

ಚೆನ್ನೈ: ತಮಿಳುನಾಡು ಸರ್ಕಾರದ ಮಹಿಳಾ ಯೋಜನೆಯನ್ನು ಟೀಕಿಸಿದ ನಟಿ, ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ವಿರುದ್ಧ ಹಿರಿಯ ನಟಿ ಅಂಬಿಕಾ ಹರಿಹಾಯ್ದಿದ್ದಾರೆ.
ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯದ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 1,000 ರೂ. ನೀಡುವ ಮಹಿಳಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಭಿಕ್ಷೆಗೆ ಹೋಲಿಸುವ ಮೂಲಕ ಖುಷ್ಬೂ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಖುಷ್ಬೂ ಏನು ಹೇಳಿದರು ಅಂತಾ ನೋಡೋದಾದ್ರೆ, ಮಹಿಳೆಯರಿಗೆ 1000 ರೂಪಾಯಿ ಭಿಕ್ಷೆ ಕೊಟ್ಟರೆ ಜನ ಅವರಿಗೆ ಮತ ಹಾಕುತ್ತಾರಾ? ಡ್ರಗ್ಸ್ ನಿರ್ಮೂಲನೆ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚಿಸಿದರೆ ಸಾಕು ಮಹಿಳೆಯರು 1000 ರೂಪಾಯಿ ಭಿಕ್ಷೆ ಬೇಡುವ ಅಗತ್ಯ ಇರುವುದಿಲ್ಲ ಎಂದು ಸೋಮವಾರ ಚೆನ್ನೈನಲ್ಲಿ ನಡೆದ ಬಿಜೆಪಿ ಸಮಾವೇಶದ ಸಂದರ್ಭದಲ್ಲಿ ಖುಷ್ಬೂ ಹೇಳಿದರು.
ಖುಷ್ಬೂ ಹೇಳಿಕೆಗೆ ತಮಿಳುನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಡಿಎಂಕೆ ಪಕ್ಷದ ಮಹಿಳಾ ಘಟಕವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ರಾಜಕೀಯ ನಾಯಕರು ಕೂಡ ಖುಷ್ಬೂ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ಇದರ ನಡುವೆ ಖುಷ್ಬೂ ಸಹ ಸ್ಪಷ್ಟನೆ ನೀಡಿದ್ದು, ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದಿದ್ದಾರೆ.
ಇದೀಗ ಹಿರಿಯ ನಟಿ ಅಂಬಿಕಾ ಟ್ವೀಟ್ ಮಾಡಿ ಖುಷ್ಬೂ ವಿರುದ್ಧ ಕಿಡಿಕಾರಿದ್ದಾರೆ. ಎಲ್ಲಿಯೂ ಖುಷ್ಬೂ ಅವರ ಹೆಸರನ್ನು ಉಲ್ಲೇಖಿಸಿದೇ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಯಾರು ಕೊಟ್ಟರು? ಮತ್ತು ಯಾವ ಪಕ್ಷ ಕೊಟ್ಟಿತು? ಎಂಬುದು ಇಲ್ಲಿ ಮುಖ್ಯವಲ್ಲ. ಯಾರಾದರೂ ಕೆಲವು ಸಹಾಯ ಮಾಡಿದರೆ ಅಥವಾ ಜನರಿಗೆ ಬೆಂಬಲವಾಗಿ ನಿಂತರೆ, ಅದನ್ನು ಒಪ್ಪಿಕೊಂಡು ಪ್ರಶಂಸಿಸುವ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಿ. ನಿಮ್ಮಿಂದ ಪ್ರಶಂಸಿಸಲು ಆಗಲಿಲ್ಲ ಅಂದರೆ ಸುಮ್ಮನಿದ್ದು ಬಿಡಿ. ಅದನ್ನು ಬಿಟ್ಟು ಅವಮಾನಕರ ಪದಗಳನ್ನು ಬಳಸಬೇಡಿ. ಕೇವಲ 5 ರೂಪಾಯಿ ಕೊಟ್ಟರೂ ಅದು ಸಹಾಯವೇ ಎಂದು ಖುಷ್ಬೂಗೆ ಬುದ್ಧಿಮಾತು ಹೇಳಿದ್ದಾರೆ. (ಏಜೆನ್ಸೀಸ್)