ಗ್ಯಾರಂಟಿಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ ಬೀಳುತ್ತದೆ: ಬಸವರಾಜ​ ಬೊಮ್ಮಾಯಿ

CM BASAVARAJ BOMMAI
ಸಾಂದರ್ಭಿಕ ಚಿತ್ರ
Published on

ಬೆಂಗಳೂರ:  ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶುಕ್ರವಾರ ಅಧಿಕೃತವಾಗಿ ಜಾರಿ ಮಾಡಿದೆ.

ಈ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ ಬೀಳುತ್ತದೆ ಎಂದು ಹೇಳಿದ್ದಾರೆ.

ಆರ್ಥಿಕ ಸ್ಥಿತಿ ಹದಗೆಡಬಾರದು

ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸ್ವಲ್ಪ ಎಡವಟ್ಟು ಆದರೂ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಹೊಡೆತ ಬೀಳುತ್ತದೆ. ಇವರು ಯಾವ ರೀತಿ ಸಾಲ​ ತೆಗೆದುಕೊಳ್ಳುತ್ತಾರೆ, ತೆರಿಗೆ ಹಣ ಹೇಗೆ ಬಳಕೆ ಮಾಡುತ್ತಾರೆ ಎಂಬುದರ ಕುರಿತು ಮಾಹಿತಿ ಇಲ್ಲ. ಇವರ ಪಾಲಿಸಿಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಡಬಾರದು ಎಂದು ಕಳವಳ ವ್ಯಕ್ತಪಡಿಸಿದ್ಧರು.

ಸಿದ್ದರಾಮಯ್ಯನವರು ಅತಿ ಹೆಚ್ಚು ಬಾರಿ ಬಜೆಟ್​ ಮಂಡಿಸಿದವರು. ಹೀಗಾಗಿ ಹೆಚ್ಚುವರಿ ಆದಾಯದ ಬಗ್ಗೆ ಹೇಳಬೇಕಿತ್ತು. ಆದರೆ, ಅವ್ರು ಇದರಲ್ಲಿ ಮಾತು ತಪ್ಪಿದ್ದಾರೆ. ರಾಜ್ಯದ ಜನತೆ ಕೂಡ ಇದನ್ನು ಗಂಭೀರವಾಗಿ ನೋಡ್ತಿದ್ದಾರೆ. ಜನರ ಮನಸ್ಸಿನಲ್ಲಿ ಎಲ್ಲವೂ ಪುಕ್ಕಟೆ ಎಂಬ ಭಾವನೆ ಮೂಡಿದೆ. ಆ ಆಸೆಗಳೆಲ್ಲವೂ ಹುಸಿಯಾಗುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ನನಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಡುತ್ತಿದೆ ಎಂದು ಭಯವಾಗುತ್ತಿದೆ. ಕಾಂಗ್ರೆಸ್​ನವರು ಆರಂಭದಲ್ಲೇ ಮಾತು ತಪ್ಪಿದ್ದಾರೆ. ಈಗ ಗ್ಯಾರಂಟಿ ಯೋಜನೆಗಳ ಜಾರಿಗೆ 2 ತಿಂಗಳು ಸಮಯಾವಕಾಶ ತಗೊಂಡಿದ್ದಾರೆ. ಮುಂದೆ ನೋಡೋಣ ಈ ಯೋಜನೆಗಳು ಎಲ್ಲಿವರೆಗೆ ಇರುತ್ತದೆ ಎಂದು ಹೇಳಿದ್ದಾರೆ.

ಅರೆ ಬರೆ ಪ್ರಯತ್ನ

ಗ್ಯಾರಂಟಿಗಳ ಮೂಲಕ ಇವರು ರಾಜ್ಯವನ್ನು ಆರ್ಥಿಕ ಅಧೋಗತಿಗೆ ತೆಗೆದುಕೊಂಡು ಹೋಗಬಾರದು. ಆದಾಯದ ಸ್ಥೂಲ ಚಿತ್ರಣವನ್ನು ಇಂದು ಕೊಡಬಹುದಿತ್ತು. ಕೊಟ್ಟ ಮಾತನ್ನು ಸಂಪೂರ್ಣವಾಗಿ ನಡೆಸಿಲ್ಲ. ಕಾಂಗ್ರೆಸ್​ನವರು ಹೇಳುವುದೊಂದು, ಮಾಡುವುದೊಂದು. ಮುಂದಿನ ದಿನಗಳಲ್ಲಿ ಏನೇನು ಕಡಿತಗೊಳಿಸುತ್ತಾರೋ ನೋಡೋಣ ಎಂದರು.

ಕಾಂಗ್ರೆಸ್​ನವರು ಉಚಿತ ಯೋಜನೆ ಜಾರಿ ಮೂಲಕ ತಮ್ಮ ಮಾತು ಉಳಿಸುವ ಅರೆ ಬರೆ ಪ್ರಯತ್ನ ಮಾಡಿದ್ದಾರೆ. ಲೋಕಸಭಾ ಚುನಾವಣೆವರೆಗೆ ಏನಾಗುತ್ತೋ ಗೊತ್ತಿಲ್ಲ. ರೋಡ್ ಹಂಪ್​ಗಳು ಬಹಳಷ್ಟು ಇದ್ದು, ಎಲ್ಲಿಯವರೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬುದು ರಾಜಕೀಯ ಇಚ್ಛಾಶಕ್ತಿ‌ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನಿರ್ಧಾರವಾಗುತ್ತದೆ.

ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಆದೇಶ ಹೊರ ಬಿದ್ದ ನಂತರ ಪರಿಶೀಲಿಸಿ, ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ನಾವು ಖಂಡಿತವಾಗಿ ಇದರ ಬಗ್ಗೆ ಜನರ ಮುಂದೆ ಹೋಗುತ್ತೇವೆ ಎಂದು ಮಾಜಿ ಸಿಎಂ ಬಸವರಾಜ​ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net