ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಎರಡೂ ಬಣಗಳ ವಿಲೀನದ ಕುರಿತು ರಾಜ್ಯಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಅಧ್ಯಕ್ಷೆ ಸುನೇತ್ರಾ ಪವಾರ್ ಈ ಕುರಿತು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಎನ್‌ಸಿಪಿ ವಿಲೀನ ಪ್ರಕ್ರಿಯೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್, "ನಿಮಗೆ ಈ ವಿಷಯದಲ್ಲಿ ಹೆಚ್ಚಿನ ಕುತೂಹಲವಿದೆ ಎಂದು ಗೊತ್ತು, ಆದರೆ ಸಮಯ ಬಂದಾಗ ಎಲ್ಲವೂ ಸ್ಪಷ್ಟವಾಗಲಿದೆ" ಎಂದು ಹೇಳುವ ಮೂಲಕ ನೇರ ಉತ್ತರ ನೀಡದೆ ಜಾರಿಕೊಂಡರು. ಇತ್ತೀಚೆಗಷ್ಟೇ ಎನ್‌ಸಿಪಿಯ ಹಿರಿಯ ನಾಯಕರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.
ಆದರೆ ಈ ಸಭೆಯಲ್ಲಿ ಸುನೇತ್ರಾ ಪವಾರ್ ಹಾಗೂ ಅವರ ಪುತ್ರ ಪಾರ್ಥ ಪವಾರ್ ಭಾಗವಹಿಸಿರಲಿಲ್ಲ. ಇನ್ನೊಂದೆಡೆ, ಪಾರ್ಥ ಪವಾರ್ ಸೇರಿದಂತೆ ಕೆಲ ನಾಯಕರು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರೂ, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು
‘ಎರಡೂ ಬಣಗಳ ವಿಲೀನಕ್ಕೆ ದಿವಂಗತ ಅಜಿತ್ ದಾದಾ ಅವರೂ ಉತ್ಸುಕರಾಗಿದ್ದರು. ಅಜಿತ್ ಪವಾರ್ ಅಕಾಲಿಕ ಮರಣ ಹೊಂದದೇ ಇದ್ದರೆ ಫೆಬ್ರವರಿ 12 ರಂದೇ ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು’ ಎಂದು ಹಿರಿಯ ನಾಯಕ ಸುನಿಲ್ ತಟ್ಕರೆ ತಿಳಿಸಿದ್ದು, ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಎನ್‌ಸಿಪಿ ವಿಲೀನ ವಿಚಾರವಾಗಿ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ‘ಎರಡೂ ಬಣಗಳು ಒಂದಾಗಬೇಕಾದರೆ ಶರದ್ ಪವಾರ್ ಮತ್ತು ಸುನೇತ್ರಾ ಪವಾರ್ ನಿರ್ಧಾರ ಕೈಗೊಳ್ಳಬೇಕು. ಈ ವರೆಗೆ ಯಾರೂ ನಮ್ಮೊಂದಿಗೆ ಈ ಬಗ್ಗೆ ಅಧಿಕೃತವಾಗಿ ಚರ್ಚಿಸಿಲ್ಲ’ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಅಗಲಿಕೆಯ ನಂತರ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಪ್ರಸ್ತುತ ಬಿಜೆಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿ ಸರ್ಕಾರದಲ್ಲಿ ಸಕ್ರಿಯರಾಗಿದ್ದಾರೆ.(ಏಜೆನ್ಸೀಸ್)