

ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ಬಿಸಿಲಿನ ಪ್ರಖರತೆ ತಾರಕಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳನ್ನು ಬಿಸಿಲಿನ ಝಳದಿಂದ ರಕ್ಷಿಸಿ, ತಂಪಾಗಿರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮಾರ್ಚ್ ಎರಡನೇ ವಾರದಲ್ಲಿಯೇ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉಷ್ಣಾಂಶ ದಾಖಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಾಣಿಗಳು ಬಿಸಿಲಿನ ಬೇಗೆ ತಾಳಲಾರದೆ ಸಮಸ್ಯೆ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಣಿಗಳನ್ನು ಬಿಸಿಲಿನ ಝಳದಿಂದ ರಕ್ಷಿಸಿ, ತಂಪಾಗಿಸುತ್ತಿದ್ದಾರೆ.
ಮುಖ್ಯವಾಗಿ ಪ್ರಾಣಿಗಳಿಗೆ ನೀರು ಸಿಂಪಡಣೆ, ಕೊಳಗಳ ನಿರ್ಮಾಣ ಮಾಡಲಾಗಿದೆ. ಹಣ್ಣು ಹಾಗೂ ತಂಪಾದ ಪಾನೀಯ ನೀಡಲಾಗುತ್ತಿದೆ. ಚಿಂಪಾಂಜಿಗಳಿಗೆ ಎಳನೀರು ನೀಡಲಾಗುತ್ತಿದ್ದು, ಕರಡಿಗಳಿಗೆ ಐಸ್‌ಬಾಕ್ಸ್‌ನಲ್ಲಿ ಕಲ್ಲಂಗಡಿ, ಕಿತ್ತಳೆ ಇನ್ನಿತರ ತಾಜಾ ಹಣ್ಣುಗಳನ್ನು ಪ್ರತಿನಿತ್ಯ ನೀಡಲಾಗುತ್ತಿದೆ. ಇನ್ನು ಹುಲಿ, ಸಿಂಹ, ಚಿರತೆಗಳಿಗೆ ಅವುಗಳ ಪ್ರಾಂಗಣದಲ್ಲಿ ಕೊಳಗಳನ್ನು ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಅಲ್ಲದೆ, ಪ್ರತಿದಿನ ಎರಡು ಬಾರಿ ಕೊಳದ ನೀರನ್ನು ಬದಲಾಯಿಸಲಾಗುತ್ತಿದ್ದು, ಪ್ರಾಣಿಗಳು ಕೊಳದಲ್ಲಿಯೇ ಸ್ನಾನ ಮಾಡುತ್ತಿವೆ.
ಕೆಸರು ಗುಂಡಿ ನಿರ್ಮಾಣ:
ಆನೆ ಮತ್ತು ಜಿಂಕೆಗಳಿಗಾಗಿ ಕೆಸರು ಗುಂಡಿ ನಿರ್ಮಿಸಲಾಗಿದೆ. ಈ ಪ್ರಾಣಿಗಳು ಇರುವ ಸ್ಥಳದಲ್ಲಿ ಮಣ್ಣಿಗೆ ನೀರು ಮಿಶ್ರಣ ಮಾಡಿದ್ದು, ಆನೆಗಳು ಕೆಸರನ್ನು ಮೈಮೇಲೆ ಎರಚಿಕೊಂಡು ದೇಹವನ್ನು ತಂಪು ಮಾಡಿಕೊಳ್ಳುತ್ತಿವೆ. ಜಿಂಕೆಗಳು ಕೆಸರಿನಲ್ಲಿ ಕುಳಿತು ತಂಪಾಗುತ್ತಿವೆ. ಈ ಕ್ರಮಗಳಿಂದ ಮೃಗಾಲಯದ ಪ್ರಾಣಿಗಳು ತಂಪು ವಾತಾವರಣವನ್ನು ಅನುಭವಿಸುತ್ತಿವೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.
ಪಕ್ಷಿಗಳಿರುವ ಆವರಣದಲ್ಲೂ ಕೊಳಗಳನ್ನು ನಿರ್ಮಾಣ ಮಾಡಿ ನೀರು ತುಂಬಿಸಲಾಗಿದ್ದು, ಇದರಿಂದ ಪಕ್ಷಿಗಳು ಕೂಲ್ ಆಗಿವೆ. ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಹಣ್ಣಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.
133 ವರ್ಷಗಳ ಇತಿಹಾಸವಿರುವ ಮೈಸೂರು ಮೃಗಾಲಯದಲ್ಲಿ ಭಾರತ ಮಾತ್ರವಲ್ಲದೆ, ವಿಶ್ವದ ಹಲವು ರಾಷ್ಟ್ರಗಳ ಪ್ರಾಣಿ, ಪಕ್ಷಿ ಹಾಗೂ ಸರಿಸೃಪಗಳಿವೆ. ಸುಮಾರು 152 ಜಾತಿಯ 1500ಕ್ಕೂ ಹೆಚ್ಚಿನ ಪ್ರಾಣಿಗಳಿವೆ. 300ಕ್ಕೂ ಹೆಚ್ಚಿನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ 4 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ.
245 ಎಕರೆ ವಿಸ್ತೀರ್ಣದ ಚಾಮರಾಜೇಂದ್ರ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಹಾಗೂ ಪ್ರಸಿದ್ಧ ಮೃಗಾಲಯಗಳಲ್ಲಿ ಒಂದು. ಇದು ವಿಶ್ವದ ಪ್ರಾಚೀನ ಹಾಗೂ ಪ್ರಸಿದ್ಧ ಮೃಗಾಲಯಗಳ ಪಟ್ಟಿಯಲ್ಲೂ ಸೇರಿದೆ.
ಮೃಗಾಲಯದಲ್ಲಿ ಹಲವು ಪ್ರಾಣಿಗಳು ಬೇಸಿಗೆಯ ಬಿಸಿಲ ಬೇಗೆಯನ್ನು ತಾಳಲಾರದೆ ಪರದಾಡುತ್ತವೆ. ಅದರಲ್ಲೂ ನವಜಾತ ಮರಿಗಳು ಹಾಗೂ ಈಗತಾನೇ ತಾಯಿಯಾದ ಪ್ರಾಣಿಗಳ ರಕ್ಷಣೆಗೆ ವಿನೂತನ ಕ್ರಮಗಳನ್ನು ಕೈಗೊಳ್ಳಲು ಮೃಗಾಲಯ ಪ್ರಾಧಿಕಾರ ಮುಂದಾಗಿದೆ. ಕೇವಲ ಪ್ರವೇಶ ಶುಲ್ಕದಿಂದ ನಡೆಯುತ್ತಿದ್ದ ಈ ಮೃಗಾಲಯದಲ್ಲಿ 2000 ಇಸವಿಯಿಂದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಪ್ರಾರಂಭಿಸಲಾಗಿದೆ ಎನ್ನುವುದು ವಿಶೇಷ.
ಕೂಲ್..ಕೂಲ್… ವಾತಾವರಣ!
ಬೇಸಿಗೆಯಲ್ಲಿ ನಗರದ ಯಾವುದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೂ ತಣ್ಣನೆಯ ಅನುಭವ ದೊರೆಯುವುದಿಲ್ಲ. ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದರೆ ಬಿರುಬೇಸಿಗೆಯಲ್ಲೂ ಕೂಲ್..ಕೂಲ್… ವಾತಾವರಣ ಸಿಗಲಿದೆ. ಪ್ರಾಣಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಪ್ರಿಂಕ್ಲರ್‌ನಲ್ಲಿ ನೀರು ಚಿಮ್ಮಿಸಲಾಗುತ್ತಿದೆ. ಸ್ಪ್ರಿಂಕ್ಲರ್ ಮೂಲಕ ನೀರು ಚಿಮ್ಮಿಸುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪರಿಸರ ಪ್ರವಾಸಿಗರಿಗೂ ತಣ್ಣನೆಯ ಅನುಭವ ನೀಡುತ್ತಿದೆ.
ಸಾಕಷ್ಟು ವನ್ಯಪ್ರಾಣಿಗಳು ಬೇಸಿಗೆಯ ಧಗೆ ಸಹಿಸಿಕೊಳ್ಳುವುದಿಲ್ಲ. ಅರಣ್ಯದಲ್ಲಾದರೆ ನದಿ, ತೊರೆಗಳಲ್ಲಿ ಪ್ರಾಣಿಗಳು ಮಿಂದೆದ್ದು ಬರುತ್ತವೆ. ಆದರೆ ಇಲ್ಲಿ ಅಂಥ ವ್ಯವಸ್ಥೆ ಇಲ್ಲ. ಮೃಗಾಲಯದಲ್ಲಿ ಪ್ರಾಣಿಗಳಿಗೋಸ್ಕರ ನಿರ್ಮಾಣ ಮಾಡಿರುವ ತೊಟ್ಟಿಗಳಲ್ಲಿ ತಣ್ಣೀರು ತುಂಬಿಸಿದರೂ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪಕ್ಕೆ ಅದು ಬಿಸಿನೀರಾಗುತ್ತದೆ. ತೊಟ್ಟಿಯ ನೀರು ಪ್ರಾಣಿಗಳಿಗೆ ತಣ್ಣನೆಯ ಅನುಭವ ನೀಡಲು ಸಾಧ್ಯವಿಲ್ಲದಿರುವ ಹಿನ್ನೆಲೆಯಲ್ಲಿ ಪ್ರತಿ ಬೇಸಿಗೆ ಬಂದಾಗ ಮೃಗಾಲಯ ಸಿಬ್ಬಂದಿ ಸ್ಪ್ರಿಂಕ್ಲರ್ ಮೂಲಕ ಪ್ರಾಣಿಗಳಿಗೆ ನೀರು ಹಾಯಿಸುತ್ತಾರೆ. ವನ್ಯಪ್ರಾಣಿಗಳು ಸಂತೃಪ್ತಿಯಿಂದ ತಣ್ಣೀರಿಗೆ ಮೈಯೊಡ್ಡಿ ಬಿಸಿಲಿನ ತಾಪದಿಂದ ಪಾರಾಗುತ್ತವೆ. ಬೇಸಿಗೆಯ ಸುಡು ಬಿಸಿಲಿನಲ್ಲಿಯೂ ಮೃಗಾಲಯದ ಸಿಬ್ಬಂದಿ ವನ್ಯಪ್ರಾಣಿಗಳಿಗೆ ಮಳೆಗಾಲದ ಅನುಭವ ನೀಡುತ್ತಿದ್ದಾರೆ.
ಸಾಮಾನ್ಯವಾಗಿ ಆನೆ, ಚಿಂಪಾಂಜಿ, ಗೊರಿಲ್ಲ, ೆಂಡಾಮೃಗ ಸೇರಿದಂತೆ ವಿವಿಧ ಪ್ರಾಣಿಗಳು ಬೇಸಿಗೆಯಲ್ಲಿ ತಮ್ಮ ಮೈಯನ್ನು ತಣ್ಣೀರಿಗೆ ಒಡ್ಡಿಕೊಳ್ಳಲು ಇಷ್ಟಪಡುತ್ತವೆ. ಸ್ಪಿಂಕ್ಲರ್ ನೀರಿನಿಂದ ಪ್ರಾಣಿಗಳ ಮೈ ತಣ್ಣಗಾಗುವುದು ಮಾತ್ರವಲ್ಲದೆ, ಸುತ್ತಮುತ್ತಲಿನ ವಾತಾವರಣವೂ ತಣ್ಣಗಿರುತ್ತದೆ.
ನಿರ್ಜಲೀಕರಣ ಎದುರಾಗದಂತೆ ಮುನ್ನೆಚ್ಚರಿಕೆ ಪ್ರಾಣಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಕರಬೂಜ, ಕಲ್ಲಂಗಡಿ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳಲಾಗುತ್ತಿದೆ. ಪ್ರಾಣಿಗಳಲ್ಲಿ ನಿರ್ಜಲೀಕರಣ ಆಗಬಾರದೆಂದು ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರಾಣಿಗಳಿಗೆ ನಿತ್ಯ ನೀಡಲಾಗುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಹ್ಯವಾಗಿ ವಿಟಮಿನ್ ಹಾಗೂ ಮಿನರಲ್ ಸೇರಿಸಲಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಪ್ರಾಣಿಗಳಲ್ಲಿ ಆರೋಗ್ಯ ಸಮಸ್ಯೆ ಎದುರಾಗದಂತೆ ಸಿಬ್ಬಂದಿ ಸದಾ ಅವುಗಳಿಗೆ ವಿಶೇಷ ಆರೈಕೆ ಮಾಡುತ್ತಿದ್ದಾರೆ.
ಮೃಗಾಲಯದಲ್ಲಿ ತಂಪು ವಾತಾವರಣ ಸೃಷ್ಟಿಸಲಾಗುತ್ತಿದೆ ಮತ್ತು ಎಲ್ಲ ಪ್ರಾಣಿಗಳ ಆವರಣಕ್ಕೆ ಸ್ಪ್ರಿಂಕ್ಲರ್ ಮೂಲಕ ನೀರು ಚಿಮುಕಿಸಲಾಗುತ್ತಿದೆ. ಅಲ್ಲದೆ ಕೆಲ ಪ್ರಾಣಿಗಳಿಗೆ ಎಳನೀರು, ಕಲ್ಲಂಗಡಿ, ಕಿತ್ತಳೆ ಹಣ್ಣುಗಳನ್ನು ನೀಡುತ್ತಿದ್ದು, ಮಾಂಸಾಹಾರಿ ಪ್ರಾಣಿಗಳಿಗೆ ಅವುಗಳ ಜಾಗದಲ್ಲಿಯೇ ಕೊಳ ನಿರ್ಮಾಣ ಮಾಡಲಾಗಿದೆ. ಪ್ರಾಣಿಗಳಿಗೆ ನೀರು ಮತ್ತು ನೆರಳು ಒದಗಿಸಲು ಮುತುವರ್ಜಿ ವಹಿಸಲಾಗಿದೆ.ಅಜಿತ್ ಎಂ. ಕುಲಕರ್ಣಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ