

ಬೆಂಗಳೂರು: ಕೃಷಿ, ಗ್ರಾಮೀಣಾಭಿವೃದ್ದಿ, ರೈತ ಕಲ್ಯಾಣ, ಬಡವರ ತಲೆಯ ಮೇಲೊಂದು ಸೂರು ಹೀಗೆ ಹಲವು ಯೋಜನೆಗಳಡಿ ಕರ್ನಾಟಕ ಸರ್ಕಾರ ಕೇಳದೇ ಇದ್ದರೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕರ್ನಾಟಕ ವಿಕಾಸಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಹೇಳಿದರು.
ಶಿವಮೊಗ್ಗದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ಶನಿವಾರ ಬೆಂಗಳೂರಿಗೆ ಆಗಮಿಸಿರುವ ಚವ್ಹಾಣ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರತೀ ಬಡವನಿಗೂ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಸಂಕಲ್ಪವಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳನ್ನು ಕಟ್ಟಲು ಒಪ್ಪಿಗೆ ನೀಡಿ ಕಅನುದಾನವನ್ನೂ ಕೊಟ್ಟಿದ್ದೇವೆ. ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಗುರಿಯನ್ನು ಇಂದು ಮತ್ತೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿಯಾಗಿ 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ ಎಂದರು
ಕರ್ನಾಟಕದ ಅಡಿಕೆ ಬೆಳಗಾರರ ಸಮಸ್ಯೆಗಳ ಪರಿಹಾರಕ್ಕೆ ಅನುದಾನವನ್ನು ರಾಜ್ಯ ಸರ್ಕಾರ ಕೋರಿದೆ. ಅದಕ್ಕಾಗಿ 97 ಕೋಟಿ ರೂ ಬಿಡುಗಡೆ ಮಾಡುತ್ತಿದ್ದೇವೆ. ಸಚಿವರಾದ ಕೃಷ್ಣಬೈರೇಗೌಡ, ಎನ್.ಚಲುವರಾಯಸ್ವಾಮಿ ಹಾಗೂ ಪ್ರಿಯಾಂಕ್ ಖರ್ಗೆ ಭೇಟಿಯಾಗಿ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದನ್ನೂ ಆದ್ಯತೆ ಮೇರೆಗೆ ಈಡೇರಿಸಲು ಕ್ರಮವಹಿಸಲಾಗುವುದು ಎಂದು ಚವ್ಹಾಣ್ ಭರವಸೆ ನೀಡಿದರು.
ಬಿಡುಗಡೆ ಮಾಡಿರುವ ಹಾಗೂ ಘೋಷಣೆ ಮಾಡಿರುವ ಅನುದಾನವನ್ನು ಕರ್ನಾಟಕ ಸರ್ಕಾರದಿಂದ ಸದ್ಬಳಕೆ ಆಗಲಿ. ಅನುದಾನ ಕೇಳದಿದ್ರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ ಎಂಬ ಮಾಹಿತಿಯನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಹಂಚಿಕೊಂಡರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆದಷ್ಟು ಬೇಗ ಶುರುವಾಗಲಿದೆ. ನಮ್ಮ ಪಕ್ಷದಲ್ಲಿ ಬೂತ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಸಿ ಆಯ್ಕೆ ಮಾಡುತ್ತೇವೆ ಎಂದು ಕರ್ನಾಟಕದ ಬಿಜೆಪಿ ಚುನಾವಣಾ ಉಸ್ತುವಾರಿಯೂ ಆದ ಶಿವರಾಜ್ ಸಿಂಗ್ ಚವ್ಹಾಣ್ ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಸೇರಿ ಚರ್ಚಿಸಿ ಸರ್ವಾನುಮತದಿಂದ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂಬ ವಿಶ್ವಾಸವನ್ನೂ ಚವ್ಹಾಣ್ ವ್ಯಕ್ತಪಡಿಸಿದರು.