ಜೀವ ಕೊಟ್ಟರೂ ಜಾಗ ಕೊಡೆವು

1 (1)
ಗುಬ್ಬಿ ತಾಲೂಕಿನ ಎಚ್​ಎಎಲ್​ ಬಳಿ ರೈತರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ರೈತರಾದ ಶಶಿಧರ್​, ಉಮೇಶ್​, ಹರೀಶ್​, ರಾಮಣ್ಣ, ಶಂಕ್ರಪ್ಪ ಯತೀಶ್​, ಹೊನ್ನಪ್ಪ, ನಿಜನಂದ ಮೂರ್ತಿ, ರಾಜಣ್ಣ ಸೇರಿದಂತೆ ಇನ್ನಿತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಗುಬ್ಬಿ
ತಾಲೂಕಿನ ನಿಟ್ಟೂರು ಹೋಬಳಿಯ ಬಿದರೆಹಳ್ಳ ಕಾವಲಿಯ 610 ಎಕರೆ ಜಾಗದಲ್ಲಿ ಈಗಾಗಲೇ ಎಚ್​ಎಎಲ್​ ಟಕ ನಿರ್ಮಾಣವಾಗಿ ಕಾರ್ಯಾಚರಣೆ ಮಾಡುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಪ್ರದೇಶದ ವ್ಯಾಪ್ತಿ ವಿಸ್ತರಿಸಲು ಎಚ್​ಎಎಲ್​ ಮುಂದಾಗಿರುವ ಹಿನ್ನೆಲೆಯಲ್ಲಿ ಸ್ಥಳಿಯರು ಹಾಗೂ ರೈತರು ಶುಕ್ರವಾರ ಪ್ರತಿಭಟನೆೆ ನಡೆಸಿ, ಭೂಸ್ವಾಧಿನವನ್ನು ವಿರೋಧಿಸಿದರು.


ಪಿತ್ರಾರ್ಜಿತ ಆಸ್ತಿಯನ್ನು ನಾವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಸಿದ್ಧರಿಲ್ಲ. ನಮ್ಮ ಜೀವವನ್ನು ಬೇಕಾದರೂ ಕೊಡುತ್ತೇವೆ ಭೂಮಿ ಕೊಡುವುದಿಲ್ಲ. ಈಗಾಗಲೇ ಎಚ್​ಎಎಲ್​ಗೆ ಸಾಕಷ್ಟು ಜಾಗ ನೀಡಲಾಗಿದೆ. ಆದರೆ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ಕುಂದರನಹಳ್ಳಿ, ಸಾಗರನಹಳ್ಳಿ, ಬಿದರೆಹಳ್ಳ ಕಾವಲ್​, ಸೋಪನಹಳ್ಳಿ, ಎಲ್ಲಾಪುರ ಭಾಗಗಳಲ್ಲಿ ಭೂ ವಶಕ್ಕೆ ಕ್ರಮಕೈಗೊಂಡಿದೆ. ಇದರಿಂದ ರೈತರ ತೆಂಗು, ಅಡಿಕೆ, ಬಾಳೆ ಸೇರಿ ವಿವಿಧ ವಾಣಿಜ್ಯ ಬೆಳೆಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಎಚ್​ಎಎಲ್​ ನಿರ್ಮಾಣವಾಗುವಾಗ ಪುನ ಯಾವುದೇ ಜಮೀನನ್ನು ರೈತರಿಂದ ಪಡೆಯುವುದಿಲ್ಲ ಎಂಬ ಹೇಳಿಕೆಯನ್ನು ಅಂದಿನ ಜಿಲ್ಲಾಧಿಕಾರಿಗಳೇ ನೀಡಿದ್ದರು. ಆದರೆ, ಈಗ ಮತ್ತೆ ರೈತರ ಭೂಮಿ ಪಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಕೈಗಾರಿಕೆ ನಿರ್ಮಾಣಕ್ಕೆ ಜಾಗಬೇಕು ಎಂದಾದಲ್ಲಿ ಸರ್ಕಾರಿ ಜಾಗನ್ನು ಬಳಸಿಕೊಳ್ಳಲಿ. ಅದು ಬಿಟ್ಟು ಫಲವತ್ತಾದ ಕೃಷಿ ಜಮೀನಿನ ಮೇಲೆ ಕಣ್ಣು ಹಾಕಿರುವ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ನಾವು ನಮ್ಮ ಜಾಗವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ರೈತರಾದ ಶಶಿಧರ್​ ಉಮೇಶ್​, ಹರೀಶ್​, ರಾಮಣ್ಣ, ಶಂಕ್ರಪ್ಪ ಯತೀಶ್​, ಹೊನ್ನಪ್ಪ, ನಿಜನಂದ ಮೂರ್ತಿ, ರಾಜಣ್ಣ ಸೇರಿ ಇನ್ನಿತರರು ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net