

ಭದ್ರಾವತಿ: ರಾಷ್ಟ್ರ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮೆಲ್ಲರ ನೆಮ್ಮದಿಯ ಜೀವನಕ್ಕೆ ಸೈನಿಕರೇ ಕಾರಣ ಎಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಹೇಳಿದರು.
ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಸಭಾಂಗಣದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಭಾರತೀಯ ಸೈನ್ಯಕ್ಕೆ ಯುವಜನತೆ ಹೆಚ್ಚೆಚ್ಚು ಸೇರಬೇಕು. ರಾಷ್ಟ್ರ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು. ನಿವೃತ್ತ ಸೈನಿಕರ ಜೀವನೋಪಾಯಕ್ಕಾಗಿ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದರು.
ಸೈನಿಕರು ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ. ಇಂದು ಶಾಲೆಗಳಲ್ಲಿ ಕನ್ನಡ ಭಾಷೆಗಿಂತ ಇಂಗ್ಲಿಷ್ ಭಾಷೆಗೆ ಒಲವು ಹೆಚ್ಚುತ್ತಿರುವುದು ಬೇಸರದ ಸಂಗತಿ. ಹೀಗೆ ಮುಂದುವರಿದಲ್ಲಿ ಮುಂದಿನ ತಲೆಮಾರಿರಿಗೆ ಕನ್ನಡ ಭಾಷೆ ಉಳಿಸುವುದು ಕಷ್ಟಸಾಧ್ಯ ಎಂದರು.
ಸಂಘದ ಗೌರವಾಧ್ಯಕ್ಷ ಮೇಜರ್ ವಿಕ್ರಂ ಎಸ್. ಕೆದ್ಲಾಯ್ ಮಾತನಾಡಿ, ಮಾಜಿ ಸೈನಿಕರ ಸಂಘವು ದೇಶಸೇವೆ ಜತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಿದೆ. ಸಂಘಕ್ಕೆ ನಿವೇಶನದ ಅವಶ್ಯವಿದೆ. ನಗರಸಭೆಯಿಂದ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ಸಂಘದ ಅಧ್ಯಕ್ಷ ಸುಬೇದಾರ್ ಗುಲ್‌ಗುಲೆ. ಖಜಾಂಚಿ ಬೋರೇಗೌಡ, ವೆಂಕಟಗಿರಿ, ಬಿ.ಕೆ.ಹರೀಶ್ ಇತರರಿದ್ದರು.