

Pit bull: ನ್ಯೂಯಾರ್ಕ್ ನಗರದ ಕ್ವೀನ್ಸ್ನಲ್ಲಿ ವ್ಯಕ್ತಿಯೊಬ್ಬ ನಾಯಿಯನ್ನು ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗಿ, ಬೆಂಕಿಹಚ್ಚಿ ಕ್ರೂರವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದೃಶ್ಯ ಅಲ್ಲಿನ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.
ಗುರುವಾರ (ಜುಲೈ 24) ಬೆಳಗ್ಗೆ ವ್ಯಕ್ತಿಯೊಬ್ಬ 5 ಗಂಟೆ ಸುಮಾರಿಗೆ ಸೌತ್ ಓಝೋನ್ ಪಾರ್ಕ್ನ 128 ನೇ ಬೀದಿ ಮತ್ತು 116ನೇ ಅವೆನ್ಯೂದ ಮೂಲೆಯಲ್ಲಿ ನಾಯಿಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ನಾಯಿ ಮೇಲೆ ಸುಡುವ ದ್ರವ್ಯವನ್ನು ಸುರಿದು ಬೆಂಕಿ ಹಚ್ಚುತ್ತಾನೆ. ನಂತರ ಆ ಪ್ರಾಣಿಯನ್ನು ಅಲ್ಲಿಯೇ ಬಿಟ್ಟು ಆತ ಓಡಿ ಹೋಗುತ್ತಾನೆ.
ಪೊಲೀಸರ ಮಾಹಿತಿ ಪ್ರಕಾರ, ನೆರೆಹೊರೆಯವರಿಗೆ ಆ ವ್ಯಕ್ತಿಯಾಗಲಿ ಅಥವಾ ನಾಯಿಯ ಮಾಲೀಕರಾಗಲಿ ಯಾರೆಂಬುದು ತಿಳಿದಿಲ್ಲ. ಸದ್ಯ ನಾಯಿಯನ್ನು ಎಳೆದುಕೊಂಡು ಸಾಯಿಸಿರುವ ವಿಡಿಯೋ ವೈರಲ್ ಆಗಿದೆ ಎಂದು ತಿಳಿಸಿದ್ದಾರೆ.
ನಾಯಿಯ ಸಾವಿನ ಬಗ್ಗೆ ಎನ್ವೈಪಿಡಿ ಪ್ರಾಣಿ ಕ್ರೌರ್ಯ ದಳ ತನಿಖೆ ನಡೆಸುತ್ತಿದೆ. ಶವ ಪರೀಕ್ಷೆ ನಡೆಸುವ ಮೂಲಕ ಸಂಸ್ಥೆಯು ಅಲ್ಲಿನ ಪೋಲಿಸರಿಗೆ ಬೆಂಬಲ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವಾಗ ವಿಡಿಯೋ ವೈರಲ್ ಆಯಿತೋ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅನೇಕ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಗೈದಿದ್ದು, ನಾಯಿ ಕೊಂದ ದುಷ್ಟನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. Panda Tsar ಹೆಸರಿನ ಬಳಕೆದಾರನೊಬ್ಬ ಪ್ರತಿಕ್ರಿಯಿಸಿ, ಪೊಲೀಸರನ್ನು ಮರೆತು ಬಿಡಿ, ಮೊದಲು ಆ ದುರುಳನನ್ನು ಹುಡುಕಿ ನಾಯಿಗೆ ಮಾಡಿದಂತೆ ಆತನಿಗೂ ಮಾಡಿ ಎಂದು ಬರೆದುಕೊಂಡಿದ್ದಾನೆ. (ಏಜೆನ್ಸೀಸ್)