

ನಂದ ತನ್ನ ಮನೆಗೆ ಬಂದ ಉದ್ಧವನಿಗೆ ಈ ಎಲ್ಲ ಉಪಚಾರಗಳನ್ನು ಮಾಡಿ ಹೇಳುತ್ತಾನೆ: ನಾವು ವನವಾಸಿಗಳು, ಆದಿವಾಸಿಗಳು, ಗಿರಿವಾಸಿಗಳು. ನಾವು ಮೊದಲಿನಿಂದಲೂ ಇದ್ದ ಹಾಗೆ ಇದ್ದೇವೆ. ಶ್ರೀಕೃಷ್ಣನಿಗೆ ನಮ್ಮ ನೆನಪು ಏನಾದರೂ ಆಗುತ್ತದೆಯೋ? ನಮ್ಮನ್ನು ಸ್ಮರಿಸಿಕೊಳ್ಳುತ್ತಾನೋ ಇಲ್ಲವೋ? ಈ ಹಿಂದೆ ನಮಗೆ ದುರ್ಜನರಿಂದ, ಬೇರೆ ಬೇರೆ ವೇಷಗಳನ್ನು ಹಾಕಿಕೊಂಡು ಬಂದ ಎಲ್ಲ ಅಸುರರಿಂದ ಬಂದಂತಹ ಕಷ್ಟಗಳನ್ನು ಪರಿಹರಿಸಿ ಅನಂತ ಉಪಕಾರ ಮಾಡಿದ್ದಾನೆ. ಅಗ್ನಿಯಿಂದ, ನೀರಿನಿಂದ, ವಿಷದಿಂದ, ಸರ್ಪದಿಂದ ಬಂದ ಭಯಗಳನ್ನು ಶ್ರೀಕೃಷ್ಣನೇ ಪರಿಹಾರ ಮಾಡಿದ್ದಾನೆ.
ನೀರೋಗಮಾಶು ಕೃತವಾನ್ ವ್ರಜಮಬ್ಬನಾಭಃ|
(13.47 ಮ.ಭಾ.ತಾ.ನಿರ್ಣಯ) -
ನಾವು ಶ್ರೀಕೃಷ್ಣನನ್ನು ಮರೆಯುವ ಹಾಗೇ ಇಲ್ಲ. ಎಲ್ಲ ಬಾಹ್ಯ ಅಂತರ ರೋಗಗಳನ್ನು ಕಳೆದು ನಮ್ಮನ್ನು ಉದ್ದಾರ ಮಾಡಿದವನು ಇದೇ ಕೃಷ್ಣನೇ. ನಾವಂತೂ ಅವನನ್ನು ಪರಮಾತ್ಮ ಎಂದು ನಂಬಿ ನಡೆಯುತ್ತಿದ್ದೇವೆ. ಅವನು ನಮ್ಮನ್ನು ಮರೆತಿದ್ದಾನೆಯೋ ಹೇಗೆ?’ ಎಂದು ಕೇಳುತ್ತಾನೆ. ಅವನ ಮಾತುಗಳು ಅಷ್ಟಕ್ಕೆ ನಿಲ್ಲುವುದಿಲ್ಲ. ಮತ್ತೆ ಮುಂದುವರಿಸುತ್ತಾನೆ. ‘ಶ್ರೀಕೃಷ್ಣನು ನಮ್ಮನ್ನು ಮರೆತುಬಿಟ್ಟರೆ ನಮ್ಮ ಗತಿ ಏನು ಎನ್ನುವುದು ನಮ್ಮನ್ನು ಕಾಡುತ್ತದೆ.
ಏಕೆಂದರೆ ಅದು ಬಹಳ ಮುಖ್ಯವಾದ ಸಂಗತಿ. ನಾವು ಅವನನ್ನು ಮರೆಯದೇ ಇದ್ದರೆ ಮಾತ್ರ ಏನು ಪ್ರಯೋಜನ ಹೇಳು? ನಮ್ಮ ನೆನಪಿನಲ್ಲಿನ ಅವನಿದ್ದಾನೆ ಎನ್ನುದಂತೂ ಸತ್ಯವಾದುದು. ಅವನ ಎಲ್ಲ ಬಾಲಲೀಲೆಗಳನ್ನು ಕಂಡವರು ನಾವು. ಹಾಗೆಯೇ ನಾವು ದೇವರನ್ನು ಅಖಂಡವಾಗಿ ನೋಡುತ್ತ ಇರಬೇಕು ಎನ್ನುವುದು ನಮ್ಮ ಅಪೇಕ್ಷೆ.