

ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯ ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ಸೈನಿಕರನ್ನು ಸೃಷ್ಟಿ ಮಾಡಲು ಪ್ರಮುಖ ಪಾತ್ರ ವಹಿಸುತ್ತಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಕಚೇರಿಗೆ ಸ್ವಂತ ಜಾಗ ಇಲ್ಲದೆ ಇರುವುದರಿಂದ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.
ರಾಜ್ಯದಲ್ಲಿ 1953ರ ಆ.26ರಂದು ಎನ್‌ಸಿಸಿ ವತಿಯಿಂದ ಪ್ರಥಮ ಪರೇಡ್‌ಗೆ ಆಂದಿನ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಚಾಲನೆ ನೀಡಿದ್ದರು. ಅಂದಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎನ್‌ಸಿಸಿ ಕಚೇರಿಗಳನ್ನು ಸ್ಥಾಪಿಸಿ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ 1964ರಲ್ಲಿ 10 ಕರ್ನಾಟಕ ಬಿಎನ್‌ಎನ್‌ಸಿಸಿ ಕಚೇರಿ ಸ್ಥಾಪನೆಯಾಗಿ 59 ವರ್ಷಗಳೇ ಕಳೆದಿದ್ದರೂ ಸ್ವಂತ ಸೂರು ಸೇರಿದಂತೆ ವಿವಿಧ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ಕೋಲಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮಾಂಡೆಂಟ್ ಅಧಿಕಾರಿ ಕಚೇರಿಯು ಬೇರೆ ಜಿಲ್ಲೆಗೆ ಸ್ಥಳಾಂತರವಾಗುವ ಆತಂಕ ಮನೆ ಮಾಡಿದೆ.
ಸ್ವಂತ ಕಟ್ಟಡ ಇಲ್ಲದೆ ಇರುವುದರಿಂದ ಕಚೇರಿಯ ಚಟುವಟಿಕೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇಲ್ಲಿ ಹಣಕಾಸು ವಿಭಾಗ, ಕಮಾಂಡೆಂಟ್ ಅಧಿಕಾರಿ ಕಚೇರಿ, ಕಮಾಂಡೆಂಟ್ ಕಚೇರಿ ಹೀಗೆ ವಿವಿಧ ಕಚೇರಿಗಳು ಒಂದೇ ಕಟ್ಟಡಗಳಲ್ಲಿ ನಡೆಸುತ್ತಿರುವುದರಿಂದ ಇಕ್ಕಟ್ಟಾಗಿದೆ. ಆದರೆ ಆಳುವ ಸರ್ಕಾರಗಳು ಜಿಲ್ಲಾ ಎನ್‌ಸಿಸಿಗೆ ಸ್ವಂತ ಕಟ್ಟಡ, ಚಟುವಟಿಕೆಗಳನ್ನು ನಡೆಸಲು ಸೂಕ್ತ ಸ್ಥಳ ಕಲ್ಪಿಸದೆ ಇರುವುದು ಚಟುವಟಿಕೆಗಳನ್ನು ನಡೆಸಲು ತೀವ್ರ ಹಿನ್ನಡೆಯಾಗಿದೆ. ಜಿಲ್ಲಾ ಕಚೇರಿಯಿಂದ ಪಿಯುಸಿ, ಪ್ರಥಮ ದರ್ಜೆ ಹಾಗೂ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಅಸಕ್ತ ವಿದ್ಯಾರ್ಥಿಗಳಿಗೆ ನಾಯಕತ್ವ, ಶಿಸ್ತು, ರಕ್ಷಣೆ ಇಲಾಖೆಯಲ್ಲಿ ಸೇವೆಗೆ ಸೇರಲು ಅಗತ್ಯವಾಗಿ ಬೇಕಾಗಿರುವ ತರಬೇತಿಯನ್ನು ನೀಡಲಾಗುತ್ತಿದೆ.
ಪ್ರಥಮ ದರ್ಜೆ ಹಾಗೂ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ ನೀಡಲು, ಚಟುವಟಿಕೆಗಳನ್ನು ನಡೆಸಲು ಸೂಕ್ತ ಜಾಗಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಪಂಗೆ ಹಲವು ಬಾರಿ ಪ್ರಸ್ತಾವ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ರೀತಿ ಸ್ಪಂದನೆ ಸಿಕ್ಕಿಲ್ಲ.
ಸೌಲಭ್ಯಗಳ ಕೊರತೆಯಿರುವುದರಿಂದ ಎನ್‌ಸಿಸಿ ಚಟುವಟಿಕೆಗಳ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ಕೋಲಾರದಲ್ಲಿ ಹಿನ್ನಡೆಯಾಗಿದೆ. ಮುಂದಿನ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಜಿಲ್ಲೆಯ ತುಕಡಿ ಆಯ್ಕೆಯಾಗದೆ ಇರುವುದು ಬೇಸರ ತಂದಿದೆ. ಇದಕ್ಕೆಲ್ಲ ಚಟುವಟಿಕೆ ನಡೆಸಲು ಸ್ವಂತ ಜಾಗ, ಕಟ್ಟಡ ಇಲ್ಲದೆ ಇರುವುದು ಕಾರಣವಾಗಿದೆ.
ಇಚ್ಛಾಶಕ್ತಿಯಿಲ್ಲದ ರಾಜಕಾರಣಿಗಳು, ಮುಂದಾಲೋಚನೆಯಿಲ್ಲದ ಅಧಿಕಾರಿಗಳು ಇರುವುದರಿಂದ ಎನ್‌ಸಿಸಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಜನಪ್ರತಿನಿಧಿಗಳು ಕೇವಲ ಮತಗಳಿಕೆಯಾಗುವ ಕೆಲಸಗಳಿಗೆ ಒತ್ತು ನೀಡದೆ, ಯುವಕರಲ್ಲಿ ಶಿಸ್ತು, ನಾಯತ್ವ ಗುಣಗಳನ್ನು ಹುಟ್ಟಿ ಹಾಕುವ ಸೇವಾ ಮನೋಭಾವವುಳ್ಳ ಸಂಸ್ಥೆಗಳಿಗೆ ಸೌಕರ್ಯ ಕಲ್ಪಿಸಲು ಒತ್ತು ನೀಡಬೇಕು.