೀಲ್​ಡೌನ್ ಏರಿಯಾ, ಸೋಂಕಿತರು/ಶಂಕಿತರ ಪತ್ತೆ, ಕಾರ್ವಿುಕರನ್ನು ಹೊರರಾಜ್ಯ/ಜಿಲ್ಲೆಗಳಿಗೆ ಕಳುಹಿಸುವುದು, ಹೊರಗಿನಿಂದ ಬಂದವರನ್ನು ಕ್ವಾರಂಟೈನ್ ಮಾಡುವುದು ಸೇರಿ ಇನ್ನಿತರ ವಿಚಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭತ್ಯೆ ನೀಡಲು ಸರ್ಕಾರ ಸ್ಪಷ್ಟ ಮಾನದಂಡ ರೂಪಿಸದ ಕಾರಣ ಕೋವಿಡ್ ಭತ್ಯೆ ಯಾರಿಗುಂಟು ಯಾರಿಗಿಲ್ಲ ಎಂಬ ಚರ್ಚೆ ಶುರುವಾಗಿದೆ.

ಖಾಸಗಿ ತಜ್ಞರ ಸೇವೆಗೆ ಮಾಸಿಕ 2 ಲಕ್ಷ ರೂ.! ಐಸೋಲೇಷನ್ ವಾರ್ಡ್​ನಲ್ಲಿರುವ ಕರೊನಾ ಸೋಂಕಿತರಿಗೆ ಚಿಕಿತ್ಸೆ ಅಥವಾ ಇನ್ನಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ನೀಡಲು ಖಾಸಗಿ ತಜ್ಞರನ್ನು ಬಳಸಿಕೊಂಡರೆ, ಅವರಿಗೆ ತಿಂಗಳಿಗೆ 2 ಲಕ್ಷ ರೂ. ನೀಡಲು ಡಿಸಿಎಂ ನೇತೃತ್ವದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೀಗ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಭತ್ಯೆ ಕೊಡುವ ಕುರಿತು ಸ್ಪಷ್ಟ ಆದೇಶವಾಗಿದೆ. ಖಾಸಗಿ ತಜ್ಞರಿಗೆ ಭತ್ಯೆ ನೀಡುವ ಆದೇಶ ಹೊರಬಿದ್ದಿಲ್ಲ. ಸೋಂಕಿತ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಖಾಸಗಿ ಆಸ್ಪತ್ರೆಗಳ ಸೇವೆ ಬಳಸಿಕೊಂಡಿಲ್ಲ.

ಪೊಲೀಸರಿಗೇ 93 ಕೋಟಿ ರೂ. ಬೇಕು: ಪೊಲೀಸ್ ಇಲಾಖೆಯಲ್ಲಿ 98 ಸಾವಿರ ಸಿಬ್ಬಂದಿ ಮತ್ತು ಅಧಿಕಾರಿಗಳಿದ್ದಾರೆ. ಬರೀ ಪೊಲೀಸರಿಗೆ ಮಾಸಿಕ 93 ಕೋಟಿ ರೂ. ಬೇಕಾಗುತ್ತದೆ. ಇನ್ನು ಆರೋಗ್ಯ ಇಲಾಖೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಅಧಿಕಾರಿಗಳು ಎಲ್ಲರಿಗೂ ಭತ್ಯೆ ಕೊಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ ಎಂಬ ಮಾತುಗಳೂ ಕೇಳಿಬಂದಿವೆ.

ಉಳಿದವರ ಕಥೆ ಏನು?: ಕರೊನಾ ಕರ್ತವ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಮಾತ್ರ ಭಾಗಿಯಾಗಿಲ್ಲ. ಕೆಎಸ್ಸಾರ್ಟಿಸಿ, ಬಿಎಂಟಿಸಿ, ಗೃಹರಕ್ಷಕ ಸಿಬ್ಬಂದಿ, ಆರ್​ಟಿಒ ಅಧಿಕಾರಿಗಳು ಸೇರಿ ಒಟ್ಟು 13 ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ನೇರ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಎರಡು ಇಲಾಖೆಗೆ ಮಾತ್ರ ಭತ್ಯೆ ಕೊಟ್ಟು ಉಳಿದವರಿಗೆ ಕೊಡದಿದ್ದರೆ ಹೇಗೆ ಎಂಬ ಪ್ರಶ್ನೆಯೂ ಉದ್ಬವಿಸಿದೆ.

ಡಿಸಿಎಂ ನೇತೃತ್ವ ಸಭೆಯಲ್ಲಿ ನಿರ್ಣಯ: ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಏ.16ರಂದು ನಡೆದ ವಿವಿಧ ಇಲಾಖೆಗಳ ಸಚಿವರ ಸಭೆಯಲ್ಲಿ ವೈದ್ಯರು ಮತ್ತು ಪೊಲೀಸರಿಗೆ ಕೋವಿಡ್ ಭತ್ಯೆ ನೀಡುವಂತೆ ಗೃಹಸಚಿವ ಬಸವರಾಜ ಬೊಮ್ಮಾಯಿ ಸಲಹೆ ಮೇರೆಗೆ ನಿರ್ಣಯ ತೆಗೆದುಕೊಂಡು ಅನುಮತಿಗಾಗಿ ಕಡತವನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿತ್ತು. ಈಗ ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕಿರುವುದರಿಂದ ಭತ್ಯೆ ನೀಡುವ ಪ್ರಕ್ರಿಯೆ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net