ಪ್ರತಿ 15 ದಿನಗಳಿಗೊಮ್ಮೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ

ULB meeting
Published on

ಬೆಂಗಳೂರು: ಮಳೆ ಅಭಾವದಿಂದ ಹಲವೆಡೆ ಬರಗಾಲ ಪರಿಸ್ಥಿತಿ ಸೃಷ್ಟಿಯಾಗಿದೆ. ಕುಡಿಯುವ ನೀರಿನ ಲಭ್ಯತೆ ಖಾತರಿಪಡಿಸಿಕೊಂಡು, ಲಭ್ಯವಿಲ್ಲದೆಡೆ ನೀರಿನ ವ್ಯವಸ್ಥೆ ಮಾಡಬೇಕು. ಜತೆಗೆ ಪ್ರತಿ ದಿನಗಳಿಗೊಮ್ಮೆ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಬೇಕು ಎಂದು ಪೌರಾಡಳಿತ ಸಚಿವ ರಹೀಂ ಖಾನ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೂಚಿಸಿದರು.

ವಿಕಾಸಸೌಧದಲ್ಲಿ ಶನಿವಾರ ಕರೆದಿದ್ದ ಬೆಂಗಳೂರು ವಿಭಾಗದ ಒಂಭತ್ತು ಜಿಲ್ಲೆಗಳ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವದ್ವಯರು, ಹಲವೆಡೆ ಕಲುಷಿತ ಕುಡಿಯುವ ನೀರಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಭಾವ ನೀಗಿಸುವ ಜತೆಗೆ ಶುದ್ಧ ಕುಡಿಯುವ ಪೂರೈಕೆಯನ್ನೂ ಖಚಿತಪಡಿಸಿಕೊಳ್ಳಬೇಕು ಎಂದರು.

ಚಿತ್ರದುರ್ಗ ಜಿಲ್ಲೆಯ ಕಾವಾಡಿಗರ ಹಟ್ಟಿಯಲ್ಲಿ ಸಂಭವಿಸಿದ ಪ್ರಕರಣವು ಮರುಕಳಿಸದಂತೆ ನೋಡಿಕೊಳ್ಳಬೇಕು. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಮರುಕಳಿಸಬಾರದು ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ರಹೀಂ ಖಾನ್ ಹಾಗೂ ಬೈರತಿ ಸುರೇಶ್ ತಾಕೀತು ಮಾಡಿದರು.

ಇಂದಿರಾ ಕ್ಯಾಂಟೀನ್‌ಗೆ ತಿಂಗಳ ಗಡುವು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಇಂದಿರಾ ಕ್ಯಾಂಟೀನ್’ ಸಮರ್ಪಕ ಅನುಷ್ಠಾನಕ್ಕೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೂಕ್ತ ಕ್ರಮವಹಿಸಬೇಕು. ಸಾಮಾನ್ಯ ಜನರಿಗೆ ಅನುಕೂಲಕರ ಸ್ಥಳಗಳಿಗೆ ಆದ್ಯತೆ ನೀಡಿ ತಿಂಗಳಲ್ಲಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ನಗರ-ಪಟ್ಟಣಗಳಲ್ಲಿ ಹೊಸದಾಗಿ ಒಟ್ಟು 188 ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಸ್ವಚ್ಛತೆ, ಶುಚಿತ್ವ, ಉತ್ತಮ ಗುಣಮಟ್ಟದ ಆಹಾರ ಪೂರೈಕೆ ವಿಷಯದಲ್ಲಿ ಯಾವುದೇ ರಾಜಿಯಿಲ್ಲ, ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಮೇಲ್ವಿಚಾರಣೆ ನಡೆಸಬೇಕು ಎಂದರು.

ನಗರೋತ್ಥಾನ ಯೋಜನೆ ತ್ವರಿತ ಅನುಷ್ಠಾನ, ಪೌರಕಾರ್ಮಿಕರಿಗೆ ವಸತಿ ಸೌಲಭ್ಯ, ಅಗತ್ಯವಿರುವೆಡೆ ಪೌರ ಕಾರ್ಮಿಕರ ನೇಮಕ, ನಗರ-ಪಟ್ಟಣಗಳಲ್ಲಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಪ್ರಗತಿ ಮೇಲೆ ನಿಗಾವಹಿಸಿ, ಅಡೆತಡೆಗಳನ್ನು ಶೀಘ್ರ ಇತ್ಯರ್ಥಪಡಿಸಿ ಯೋಜನೆ ಲಾಭ ಜನರಿಗೆ ಒದಗಿಸಲು ಅಧಿಕಾರಿಗಳು ಶ್ರಮಿಸಬೇಕು ಎಂಬ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ 15ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನ ಜಿಲ್ಲಾವಾರು ಬಳಕೆ, ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆ ಹಣ ಬಳಕೆ, ಆಸ್ತಿ ತೆರಿಗೆ ಸಂಗ್ರಹ, ಕಟ್ಟಡಗಳ ಪರವಾನಗಿ, ನೀರಿನ ಬಿಲ್ ಹಾಗೂ ಮಳಿಗೆಗಳ ಬಾಡಿಗೆ ವಸೂಲಿ ಮಾಹಿತಿ ಪಡೆದ ರಹೀಂ ಖಾನ್, ಬೆಂಗಳೂರು ವಿಭಾಗದಲ್ಲಿ ಖಾಲಿಯಿರುವ ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ಸೂಚಿಸಿದರು.

ನಗರಾಭಿವೃದ್ಧಿ, ಪೌರಾಡಳಿತ ಇಲಾಖೆಗಳ ಹಿರಿಯ ಅಧಿಕಾರಿಗಳು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಹಾಗೂ ರಾಮನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net