ಅರಮನೆಯಲ್ಲಿದ್ದರೂ ಜನಸೇವೆಗೆ ಸದಾ ಸಿದ್ಧ

1711868624794
Published on

ಕಂಪಲಾಪುರ: ನಾನು ಅರಮನೆಯಲ್ಲಿದ್ದರೂ ಸಾರ್ವಜನಿಕ ಸೇವೆಗಾಗಿ ಸದಾ ಬಾಗಿಲು ತೆರೆದಿರುತ್ತದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.


ಕಂಪಲಾಪುರದ ವಿನಾಯಕ ಸರ್ಕಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಅರಮನೆ ನಾಡಿನ ಪರಂಪರೆಯ ಸಂಕೇತ, ಅಂದಿನ ಕಾಲದಲ್ಲಿ ಜನಸಾಮಾನ್ಯರ ಒಳಿತಿಗಾಗಿ ಅರಸರು ನಾಡಿಗೆ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ನಾನು ರಾಜವಂಶಸ್ಥನಾದರೂ ಅನಿವಾರ್ಯವಾಗಿ ನಿಮ್ಮ ಸೇವೆಗಾಗಿ ರಾಜಕೀಯಕ್ಕೆ ಬರಬೇಕಾಯಿತು. ಅರಮನೆ ಜತೆ ನಿಮ್ಮೆಲ್ಲರಿಗೂ ಭಾವನಾತ್ಮಕ ಸಂಬಂಧವಿದೆ. ಅದಕ್ಕೆ ನಾನು ನಿಮಗೆ ಚಿರಋಣಿಯಾಗಿದ್ದೇನೆ ಎಂದರು.


ರಾಜವಂಶಸ್ಥರು ಜನಸೇವೆಗೆ ಅರಮನೆಯಿಂದ ಹೊರ ಬರುತ್ತಾರೆಯೇ ಎಂಬ ಪ್ರಶ್ನೆ ಇದೆ. ನಿಮ್ಮ ಆಶೀರ್ವಾದದಿಂದ ಸಂಸದನಾದರೆ ಅರಮನೆ ಹೊರಭಾಗದಲ್ಲೇ ಕಚೇರಿಯನ್ನು ತೆರೆಯುತ್ತೇನೆ. ನಿಮ್ಮ ಸಮಸ್ಯೆ ಏನೇ ಇದ್ದರೂ ಬಂದು ಪರಿಹರಿಸಿಕೊಳ್ಳಬಹುದು, ನಿಮ್ಮ ಹಾಗೂ ಪಕ್ಷದ ಎಲ್ಲರ ಹಿರಿಯರ ಸಲಹೆ ಪಡೆದು ನಿಮ್ಮ ಸೇವೆ ಮಾಡುತ್ತೇನೆ ಎಂದರು.


ಈ ನಾಡು ಕಂಡ ಪ್ರಬುದ್ಧ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸಗಳು ಇಡೀ ದೇಶವೇ ಮೆಚ್ಚುವಂತದ್ದು, ದೇಶದ ಹಿರಿಮೆಯನ್ನು ಪ್ರಪಂಚಕ್ಕೆ ಸಾರಿದ ಧೀಮಂತ ನಾಯಕ, ಅವರ ಸೇವೆ ಈ ನಾಡಿಗೆ ಇನ್ನೂ ಬೇಕಾಗಿದೆ. ಆದ್ದರಿಂದ ನೀವೆಲ್ಲಾ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನನಗೆ ಮತನೀಡಿ ಎಂದರು.


ಗ್ರಾಮಕ್ಕೆ ಆಗಮಿಸಿದ ಯದುವೀರ್ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಹರಿಲಾಪುರ ಗ್ರಾಮದ ಸುಬ್ರಹ್ಮಣ್ಯ, ಶೇಖರ್ ಸೇರಿದಂತೆ ಹಲವರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದರು.
ಮಾಜಿ ಸಚಿವ ಎಸ್.ಎ.ರಾಮದಾಸ್, ಮಾಜಿ ಶಾಸಕ ಎಚ್.ಸಿ.ಬಸವರಾಜ್, ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಕೌಲನಳ್ಳಿ ಸೋಮಶೇಖರ್, ವಿಕ್ರಮ್ ರಾಜ್, ಎಂ.ಎಂ.ರಾಜೇಗೌಡ, ಪಿ.ಪಟ್ಟಣ ಮಂಡಲ ಅಧ್ಯಕ್ಷ ಎಚ್.ಡಿ.ರಾಜೇಂದ್ರ, ಜಿಲ್ಲಾ ಪ್ರಭಾರಿ ಯೋಗಾನಂದ, ಮುಖಂಡರಾದ ಲೋಕಪಾಲಯ್ಯ, ಆರ್.ಟಿ.ಸತೀಶ್, ಕಿರಣ್ ಜಯರಾಮೇಗೌಡ, ಉಪಾಧ್ಯಕ್ಷ ಎ.ಮಂಜು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶರವಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net