

ಮದ್ದೂರು: ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಶಿಕ್ಷಣವನ್ನ ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಸಂವಿಧಾನದಲ್ಲಿ ಶಿಕ್ಷಣವನ್ನ ಕಡ್ಡಾಯಗೊಳಿಸಿದ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರು ಎಂದು ಚುಂಚಶ್ರೀ ಬಳಗದ ಅಧ್ಯಕ್ಷ ಡಾ.ಕೃಷ್ಣ ಹೇಳಿದರು.
ಪಟ್ಟಣದ ಡಾ.ಶಾಂತ ಮರಿಯಪ್ಪ ಸಭಾಂಗಣದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ವತಿಯಿಂದ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೇಶದಲ್ಲೇ ಅತ್ಯುತ್ತಮವಾದ ಶಿಕ್ಷಣವನ್ನು ಪಡೆದ ಅಂಬೇಡ್ಕರ್ ಅವರು ಸಮಾಜದ ಎಲ್ಲ ಸ್ಥರಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆದುದ್ದರ ಫಲವಾಗಿ ವಿಶ್ವದಲ್ಲೇ ಅತ್ಯುತ್ತಮವಾದ ಸಂವಿಧಾನವನ್ನು ರಚಿಸಲು ಸಾಧ್ಯವಾಯಿತು. ಇಂದಿಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿ ಸ್ವಾಭಿಮಾನದಿಂದ ಬದುಕಬೇಕೆಂದು ತೋರಿಸಿಕೊಟ್ಟವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಮಾತನಾಡಿ ಬುದ್ಧ, ಬಸವಣ್ಣರ ರೀತಿಯಲ್ಲಿ ಅಂಬೇಡ್ಕರ್ ಅವರು ಸಮಾಜದ ಎಲ್ಲರೂ ಶಿಕ್ಷಣ ಪಡೆದುಕೊಂಡು ಮೂಢನಂಬಿಕೆಗಳಿಂದ ಹೊರಬಂದು ಸಮಾಜದ ಅನ್ಯಾಯಗಳನ್ನು ಧೈರ್ಯವಾಗಿ ವಿರೋಧಿಸಬೇಕೆಂದು ಪ್ರತಿಯೊಬ್ಬರನ್ನು ಜಾಗೃತಿಗೊಳಿಸಿದವರು ಎಂದು ಬಣ್ಣಿಸಿದರು.
ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಉಪನ್ಯಾಸಕ ಸುರೇಂದ್ರ, ಮುಖ್ಯ ಶಿಕ್ಷಕರಾದ ಎನ್. ಕೃಷ್ಣ, ಎಚ್.ಪಿ.ಮಹೇಶ್, ಎಂ.ಟಿ.ಚಂದ್ರಶೇಖರ್, ವರದರಾಜು, ಶಿಕ್ಷಕರಾದ ಕೆಂಚೇಗೌಡ, ಪರಮೇಶ್ವರ್ ನಾಯಕ್, ಗಜಾನಂದ, ಅನಿತಾ, ಕೀರ್ತಿಕುಮಾರಿ, ಅಶ್ವಿನಿ, ಭವ್ಯಾ, ವಿಂದ್ಯಾರಾಣಿ, ಯಶಸ್ವಿನಿ ಇದ್ದರು.