

ಜಾಗತಿಕವಾಗಿ ಸಮರ, ಸಂಘರ್ಷಗಳು ಹೆಚ್ಚಿದ್ದು ಹಲವು ದೇಶಗಳು ಸೈನಿಕರನ್ನು ಹೊರಗುತ್ತಿಗೆಯ ಮೇಲೆ ಪಡೆಯುತ್ತಿವೆ. ಹೀಗೆ ಸೈನಿಕರನ್ನು ನಿಯೋಜಿಸುವ, ಯುದ್ಧ ಕಾರ್ಯತಂತ್ರ ರೂಪಿಸುವ ಹಲವು ಕಂಪನಿಗಳೇ ಹುಟ್ಟಿಕೊಂಡಿದ್ದು, ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಗಳಿಸುತ್ತಿವೆ. ಸೈನಿಕರನ್ನು ಹೊರಗುತ್ತಿಗೆಗೆ ನೇಮಿಸಿಕೊಳ್ಳುವ ಮೂಲಕ ಹಲವು ದೇಶಗಳು ಯುದ್ಧದ ವೆಚ್ಚವನ್ನು ಕಡಿಮೆ ಮಾಡಿಕೊಂಡಿರುವುದು ಗಮನಾರ್ಹ. ಪಶ್ಚಿಮದ ದೇಶಗಳಲ್ಲಿ ಈ ಪ್ರವೃತ್ತಿ ಹೆಚ್ಚಿದ್ದು, ಭಾರತ ಬಲಿಷ್ಠ ಸೇನೆಯನ್ನು ಹೊಂದಿರುವುದರಿಂದ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಇದು ಹೊರಗುತ್ತಿಗೆಯ ಯುಗ! ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ರಂಗಗಳಲ್ಲಿ ಔಟ್ಸೋರ್ಸಿಂಗ್ ಪ್ರಕ್ರಿಯೆ ಹಾಸುಹೊಕ್ಕಾಗಿದೆ ಎಂಬುದು ಗೊತ್ತಿರುವಂಥದ್ದೇ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಅಸ್ಥಿರತೆಯ ವಾತಾವರಣವಿದ್ದು, ಯುದ್ಧ ಮತ್ತು ಸಂಘರ್ಷಗಳ ಸಂಖ್ಯೆ ಹೆಚ್ಚಿದೆ. ಎದುರಾಳಿ ದೇಶವನ್ನು ಎದುರಿಸಲು ಹಲವು ಕಾರ್ಯತಂತ್ರಗಳು ಹೆಣೆಯಲ್ಪಡುತ್ತಿವೆ. ಯೂಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಹಲವು ಭಾರತೀಯ ಯುವಕರನ್ನು ನೇಮಿಸಿಕೊಂಡಿದ್ದು ವಿವಾದಕ್ಕೆ ಗ್ರಾಸವಾಯಿತು.
ವಿದೇಶಗಳಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಹಲವು ಜಾಲಗಳು ಯುವಕರನ್ನು ರಷ್ಯಾ ಸೇನೆಗೆ ಸೇರಿಸಿದವು. ಈ ಬಗ್ಗೆ ರಾಜತಾಂತ್ರಿಕ ಮಾತುಕತೆ ನಡೆದು, ಹಲವರನ್ನು ಬಿಡುಗಡೆ ಮಾಡಲಾಯಿತು. ಸೇನೆಯಲ್ಲಿ ಮಾನವ ಸಂಪನ್ಮೂಲದ ಕೊರತೆಯನ್ನು ತುಂಬಿಕೊಳ್ಳಲು ಅದರಲ್ಲೂ ವಿಶೇಷವಾಗಿ ಯುದ್ಧದ ಸಂದರ್ಭಗಳಲ್ಲಿ ಆಕ್ರಮಕವಾಗಿ ಹೋರಾಡಲು ಅನುಕೂಲವಾಗಲೆಂದು ಹಲವು ದೇಶಗಳು ಸೈನಿಕರನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳುತ್ತಿವೆ. ರಾಷ್ಟ್ರಗಳು ಅಥವಾ ಕಂಪನಿಗಳು ತಮ್ಮ ಸ್ವಂತ ಸೈನ್ಯದ ಬದಲಿಗೆ ಖಾಸಗಿ ಕಂಪನಿಗಳಿಂದ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಯುದ್ಧ, ಭದ್ರತೆ, ತರಬೇತಿ, ಗುಪ್ತಚರ ಕಾರ್ಯಗಳನ್ನು ನಡೆಸುತ್ತಿವೆ.
ಸೈನಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಯುದ್ಧ ನಡೆಸುವುದು (ಪ್ರೖೆವೇಟ್ ಮಿಲಿಟರಿ ಕಂಟ್ರ್ಯಾಕ್ಟರ್ಸ್- ಪಿಎಂಸಿ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಚಾಲ್ತಿಗೆ ಬಂದಿದೆ. ಖಾಸಗಿ ಸೇನಾ ಕಂಪನಿಗಳು ಸ್ಪರ್ಧಾತ್ಮಕ ದರದಲ್ಲಿ ಸೈನಿಕರನ್ನು ಒದಗಿಸುತ್ತಿರುವುದೇ ಬೇಡಿಕೆ ಹೆಚ್ಚಲು ಕಾರಣವಾಗಿದೆ. ಅಮೆರಿಕ ಮತ್ತು ಪಶ್ಚಿಮದ ಇತರ ದೇಶಗಳು ಹೆಚ್ಚಾಗಿ ಖಾಸಗಿ ಸೇನಾ ಕಂಪನಿಗಳನ್ನು ಅವಲಂಬಿಸಿವೆ.
ಖಾಸಗಿ ಸೇನಾ ಕಂಪನಿಗಳು ಒದಗಿಸುವ ಸೈನಿಕ ರನ್ನು ಯುದ್ಧದಲ್ಲಿ ನಿಯೋಜಿಸಲಾಗುತ್ತದೆ.
ಯುದ್ಧಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಮಾನವೀಯ ನೆರವು ನೀಡಲು, ಪರಿಹಾರ ಸಾಮಗ್ರಿಗಳನ್ನು ವಿತರಿಸಲು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಖಾಸಗಿ ಸೈನಿಕರನ್ನು ಬಳಸಲಾಗುತ್ತದೆ.
ಯುದ್ಧಪ್ರದೇಶಗಳ ಪುನರ್ ನಿರ್ಮಾಣ ಅಥವಾ ಪ್ರಾಕೃತಿಕ ವಿಕೋಪದಿಂದ ತೀವ್ರ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ವಣಕ್ಕೂ ನಿಯೋಜಿಸಲಾಗುತ್ತದೆ.
ಹಿಂಸಾಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರುವ ಜವಾಬ್ದಾರಿ ವಹಿಸಲಾಗುತ್ತದೆ.
ನಾಗರಿಕ ಪ್ರದೇಶಗಳ ಮೇಲೆ ಶತ್ರುಗಳಿಂದ ದಾಳಿಯಾಗದಂತೆ ಭದ್ರತೆಗೂ ನೇಮಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲೂ ಹೊರಗುತ್ತಿಗೆ ಸೈನಿಕರನ್ನು ನಿಯೋಜಿಸಲಾಗುತ್ತಿದೆ.
ಖಾಸಗಿ ಕಂಪನಿಗಳು ಹೆಚ್ಚಾಗಿ ನಿವೃತ್ತ ಯೋಧರನ್ನು ಮತ್ತು ಸದೃಢ ಕಾಯದ ಯುವಕರನ್ನು ನೇಮಿಸಿಕೊಳ್ಳುತ್ತವೆ, ಸರ್ಕಾರಿ ಸೇನೆ ಸೇರಲು ಪ್ರಯತ್ನಿಸಿ ವಿಫಲವಾದ ಅಸಂಖ್ಯ ಯುವಕರು ಖಾಸಗಿ ಮಿಲಿಟರಿ ಸೇವಾ ಕಂಪನಿಗಳಿಗೆ ಆಯ್ಕೆಯಾಗುತ್ತಾರೆ.
ಯುದ್ಧ ವೆಚ್ಚ ಕಡಿಮೆ.
ಸೇನೆಯಲ್ಲಿ ಮಾನವ ಸಂಪನ್ಮೂಲದ ಕೊರತೆ ಯನ್ನು ನೀಗಿಸಲು ಪೂರಕ.
ನುರಿತ ಮತ್ತು ತರಬೇತಿ ಹೊಂದಿದ ಸೈನಿಕರೇ ಲಭ್ಯ ಆಗುವುದರಿಂದ ಶೀಘ್ರ ನಿಯೋಜನೆ.
ಮಾನವೀಯ ನೆರವು ಒದಗಿಸುವ ಸಂದರ್ಭದಲ್ಲಿ ಖಾಸಗಿ ಕಂಪನಿಗಳೇ ಉಸ್ತುವಾರಿ ವಹಿಸಿಕೊಳ್ಳುವ ಮೂಲಕ ಉತ್ತರದಾಯಿ ಗಳಾಗಿರುತ್ತವೆ. ಹೀಗಾಗಿ ಸರ್ಕಾರದ ಮುಖ್ಯಸ್ಥರು ಇತರ ಕೆಲಸಗಳತ್ತ ಗಮನ ಹರಿಸಬಹುದು.
ಪಾಶ್ಚಿಮಾತ್ಯ ದೇಶಗಳು ಸರ್ಕಾರಿ ಸೇನೆಯಲ್ಲಿ ನೇಮಕಾತಿಯನ್ನು ಕಡಿಮೆಗೊಳಿಸಿವೆ ಅಥವಾ ಸೀಮಿತಗೊಳಿಸಿವೆ. ಮಿಲಿಟರಿ ವೆಚ್ಚ ಕಡಿತ ಇದಕ್ಕೆ ಪ್ರಮುಖ ಕಾರಣ.
ಖಾಸಗಿ ಸೇನಾ ಕಂಪನಿಗಳು ಕಡಿಮೆ ದರದಲ್ಲಿ ಸೈನಿಕರನ್ನು ಪೂರೈಸುವುದರಿಂದ ಯುದ್ಧ ಅಥವಾ ಇತರ ಕಾರ್ಯಾಚರಣೆಗಳ ವೆಚ್ಚ ತಗ್ಗುತ್ತದೆ. ಕೆಲ ಕಂಪನಿಗಳು ಮಾನವ ಸಂಪನ್ಮೂಲ ಒದಗಿಸುವುದರ ಜತೆಗೆ ಕಾರ್ಯತಂತ್ರವನ್ನೂ ಹೆಣೆದುಕೊಡುತ್ತವೆ.
ಸರ್ಕಾರಗಳು ಬೇಡಿಕೆ ಇಟ್ಟಾಕ್ಷಣ ಪಿಎಂಸಿಗಳು ಸೈನಿಕರನ್ನು
ಒದಗಿಸುವುದರಿಂದ, ಲಭ್ಯತೆ ಸುಲಭ ವಾಗಿದೆ.
ಯುದ್ಧದ ವೇಳೆ ಖಾಸಗಿ ಕಂಪನಿಯ ಸೈನಿಕರು ಮೃತರಾದರೆ ಅದಕ್ಕೆ ಹೊಣೆ ಯಾರು? ಪರಿಹಾರ ಯಾರು ನೀಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಖಾಸಗಿ ಸೈನಿಕರು ಸಂಬಳಕ್ಕೆ ಬಂದಿರುತ್ತಾರೆ. ಹೀಗಾಗಿ ದೇಶಭಕ್ತಿ ಇರುವುದಿಲ್ಲ ಎಂಬ ವಾದಗಳೂ ಇವೆ.
ಸರ್ಕಾರಿ ಸೇನೆ ಮತ್ತು ಖಾಸಗಿ ಕಂಪನಿಯ ಸೈನಿಕರ ನಡುವೆ ಸಮನ್ವಯದ ಕೊರತೆಯೂ ಕಾಡುತ್ತದೆ. ಇಂಥ ಸಂದರ್ಭಗಳಲ್ಲಿ ಶಸ್ತ್ರಾಸ್ತ್ರ ಪೂರೈಕೆ, ನಿಖರ ಮಾಹಿತಿ ನೀಡುವಿಕೆ ಸೇರಿದಂತೆ ಅನೇಕ ವಿಷಯಗಳಲ್ಲಿ ಸಮನ್ವಯ ತಪ್ಪಿ, ಸಮರವೇ ಸೋಲಿನ ಅಂಚಿಗೆ ವಾಲುವ ಅಪಾಯವಿರುತ್ತದೆ.
ಅಪಾಯದ ಸಮಯದಲ್ಲಿ ಯುದ್ಧಭೂಮಿ ಯಿಂದಲೇ ಓಡಿಹೋಗುವ ಸಾಧ್ಯತೆ.
ಖಾಸಗಿ ಸೇನಾ ಕಂಪನಿಗಳು ಕಾರ್ಪೆರೇಟ್ ಮಾದರಿಯಲ್ಲಿ ಕೆಲಸದ ಸಂಸ್ಕೃತಿಯನ್ನು ರೂಪಿಸಿಕೊಂಡಿವೆ. ಬೇಡಿಕೆಗಳನ್ನು ಸ್ವೀಕರಿಸುವುದು, ಅದನ್ನು ಆದ್ಯತೆಯ ಮೇಲೆ ಪೂರೈಸುವುದು, ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುತ್ತವೆ. ಹಲವು ಕಂಪನಿಗಳು ಸಿಬ್ಬಂದಿಗೆ ಉತ್ತಮ ಸಂಬಳ, ಭತ್ಯೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಇದು ಆಕರ್ಷಣೆಯ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಉದ್ಯೋಗಸೃಷ್ಟಿಯ ಮಾಧ್ಯಮವೂ ಆಗಿದೆ. ಅಮೆರಿಕದ ಕಾನಸ್ಟೇಲಿಸ್ ಕಂಪನಿಯ ವಾರ್ಷಿಕ ಆದಾಯ 12,400 ಕೋಟಿ ರೂ. ಇದ್ದು, ಇದು 12,700 ಸಿಬ್ಬಂದಿಯನ್ನು ಹೊಂದಿದೆ. ಕೆನಡಾದ ಗಾರ್ಡಾವರ್ಲ್ಡ್ ಕಂಪನಿಯಂತೂ 12ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಷ್ಯಾ ಮತ್ತು ಯೂಕ್ರೇನ್ ನಡುವೆ ಇತ್ತೀಚೆಗಷ್ಟೇ ಕದನವಿರಾಮ ಏರ್ಪಟ್ಟಿದ್ದು, ಯೂಕ್ರೇನ್ ಪುನರ್ ನಿರ್ವಣದ ನಿಟ್ಟಿನಲ್ಲೂ ಪಿಎಂಸಿಗಳು ಕಾರ್ಯ ಆರಂಭಿಸಲಿವೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಆಪ್ತರಾಗಿದ್ದ ಯೆವ್ಗೆನಿ ಪ್ರಿಗೋಷಿನ್ ಅವರು ಪುತಿನ್ ಬೆಂಬಲದ ಮೂಲಕವೇ 2014ರಲ್ಲಿ ‘ವ್ಯಾಗ್ನರ್’ ಎಂಬ ಖಾಸಗಿ ಮಿಲಿಟರಿ ಪಡೆ ಕಟ್ಟಿದ್ದರು. ಯೆವ್ಗೆನಿ ಪ್ರಿಗೋಷಿನ್ ಸೇಂಟ್ ಪೀಟರ್ಸ್ಬರ್ಗ್ ಮೇಯರ್ ಆಗಿಯೂ ಅಧಿಕಾರ ನಡೆಸಿದ್ದರು. ರಷ್ಯಾ- ಯೂಕ್ರೇನ್ ಯುದ್ಧದಲ್ಲಿ ವ್ಯಾಗ್ನರ್ ರಷ್ಯಾದ ಪರವಾಗಿ ಹೋರಾಟಕ್ಕೆ ಇಳಿದಿತ್ತು. ಅಲ್ಲದೆ, ಯೂಕ್ರೇನಿನ ಬಖ್ಮಟ್ ನಗರವನ್ನು ವಶಪಡಿಸಿಕೊಳ್ಳುವ ಸಲುವಾಗಿ ನಡೆದ ಭೀಕರ ಕದನದಲ್ಲಿ ರಷ್ಯಾ ಪಡೆಗಳು ಯಶಸ್ವಿಯಾಗುವಲ್ಲಿ ‘ವ್ಯಾಗ್ನರ್’ ಗುಂಪಿನ ಪಾತ್ರ ನಿರ್ಣಾಯಕವಾಗಿತ್ತು. ಆದರೆ, ಸಮರ ನಡೆಯುತ್ತಿರುವಾಗಲೇ 2023ರ ಜೂನ್ನಲ್ಲಿ ಪ್ರಿಗೋಷಿನ್ ಸೂಚನೆಯಂತೆ ವ್ಯಾಗ್ನರ್ ಪುತಿನ್ ಮತ್ತು ರಷ್ಯಾ ಪಡೆ ವಿರುದ್ಧವೇ ಬಂಡಾಯವೆದ್ದಿತು. ಯೂಕ್ರೇನ್ ವಿರುದ್ಧ ಹೋರಾಡುತ್ತಿರುವ ತನ್ನ ಸೈನಿಕರಿಗೆ ರಷ್ಯಾ ಸೇನೆಯ ಅಧಿಕಾರಿಗಳು ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದ ಪ್ರಿಗೋಷಿನ್, ರಷ್ಯಾ ಸರ್ಕಾರಿ ಸೇನೆಯ ಅಧಿಕಾರಿಗಳು ಅಸರ್ಮಥರು ಎಂದು ಟೀಕಿಸಿದ್ದರು. ಸೇನಾ ನಾಯಕತ್ವದ ವಿರುದ್ಧವೇ ದಂಗೆ ಎದ್ದಿರುವ ಖಾಸಗಿ ಮಿಲಿಟರಿ ಪಡೆ ವ್ಯಾಗ್ನಾರ್ ಗುಂಪು ‘ಬೆನ್ನಿಗೆ ಚೂರಿ ಹಾಕಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕಿಡಿಕಾರಿದ್ದರು. ವ್ಯಾಗ್ನರ್ ಖಾಸಗಿ ಮಿಲಿಟರಿ ಪಡೆಯು 25 ಸಾವಿರಕ್ಕೂ ಅಧಿಕ ಸೈನಿಕರನ್ನು ಹೊಂದಿದೆ.