

ಬೆಂಗಳೂರು: ಎಸ್‌ಸಿ, ಎಸ್‌ಟಿ ವಿಷಯಗಳು, ಪ್ರಶ್ನೆಗಳಿಗೆ ಅದೇ ಸಮುದಾಯದ ರಾಜಕೀಯ ಮುಖಂಡರೇ ಉತ್ತರಿಸಬೇಕೆಂದಿಲ್ಲ. ಪಕ್ಷದ ಎಲ್ಲ ಮುಖಂಡರು ಹೊಣೆಗಾರಿಕೆಯಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಸಲಹೆ ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಂವಿಧಾನ ಸನ್ಮಾನ ಅಭಿಯಾನ’ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಂವಿಧಾನವೆಂದರೆ ಎಸ್‌ಸಿ, ಎಸ್‌ಟಿಗೆ ಮಾತ್ರ ಸೀಮಿತವಾದದ್ದು ಎಂದು ಕಾಂಗ್ರೆಸ್ ಬಿಂಬಿಸುತ್ತಾ ಬಂದಿದ್ದು ಅದೇ ತಪ್ಪು ನಮ್ಮ ಪಕ್ಷದಿಂದಾಗಬಾರದು ಎಂದರು.
ಎಸ್‌ಸಿ, ಎಸ್‌ಟಿ ವಿಷಯಗಳಿಗೆ ಸಮುದಾಯದ ಬೇಧವಿಲ್ಲದರೆ ಮುತುವರ್ಜಿ ತೋರಿಸಿದರೆ ಬಹು ಬೇಗ ವಿಶ್ವಾಸ ಗಳಿಸಬಹುದು. ಇದರಿಂದಾಗಿ ಬಿಜೆಪಿ ಬಗ್ಗೆ ಎಸ್‌ಸಿ, ಎಸ್‌ಟಿ ಸಮುದಾಯದಲ್ಲಿ ವಿರೋಧಿಗಳು ತುಂಬಿರುವ ಪೂರ್ವಾಗ್ರಹ, ತಪ್ಪು ಅಭಿಪ್ರಾಯ ಹೋಗಲಾಡಿಸಲು ಸಾಧ್ಯವಿದೆ ಎಂದು ಹೇಳಿದರು.
ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು 2018ರಲ್ಲಿ ಯಾವುದೇ ಸಮಾರಂಭದಲ್ಲಿ ಯಾರೋ ಒಬ್ಬರು ಆಡಿದ ಮಾತು ಬಿಜೆಪಿಗೆ ತುಟ್ಟಿಯಾಯಿತು. ಸಂವಿಧಾನ ಬದಲಾಯಿಸುತ್ತಾರೆ ಎಂಬ ಅಪಪ್ರಚಾರಕ್ಕೆ ಎಡೆಮಾಡಿಕೊಟ್ಟಿತು.
ಈ ಅಪಪ್ರಚಾರವನ್ನು ಸಮರ್ಥವಾಗಿ ಎದುರಿಸದೆ 2018ರಲ್ಲಿ ಹಿನ್ನಡೆ ಅನುಭವಿಸಿದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರವೆಂಬ ಅಪಪ್ರಚಾರ ನಿರ್ವಹಣೆ ವಿಷಯದಲ್ಲಿ ಎಡವಿ ಮತ್ತೆ ಸೋತೆವು.
ಎರಡು ಚುನಾವಣೆಗಳಲ್ಲಿ ಅಪಪ್ರಚಾರದಿಂದ ನಾವು ಪಾಠ ಕಲಿಯಲಿಲ್ಲ. ಗಂಭೀರವಾಗಿ ಪರಿಗಣನೆ ಮಾಡದ ಪರಿಣಾಮ 2024ರ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಪುನರಾರ್ತನೆಯಾಯಿತು.
‘ಅಬ್ ಕೀ ಬಾರ್ ಚಾರ್ ಸೌ ಪಾರ್’ ಎಂಬ ಪಕ್ಷದ ಸ್ಲೋಗನ್‌ನ್ನು ಸಂವಿಧಾನ ಬದಲಾವಣೆಗೆ ಸುಲಭವೆಂಬ ಕಾರಣಕ್ಕೆ 400 ಸ್ಥಾನಗಳನ್ನು ಗೆಲ್ಲಿಸಲು ಬಿಜೆಪಿಯವರು ಕೇಳುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಯಿತು.
ತಪ್ಪು ಮಾಹಿತಿ, ಅಪಪ್ರಚಾರವೆಂದು ಹೇಳುವಲ್ಲಿ ಸೋತೆವು. ಸಾಮಾನ್ಯ ಜನರ ತಲೆಯಲ್ಲಿ ಅದೆಷ್ಟು ತುಂಬಿತ್ತೆಂದರೆ ‘ಸಂವಿಧಾನ ಬದಲಾಯಿಸ್ತೀರಂತಿಲ್ಲರೀ’ ಎಂದು ನಮ್ಮನ್ನೇ ಕೇಳಲಾರಂಭಿಸಿದರು.
ಸಮರ್ಪಕ ಉತ್ತರ, ಸಮರ್ಥವಾಗಿ ನಿಭಾಯಿಸದ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ನಿಚ್ಚಳ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆವು ಎಂದರು.
ಕಾಂಗ್ರೆಸ್‌ನವರು ಸುದೀರ್ಘವಾಗಿ 60 ವರ್ಷ ಆಳ್ವಿಕೆ ಮಾಡಿದರೂ ದಲಿತರಿಗೆ ಸಿಗಬೇಕಾದ ಸವಲತ್ತುಗಳು ಸಿಗಲಿಲ್ಲ ಎಂಬುದನ್ನು ನಾವು ತಿಳಿದು, ದಲಿತರಷ್ಟೇ ಎಲ್ಲ ಸಮುದಾಯಗಳ ಜನರಿಗೆ ಆರ್ಥ ಮಾಡಿಸಬೇಕಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು.
ಸಂವಿಧಾನಕ್ಕೆ ಈವರೆಗೆ 106 ತಿದ್ದುಪಡಿಗಳಾಗಿವೆ. ಈ ಪೈಕಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 75, ಕಾಂಗ್ರೆಸ್ಸೇತರ ಅಧಿಕಾರಾವಧಿಯಲ್ಲಿ 31 ತಿದ್ದುಪಡಿಗಳಾಗಿವೆ.
ಕಾಂಗ್ರೆಸ್ ಅಧಿಕಾರಾವಧಿಯ ತಿದ್ದುಪಡಿಗಳು ಯಾವುದಕ್ಕೆಲ್ಲ ಆಗಿವೆ, ಕಾಂಗ್ರೆಸ್ಸೇತರ ಅಧಿಕಾರದ ಅವಧಿಯಲ್ಲಿ ತಿದ್ದುಪಡಿ ಏಕಾದವು ? ಎಂಬುದನ್ನು ತುಲನಾತ್ಮಕವಾಗಿ ವಿವರಿಸಿ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದ ಗೋವಿಂದ ಕಾರಜೋಳ ಅಭಿಯಾನಕ್ಕೆ ದಿಕ್ಸೂಚಿ ಹಾಕಿಕೊಟ್ಟರು.
ಈ ಸಂದರ್ಭದಲ್ಲಿ ಶಾಸಕರಾದ ವಿ.ಸುನಿಲ್ ಕುಮಾರ್, ಎನ್.ರವಿಕುಮಾರ್, ಸಿ.ಟಿ.ರವಿ, ಸಿಮೆಂಟ್ ಮಂಜುನಾಥ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಉಪಾಧ್ಯಕ್ಷರಾದ ಎನ್.ಮಹೇಶ್, ಮಾಳವಿಕಾ ಅವಿನಾಶ್ ಇದ್ದರು.