ಸದಾ ಸರ್ವರ್ ಡೌನ್, ಡಿಜಿಟಲ್ ಪೇಮೆಂಟ್ ಫೇಲ್; ಆರ್​ಟಿಒನಲ್ಲಿ ಆನ್​ಲೈನ್ ಕಿರಿಕ್

RTO
Published on

ಹುಬ್ಬಳ್ಳಿ: ತ್ವರಿತ ಸೇವೆ, ಪಾರದರ್ಶಕ ಆಡಳಿತ ನೀಡುವ ಮಹತ್ತರ ಉದ್ದೇಶದಿಂದ ಜಾರಿಗೊಂಡ ಆನ್​ಲೈನ್ ಸೇವೆ ಹಾಗೂ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ರಾಜ್ಯದ ಆರ್​ಟಿಒ ಕಚೇರಿಗಳಲ್ಲಿ ಗ್ರಹಣ ಹಿಡಿದಿದೆ. ಸದಾ ಕಾಡುವ ಸರ್ವರ್ ಡೌನ್ ಸಮಸ್ಯೆ ಜನಸಾಮಾನ್ಯರು ಮತ್ತು ಭಾರಿ ವಾಹನ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಲಾರಿಗಳಿಗೆ ಪರವಾನಗಿ, ಲೈಸೆನ್ಸ್ ರಿನಿವಲ್, ವೆಹಿಕಲ್ ಟ್ಯಾಕ್ಸ್ ಇನ್ನಿತರ ಸೇವೆ ವಿಳಂಬವಾಗುತ್ತಿದ್ದು, ಈ ಮೊದಲಿನ ಮ್ಯಾನ್ಯುವಲ್ ವ್ಯವಸ್ಥೆಗಿಂತಲೂ ಆನ್​ಲೈನ್ ವ್ಯವಸ್ಥೆ ಕೆಟ್ಟದಾಗಿದೆ ಎಂದು ಟ್ರಾನ್ಸ್​ಪೋರ್ಟ್ಸ್ ಕಂಪನಿ ಮಾಲೀಕರು ಹಿಡಿಶಾಪ ಹಾಕುವಂತಾಗಿದೆ. ನ್ಯಾಷನಲ್, ಸ್ಟೇಟ್ ಪರ್ವಿುಟ್ ಏನೇ ಬೇಕಿದ್ದರೂ ವಾಹನ ಮಾಲೀಕರು ಆರ್​ಟಿಒ ಸಂರ್ಪಸಿ ಆನ್​ಲೈನ್​ನಲ್ಲಿ ಶುಲ್ಕ ಸಂದಾಯ ಮಾಡುತ್ತಾರೆ. ಹಾಗೆ ನೋಡಿದರೆ ಒಂದೇ ದಿನದಲ್ಲಿ ಪರ್ವಿುಟ್ ಸಿಗಬೇಕು.

ಆದರೀಗ ವಾರಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಏಕೆ ಹೀಗೆ? ಎಂದು ಕೇಳಿದರೆ, ‘ಸರ್ವರ್ ಡೌನ್, ನೆಟ್​ವರ್ಕ್ ಇಲ್ಲ, ಸ್ಟ್ರಕ್ ಆಗಿದೆ, ಕ್ಯಾಶ್ ಅಥವಾ ಡಿಡಿ ಕೊಡಿ’ ಎಂದು ಸಿಬ್ಬಂದಿ ಸಬೂಬು ಹೇಳುತ್ತಾರೆ. ಡಿಡಿ ತೆಗೆಯುವುದು ದೊಡ್ಡ ಸಮಸ್ಯೆ, ವೆಚ್ಚದಾಯಕ ಹಾಗೂ ವಿಳಂಬ ಕೂಡ. ಇದನ್ನು ತಪ್ಪಿಸಲೆಂದೇ ಆನ್​ಲೈನ್ ಪದ್ಧತಿ ಜಾರಿಗೊಳಿ ಸಿದ್ದು. ಇದೂ ಈಗ ಹಳ್ಳ ಹಿಡಿದಿರುವುದು ವಿಪರ್ಯಾಸ.

ತ್ವರಿತ ಹಣ ಪಾವತಿ ಸೇವೆ ಅಧ್ವಾನ ಸರಿಪಡಿಸುವಂತೆ ಜವಾಬ್ದಾರಿ ಸ್ಥಾನದಲ್ಲಿರುವ ಎಲ್ಲರಿಗೂ ಸಾಕಷ್ಟು ಬಾರಿ ದೂರು ನೀಡಲಾಗಿದೆ. ಆದರೂ ಸಮಸ್ಯೆ ಪರಿಹಾರಕ್ಕೆ ಗಂಭೀರ ಪ್ರಯತ್ನ ನಡೆದಿಲ್ಲ. ಆನ್​ಲೈನ್ ಪೇಮೆಂಟ್​ನಲ್ಲಿ ಹಣ ಸಂಬಂಧಪಟ್ಟ ಖಾತೆಗೂ ಜಮಾ ಆಗದೆ, ಮಾಲೀಕರ ಕೈಗೂ ಬಾರದೆ 5-6 ತಿಂಗಳು ‘ಸ್ಟ್ರಕ್’ ಆಗಿರುವ ಉದಾಹರಣೆ ಸಾಕಷ್ಟಿವೆ.

ನಗದು ಅನಿವಾರ್ಯ?: ಇಡೀ ದೇಶ ಈಗ ಡಿಜಿಟಲ್ ಪೇಮೆಂಟ್​ನತ್ತ ಹೊರಳುತ್ತಿದ್ದರೆ, ಸರ್ವರ್ ಸಮಸ್ಯೆ ಮುಂದಿಟ್ಟು ಕ್ಯಾಶ್ ಪಡೆಯುವ ವ್ಯವಸ್ಥೆಗೆ ಆರ್​ಟಿಒ ಕಚೇರಿಗಳು ಮುಂದಾಗಿವೆ. ಇದರಿಂದ ಬೇಗ ಪರ್ವಿುಟ್ ಸಿಗದೆ ವಾರಗಟ್ಟಲೆ ವಾಹನ ಓಡಿಸಲಾಗದೆ ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ. ನಿಗದಿತ ಶುಲ್ಕ ತುಂಬಿದರೂ ಫಿಟ್ನೆಸ್ ರಿನಿವಲ್ ಆಗುವುದಿಲ್ಲ. ಪ್ರತಿಯೊಂದಕ್ಕೂ ವಾಹನ ಮಾಲೀಕರು ಬಂದು ಆರ್​ಟಿಒ ಕಚೇರಿಯಲ್ಲಿ ಕಾದು ಕುಳಿತುಕೊಳ್ಳಬೇಕಾಗಿದೆ. ಹೀಗಾದರೆ, ಬಿಜಿನೆಸ್ ನಡೆಸುವುದು ಹೇಗೆ? ಈ ಪರಿಸ್ಥಿತಿಯನ್ನು ಹೇಳಿಕೊಂಡರೆ ಸ್ಪಂದಿಸುವ ಸೌಜನ್ಯವೂ ಕೆಲ ಅಧಿಕಾರಿ-ಸಿಬ್ಬಂದಿಗೆ ಇಲ್ಲ ಎಂದು ಭಾರಿ ವಾಹನ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.

ಸರ್ವರ್ ಸೇವೆಗಾಗಿ ಇಲಾಖೆ ಸಾಕಷ್ಟು ಹಣ ಖರ್ಚು ಮಾಡುತ್ತದೆ. ಆದರೆ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ಸರ್ವರ್ ಸೌಲಭ್ಯ ನೀಡಿದ ಎನ್​ಐಸಿ ಸಂಸ್ಥೆ ಕೂಡಾ ನಿರ್ಲಕ್ಷ್ಯ ತೋರುತ್ತಿದೆ. ಬ್ಯಾಂಕ್​ಗಳು ಸರ್ವರ್ ಮೂಲಕವೇ ದಿನದ 24 ಗಂಟೆಯೂ ಆನ್​ಲೈನ್ ಮನಿ ಟ್ರಾನ್ಸ್​ಫರ್ ಮತ್ತಿತರ ಸೇವೆ ನೀಡುತ್ತವೆ. ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಮಾತ್ರ ಸರ್ವರ್ ಸಮಸ್ಯೆ ಏಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ಸಚಿವರೇ ಗಮನಿಸಿ

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸ್ವತಃ ಕುಳಿತು ಈ ಸಮಸ್ಯೆ ಬಗೆಹರಿಸಬೇಕಿದೆ. ಅಭಿವೃದ್ಧಿಗೆ ಸಾರಿಗೆ ವ್ಯವಸ್ಥೆ ಸದಾ ಪೂರಕ, ಅತ್ಯಗತ್ಯ. ಮುಂದಿನ ದಿನಗಳಲ್ಲಿ ಇಲ್ಲಿ ಹೂಡಿಕೆದಾರರ ಸಮಾವೇಶ ಮಾಡುವವರಿದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ಮೊದಲು ಬಗೆಹರಿಸಿಕೊಳ್ಳಬೇಕು ಎಂಬುದು ಉದ್ಯಮ ವಲಯದ ಒತ್ತಾಯ. ಸಾರಿಗೆ ಇಲಾಖೆ ರಾಜ್ಯದ ಖಜಾನೆ ಭರ್ತಿ ಮಾಡುತ್ತದೆ.

ಹೆಚ್ಚಿನ ಆದಾಯ ನೀಡಿದರೂ ಆನ್​ಲೈನ್ ಸೇವೆ ಸಮಸ್ಯೆ, ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ದೊರೆಯುತ್ತಿಲ್ಲ. ಈ ಮಧ್ಯೆ ಕೇಂದ್ರ ಸರ್ಕಾರ ಸಾರಿಗೆ ವಾಹನಗಳ ನೋಂದಣಿ ಶುಲ್ಕ ಏರಿಸಿದೆ. ಆದರೆ ಅದಕ್ಕನುಗುಣವಾಗಿ ಸುಧಾರಣೆ ಶೂನ್ಯ.

ಸ್ಥಳಾಂತರವಾಗದ ದಾಖಲೆ

ಧಾರವಾಡ ಜಿಲ್ಲೆಯಲ್ಲಿ ಎರಡು ಆರ್​ಟಿಒ ಕಚೇರಿ ತೆರೆದು 3 ವರ್ಷವಾಯಿತು. ಆದರೆ ಸಂಬಂಧಪಟ್ಟ ದಾಖಲೆಗಳು ಮಾತ್ರ ಇನ್ನೂ ಸ್ಥಳಾಂತರ ಆಗಿಲ್ಲ. ಬಹುತೇಕ ವಾಹನಗಳ ಡೇಟಾ ಅಪ್​ಡೇಟ್ ಆಗಿಲ್ಲ. ಇದರಿಂದ ಜನ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಡಿಜಿ ಲಾಕರ್, ಎಂ-ಪರಿವಾಹನ್​ಗಳಲ್ಲೂ ಬಹಳಷ್ಟು ವಾಹನಗಳ ದಾಖಲೆ ಈಗಲೂ ಸಿಗುತ್ತಿಲ್ಲ. ಕೆಎ 25 ನೋಂದಣಿ ವಾಹನಗಳು ಡಿಜಿ ಲಾಕರ್ ಅಪ್​ಡೇಟ್ ಆಗುತ್ತಿಲ್ಲ. ಈ ಬಗ್ಗೆ ಸ್ವತಃ ಹೋಗಿ ಕೇಳಿದರೆ ಮಾತ್ರ ಅಂಥವರ ದಾಖಲೆಯನ್ನು ಎಂ- ಪರಿವಾಹನದಲ್ಲಿ ಹಾಕಿ ಕೊಡುತ್ತಾರೆ.

ಸೀಲ್​ನಲ್ಲಿ ಇರೋದೊಂದು ಆನ್​ಲೈನ್​ನಲ್ಲಿ ಮತ್ತೊಂದು

ಕೆಎ 63 ನೋಂದಣಿಯ ಆರ್​ಟಿಒ ಕಚೇರಿ ಸರ್ಕಾರಿ ದಾಖಲೆಗಳಲ್ಲಿ ಧಾರವಾಡ (ಪೂರ್ವ) ಎಂದಿದೆ. ಅಧಿಕೃತ ಸೀಲ್ ಸಹ ಹಾಗೇ ಇದೆ. ಆನ್​ಲೈನ್​ನಲ್ಲಿ ಆರ್​ಟಿಒ ‘ಹುಬ್ಬಳ್ಳಿ’ ಅಂತಿದೆ. ಇದರಿಂದ ಹೊರ ರಾಜ್ಯದವರು ಇಲ್ಲಿಯ ವಾಹನ ಖರೀದಿಸಿದರೆ ನೋಂದಣಿ ಮಾಡಿಕೊಳ್ಳಲು ತಾಂತ್ರಿಕ ಸಮಸ್ಯೆ ಎದುರಾಗಿ, ವ್ಯವಹಾರವೇ ಕೈಬಿಟ್ಟುಹೋಗಿರುವ ಉದಾಹರಣೆಯೂ ಇದೆ. ಈ ಸಮಸ್ಯೆ-ಗೊಂದಲ ಬಗೆಹರಿಸಿ ಎಂದು ವಿಆರ್​ಎಲ್ ಕಂಪನಿಯಿಂದ ವರ್ಷದ ಹಿಂದೆಯೇ ಸಾರಿಗೆ ಆಯುಕ್ತರು, ಸಚಿವರಿಗೆ ದೂರು ಸಲ್ಲಿಸಿ ಪರಿಹರಿಸಲು ವಿನಂತಿಸಲಾಗಿದೆ. ಆದರೆ ಈವರೆಗೂ ನಿವಾರಣೆಯಾಗಿಲ್ಲ.

ರಾಜ್ಯದಲ್ಲಿ ಮಾತ್ರವೇ ಸಮಸ್ಯೆ

ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಡಿಜಿಟಲ್ ಸೇವೆಯೇ ಹಿಂಸೆ ಉಂಟುಮಾಡತೊಡಗಿದೆ ಎಂಬ ವ್ಯಾಪಕ ದೂರು ಕೇಳಿಬರುತ್ತಿವೆ. ಪಕ್ಕದ ಮಹಾರಾಷ್ಟ್ರ, ಸೀಮಾಂಧ್ರ, ತಮಿಳುನಾಡು, ಗುಜರಾತ್, ದೆಹಲಿ ಮೊದಲಾದ ರಾಜ್ಯಗಳಲ್ಲಿ ಆನ್​ಲೈನ್ ವ್ಯವಸ್ಥೆ ಚುರುಕಾಗಿ, ಅದ್ಭುತವಾಗಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಮಾತ್ರ ಏಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರಿಸುವರಿಲ್ಲ. ಆನ್​ಲೈನ್ ಡೇಟಾ ನೋಂದಣಿ ಕೂಡಾ ಕಚೇರಿಗೆ ಹೋಗಿಯೇ ದಾಖಲಿಸುವ ಪರಿಸ್ಥಿತಿ ಕರ್ನಾಟಕದಲ್ಲಿದೆ. ಹಾಗಾಗಿ ಆನ್​ಲೈನ್ ವ್ಯವಸ್ಥೆ ಎನ್ನುವುದು ನಾಮ್ೆವಾಸ್ತೆ ಆಗಿದೆ.

ಆನ್​ಲೈನ್ ಪೇಮೆಂಟ್ ಹಾಗೂ ನೋಂದಣಿಯಲ್ಲಿ ಕೆಲವೊಮ್ಮೆ ಸರ್ವರ್ ಸಮಸ್ಯೆಯಾಗುವುದುಂಟು. ಅದು ತಾತ್ಕಾಲಿಕ. ತಾಂತ್ರಿಕ ಸಮಸ್ಯೆಗಳು ಬಂದಾಗ ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದೇವೆ. | ಸಾಂಬ್ರಾಣಿ ಎಂ. ಧಾರವಾಡ ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net