

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸೋಲಿನ ನಂತರ ದೆಹಲಿಯಲ್ಲಿ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖಾಮುಖಿಯಾಗಿದೆ. ಕೆಲ ಸಂಸದರ ಆಹ್ವಾನದ ಮೇರೆಗೆ ಭಾನುವಾರವೇ ದೆಹಲಿಗೆ ತೆರಳಿದ್ದ ಬೊಮ್ಮಾಯಿಯವರು ಮಂಗಳವಾರ ಮಧ್ಯಾಹ್ನ ಕಾಲಾವಕಾಶ ಪಡೆದು ಶಾ ಅವರನ್ನು ಭೇಟಿ ಮಾಡಿ ಸೌಹಾರ್ದಯುತವಾಗಿ ಚರ್ಚಿಸಿದ್ದಾರೆ.
ಮಾತುಕತೆಯಲ್ಲಿ ರಾಜ್ಯ ರಾಜಕೀಯ ವಿದ್ಯಮಾನ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಪಕ್ಷದ ಸಂಘಟನಾ ಚಟುವಟಿಕೆಗಳು ಪ್ರಸ್ತಾಪವಾಗಿವೆ. ಇದೇ ಸಂದರ್ಭದಲ್ಲಿ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಳ ಭರ್ತಿ ಬಗ್ಗೆ ಬೊಮ್ಮಾಯಿ ನಿವೇದಿಸಿ ತಮ್ಮ ಭೇಟಿಯ ಇಂಗಿತವನ್ನೂ ಪರೋಕ್ಷವಾಗಿ ಹೊರಹಾಕಿದ್ದಾರೆ.
ಮೂರು ಪ್ರಮುಖ ಹುದ್ದೆಗಳಿಗೆ ಯಾರನ್ನೂ ನೇಮಕ ಮಾಡಿದರೆ ಸೂಕ್ತವೆಂದು ಬೊಮ್ಮಾಯಿಗೆ ಅಮಿತ್ ಶಾ ಮರುಪ್ರಶ್ನಿಸಿ, ಹೆಸರುಗಳನ್ನು ಸೂಚಿಸಲು ಸಲಹೆ ನೀಡಿದ್ದಾರೆ. ಒಂದರೆಕ್ಷಣ ಯೋಚನೆ ಮಾಡಿದ ಮೂರು ಪ್ರಮುಖ ಹುದ್ದೆಗಳಿಗೆ ಮೂರು ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆ ಪೂರ್ವ ತಯಾರಿ ದೃಷ್ಟಿಯಿಂದ ಆದಷ್ಟು ಬೇಗ ನಿರ್ಧಾರ ಕೈಗೊಂಡರೆ ಅನುಕೂಲವಾಗುತ್ತದೆ. ಚುನಾವಣಾ ಪೂರ್ವ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಚಟುವಟಿಕೆ ಹಮ್ಮಿಕೊಳ್ಳಲು ಸಂಘಟನೆ ಸಿದ್ಧವಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದ್ದು, ಎಲ್ಲದಕ್ಕೂ ಅಮಿತ್ ಶಾ ಮುಗುಳ್ನಗೆಯೇ ಪ್ರತ್ಯುತ್ತರವಾಗಿತ್ತು ಎಂದು ತಿಳಿದಿದೆ.
ಪಕ್ಷದ ನೆಲೆಯಲ್ಲಿ ಮಾಸ್ಟರ್‌ಮೈಂಡ್ ಎಂದೇ ಗುರುತಿಸಿಕೊಂಡಿರುವ ಅಮಿತ್ ಶಾ ಹಾಗೂ ಬೊಮ್ಮಾಯಿ ಮಾತುಕತೆ ಲಶೃತಿ ಏನಾಗುತ್ತದೋ ತಿಳಿಯದು. ಆದರೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ವರಿಷ್ಠರು ಹತ್ತಿರಕ್ಕೆ ಕರೆಯುತ್ತಿಲ್ಲ. ಕನಿಷ್ಠ ಪಕ್ಷ ಭೇಟಿಗೂ ಕಾಲಾವಕಾಶ ಕೊಟ್ಟಿಲ್ಲವೆಂಬ ಅಪವಾದಗಳಿಂದ ಬೊಮ್ಮಾಯಿ ಮುಕ್ತವಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.