'ಸಬ್​ ಕಾ ಸಾಥ್​, ಸಬ್ ಕಾ ವಿಕಾಸ್​...'ಸೂತ್ರದಡಿ ಈ ದೇಶದ 130 ಕೋಟಿ ಜನರ ಜವಾಬ್ದಾರಿ ನಮ್ಮದು: ಪ್ರಧಾನಿ ನರೇಂದ್ರ ಮೋದಿ

Modi Prayagraj 29 Feb 20
Published on

ಪ್ರಯಾಗ್​ರಾಜ್​: ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​​ ಮತ್ತು ಸಬ್​ ಕಾ ವಿಶ್ವಾಸ್​ ಸೂತ್ರದಡಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಒದಗಿಸುವುದು, ಅನುಕೂಲ ಮಾಡಿಕೊಡುವುದು ನಮ್ಮ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಸಹಾಯಕ ಸಾಧನಗಳನ್ನು ವಿತರಿಸಿ ಮಾತನಾಡಿ, ಈ ದೇಶದ 130 ಕೋಟಿ ಜನರು ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದರು.

ಬಿಜೆಪಿ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಅಂಗವಿಕಲರಿಗಾಗಿ 9000 ಶಿಬಿರಗಳನ್ನು ಹಮ್ಮಿಕೊಂಡಿದೆ. ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಿಗೆ ಅಗತ್ಯವಿರುವ ಸಾಧನಗಳನ್ನು ನೀಡಿದೆ. ನಾವು ಅಧಿಕಾರಕ್ಕೆ ಬರುವುದಕ್ಕೂ ಮೊದಲು ಇದ್ದ ಸರ್ಕಾರ ಅಂಗವಿಕಲರಿಗಾಗಿ, ಹಿರಿಯ ನಾಗರಿಕರಿಗಾಗಿ ಐದು ವರ್ಷದಲ್ಲಿ 380 ಕೋಟಿ ರೂಪಾಯಿ ವೆಚ್ಚದ ಸಲಕರಣೆಗಳನ್ನು ನೀಡಿತ್ತು. ಆದರೆ ನಮ್ಮ ಸರ್ಕಾರ 5 ವರ್ಷಗಳಲ್ಲಿ 9000 ಕೋಟಿ ರೂಪಾಯಿಯನ್ನು ಖರ್ಚು ಮಾಡಿದೆ. ಅಂದರೆ ಆಗಿನ ಸರ್ಕಾರ ವ್ಯಯ ಮಾಡಿದ ಎರಡು ಪಟ್ಟು ಹೆಚ್ಚು ಹಣವನ್ನು ಅಂಗವಿಕಲರ ಅಗತ್ಯಕ್ಕಾಗಿ ನಾವು ನೀಡಿದ್ದೇವೆ ಎಂದು ಮೋದಿ ಹೇಳಿದರು.

ಅಂಗವಿಕಲರಿಗೆ ನೀಡಲಾಗುವ ಸಲಕರಣೆಗಳು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ಅವರ ದೊಡ್ಡ ಶಕ್ತಿಯೆಂದರೆ ತಾಳ್ಮೆ, ಸಾಮರ್ಥ್ಯ ಮತ್ತು ಮನಸು ಎಂದು ಹೇಳಿದರು.

ಸುಮಾರು ಅರ್ಧಗಂಟೆ ಮಾತನಾಡಿದ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ತಿಳಿಸಿದರು. ಸಾಧನೆಗಳ ಬಗ್ಗೆ ವಿವರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net