'ಪ್ರೇಮಲೋಕ 2'​ನಲ್ಲಿ ನೀವು ನಟಿಸಬಹುದು! ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ

WhatsApp-Image-2024-03-05-at-8.11.41-AM
Published on

ಬೆಂಗಳೂರು: ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಭಾಗಿಯಾಗಿ ವೇದಿಕೆ ಮೇಲೆ ಮಾತನಾಡಿದ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಕ್ರೇಜಿಸ್ಟಾರ್ ವಿ. ರವಿಚಂದ್ರನ್​, 80ರ ದಶಕದಲ್ಲೇ ಸೂಪರ್​ಡೂಪರ್​ ಹಿಟ್ ಆದ ಪ್ರೇಮಲೋಕ ಸಿನಿಮಾದ ಮುಂದುವರಿದ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ತಿಳಿಸಿದರು. ವಿಶೇಷವಾಗಿ ಸಿನಿಮಾ ಯಾವ ದಿನದಂದು ಸೆಟ್ಟೇರಲಿದೆ ಎಂಬುದನ್ನು ಕೂಡ ಅಧಿಕೃತವಾಗಿ ಹೇಳಿದ್ದಾರೆ.

ಮೇ 30ರಂದು 'ಪ್ರೇಮಲೋಕ 2' ಸಿನಿಮಾ ಶೂಟಿಂಗ್​ ಆರಂಭವಾಗಲಿದೆ ಎಂದ ರವಿಚಂದ್ರನ್, "ಈ ಸಿನಿಮಾಗೆ ನನ್ನ ಹಿರಿಯ ಮಗ ಮನೋರಂಜನ್ ನಾಯಕನಾಗಿ ನಟಿಸಿದರೆ, ಕಿರಿಯ ಪುತ್ರ ವಿಕ್ರಮ್ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾನು ತಂದೆಯ ಪಾತ್ರದಲ್ಲಿ ನಿಮ್ಮ ಮುಂದೆ ಬರುವೆ" ಎಂದು ಹೇಳಿದರು.

"ಪ್ರೇಮಲೋಕ 2ರಲ್ಲಿ ಕೇವಲ 20ರಿಂದ 25 ಹಾಡುಗಳು ಇರಲಿವೆ ಅಷ್ಟೇ. ಆದ್ರೆ, ಜೀವನಪೂರ್ತಿ ಇಡೀ ಸಿನಿಮಾದ ಸಾಂಗ್​ಗಳನ್ನು ವಯಸ್ಸಾದವರಿಂದ ಹಿಡಿದು ಚಿಕ್ಕ ಮಕ್ಕಳು ಕೂಡ ಮೆಲುಕು ಹಾಕುತ್ತಾರೆ. ಅಷ್ಟೊಂದು ಪ್ರೀತಿ ವಿಷಯ ಇದರಲ್ಲಿ ಇರಲಿದೆ. ಈ ಸಿನಿಮಾದಲ್ಲಿ ಜಾತಿಯಿಲ್ಲ, ಬೇಧ-ಭಾವವಿಲ್ಲ. ಇದು ಬೇರೇನೆ ಸಬ್ಜೆಕ್ಟ್​ ಆಗಿದೆ. ಆದರೆ ಇಲ್ಲಿ ಎಲ್ಲರಿಗೂ ಒಂದು ಅವಕಾಶವಿದೆ" ಎಂದರು.

"ಪ್ರೇಮಲೋಕ 2ನಲ್ಲಿ ಕಥೆ ನಡೆಯೋದೇ ಜನರ ಮಧ್ಯೆ, ಹಾಗಾಗಿ ಪ್ರತಿಯೊಬ್ಬರಿಗೂ ಈ ಚಿತ್ರದಲ್ಲಿ ಅವಕಾಶವಿದೆ. ಯಾರು ಯಾರು ಸಿನಿಮಾದಲ್ಲಿ ಪಾತ್ರರಾಗಬೇಕು ಎಂದು ಇಚ್ಛಿಸುತ್ತಿರೋ, ಅವರೆಲ್ಲಾ ನನ್ನ ಇನ್​ಸ್ಟಾಗ್ರಾಮ್​ ಖಾತೆಗೆ ನಿಮ್ಮ ಕುಟುಂಬದ ಫೋಟೋ ಟ್ಯಾಗ್ ಮಾಡಿ. ನಾನು ಅವರನ್ನು ಕರೆಸಿ ಶೂಟಿಂಗ್ ಮಾಡ್ತೀನಿ" ಎಂದಿದ್ದಾರೆ ರವಿಚಂದ್ರನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net