ಮಿನಿಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ತೆರವು; ಸಿದ್ದರಾಮಯ್ಯ ಸಮಾರಂಭಕ್ಕಾಗಿ ಕೈ ಕಾರ್ಯಕರ್ತರ ಕೃತ್ಯ

ಕೋಲಾರದ ಮಿನಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ದ್ವಂಸ ಮಾಡಿರುವುದು.
ಕೋಲಾರದ ಮಿನಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ದ್ವಂಸ ಮಾಡಿರುವುದು.
Published on

ಕೋಲಾರ: ಸಿದ್ದರಾಮಯ್ಯ ಜ.9ಕ್ಕೆ ಕೋಲಾರಕ್ಕೆ ಬರುವ ಹಿನ್ನೆಲೆಯಲ್ಲಿ ನಗರದ ಮಿನಿಕ್ರೀಡಾಂಗಣದಲ್ಲಿ ಸ್ವಚ್ಛತೆ ಕೈಗೊಂಡಿದ್ದ ಕಾಂಗ್ರೆಸ್​ ಮುಖಂಡರು ಪ್ರೇಕ್ಷಕರ ಗ್ಯಾಲರಿ ಒಡೆದಿದ್ದು, ಇದನ್ನು ಪ್ರಶ್ನಿಸಿದ ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ ಮತ್ತು ನಗರಸಭೆ ಮಾಜಿ ಸದಸ್ಯ ಸೋಮಶೇಖರ್​ ನಡುವೆ ಮಾತಿನ ಚಕಮಕಿ ನಡೆದು ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ನಗರದ ಮಧ್ಯಭಾಗದಲ್ಲಿ ಮಿನಿ ಕ್ರೀಡಾಂಗಣವಿದ್ದು, ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕಿಂತ ಹೆಚ್ಚು ಕ್ರೀಡಾ ಚಟುವಟಿಕೆ ನಡೆಯುವ ಸ್ಥಳವಾಗಿದೆ. ಇಲ್ಲಿ ಒಳಾಂಗಣ ಕ್ರೀಡಾಂಗಣ ನಿಮಾರ್ಣ ನಂತರ ಹಿಂಭಾಗದಲ್ಲಿ ಬಾಸ್ಕೆಟ್​ ಬಾಲ್​ ಮೈದಾನ ಸ್ಥಾಪಿಸಲಾಗಿದೆ. ಇದರ ಎರಡೂ ಬದಿಗೆ ಪ್ರೇಕ್ಷಕರ ಗ್ಯಾಲರಿ ಕಟ್ಟಿದ್ದು, ಸಿದ್ದರಾಮಯ್ಯ ಆಗಮನ ಹಿನ್ನೆಲೆಯಲ್ಲಿ ಇದೇ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಭಾಗವಾಗಿ ಮೈದಾನ ಸ್ವಚ್ಛತೆ ಮಾಡುವಾಗ ಜೆಸಿಬಿಯಿಂದ ಒಂದು ಕಡೆ ಇದ್ದ ಪ್ರೇಕ್ಷಕರ ಗ್ಯಾಲರಿ ತೆರವುಗೊಳಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಆಸ್ತಿಗೆ ಹಾನಿಯಾದ ಹಿನ್ನೆಲೆಯಲ್ಲಿ ಓಂಶಕ್ತಿ ಚಲಪತಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಗ ಸ್ಥಳಕ್ಕೆ ಧಾವಿಸಿ ಬಂದ ನಗರಸಭೆ ಮಾಜಿ ಸದಸ್ಯ ಸೋಮಶೇಖರ್​ ಸ್ವಚ್ಛತೆ ಮಾಡಿಸುವುದನ್ನು ಪ್ರಶ್ನಿಸಲು ನೀನ್ಯಾರು ಎಂದಿದ್ದಾರೆ. ಆಗ ಪರಸ್ಪರ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಸ್ಥಳಕ್ಕೆ ಆಗಮಿಸಿದ ನಗರಠಾಣೆ ವೃತ್ತನಿರೀಕ್ಷಕ ಹರೀಶ್​ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ತೆರವಿಗೆ ಪತ್ರ: ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಕೊಕೊ/ಬ್ಯಾಸ್ಕೆಟ್​ ಬಾಲ್​ ಮೈದಾನದ ಪ್ರೇಕ್ಷಕ ಗ್ಯಾಲರಿಯನ್ನು ಕೊಕೋ ಸಂಸ್ಥೆಯಿಂದ ನಿರ್ಮಿಸಿದ್ದು, ಇದರ ತೆರವಿಗೆ ಕಾಂಗ್ರೆಸ್​ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ಶಿವಕುಮಾರ್​ ಮನವಿ ಮಾಡಿಕೊಂಡಿದ್ದರು.

ಅದರಂತೆ ತೆರವುಗೊಳಿಸಿ, ಕಾರ್ಯಕ್ರಮದ ನಂತರ ಮರು ನಿಮಾರ್ಣ ಮಾಡಿಕೊಡಲಾಗುವುದು. ಇದಕ್ಕೆ ಅನುಮತಿ ನೀಡಬೇಕು ಎಂದು ಜಿಲ್ಲಾ ಕೊಕೋ ಅಸೋಸಿಯೇಷನ್​ ಅಧ್ಯಕ್ಷ ಆರ್​.ಶ್ರೀಧರ್​ ಡಿ.3ರಂದು ಯುವಜನ, ಕ್ರೀಡೆ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಅವರಿಗೆ ಪತ್ರ ಬರೆದಿದ್ದರು. ಆದರೆ ಅನುಮತಿ ಸಿಕ್ಕಿತ್ತೋ, ಇಲ್ಲವೋ ಪತ್ರ ಬರೆದ ಮಾರನೇ ದಿನವೇ ಸರ್ಕಾರಿ ಜಾಗದಲ್ಲಿದ್ದ ಪ್ರೇಕ್ಷಕರ ಗ್ಯಾಲರಿ ಒಡೆದು ಹಾಕಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಬರುವುದಕ್ಕೂ ಮುನ್ನ ಕಾಂಗ್ರೆಸ್​ ಕಾರ್ಯಕರ್ತರು ದೌರ್ಜನ್ಯ, ದಬ್ಬಾಳಿಕೆಗೆ ಇಳಿದಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಘಟನೆಗಳು ಮರುಕಳಿಸಬಾರದು. ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. | ಎಸ್​.ಮುನಿಸ್ವಾಮಿ, ಸಂಸದರು, ಕೋಲಾರ.

ಪೊಲೀಸರಿಗೆ ದುರು:  ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ ಈ ಸಂಬಂಧ ನಗರ ಠಾಣೆೆಗೆ ದೂರು ನೀಡಿದ್ದು, ಸರ್ಕಾರಿ ಜಾಗದ ಪ್ರೇಕ್ಷಕರ ಗ್ಯಾಲರಿಯನ್ನು ಖಾಸಗಿ ಕಾರ್ಯಕ್ರಮಕ್ಕಾಗಿ ತೆರವು ಮಾಡಲು ಅನುಮತಿ ನೀಡಿದ್ದಾದರೂ ಯಾರು ಎಂದು ಪ್ರಶ್ನಿಸಿದ್ದಾರೆ. ಇನ್ನು ನಗರಠಾಣೆಯಲ್ಲಿ ಸಿದ್ದರಾಮಯ್ಯ ಬಂದು ಹೋದ ನಂತರ ಪ್ರೇಕ್ಷಕರ ಗ್ಯಾಲರಿ ಮರುನಿಮಾರ್ಣ ಕುರಿತು ರಾಜೀ ಸಂದಾನಕ್ಕೆ ಯತ್ನಿಸಲಾಗಿತ್ತು ಎನ್ನಲಾಗಿದೆ. ಸಮಾವೇಶಕ್ಕೆ ಮಿನಿ ಕ್ರೀಡಾಂಗಣದ ಜಾಗ ಬಳಸಿಕೊಳ್ಳಲು ಅನುಮತಿ ನೀಡಿದ್ದೆವು. ಇನ್ನು ಪ್ರೇಕ್ಷಕರ ಗ್ಯಾಲರಿಯನ್ನು ಕೊಕ್ಕೊ ಸಂಸ್ಥೆಯವರೇ ಹಣ ಖರ್ಚು ಮಾಡಿ ಕಟ್ಟಿಸಿಕೊಂಡಿದ್ದಾರೆ. ಕೊಕ್ಕೊ ಸಂಸ್ಥೆಯವರು ಅನುಮತಿ ಕೋರಿ ಬರೆದಿರುವ ಪತ್ರ ಜ.3ರಂದು ಕಚೇರಿಗೆ ಬಂದಿದ್ದು, ನಾನು ಇರಲಿಲ್ಲ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಶಶಿಕಲಾ ವಿಜಯವಾಣಿಗೆ ತಿಳಿಸಿದರು.

ಸಿದ್ದರಾಮಯ್ಯ ಕೋಲಾರಕ್ಕೆ ಬರುವ ಮುಂಚೆಯೇ ಕಾಂಗ್ರೆಸ್​ ಕಾರ್ಯಕರ್ತರು ಸರ್ಕಾರಿ ಆಸ್ತಿ ನಾಶಕ್ಕೆ ಇಳಿದಿರುವುದು ದುರಂತ. ಇವರ ದೌರ್ಜನ್ಯ, ದಬ್ಬಾಳಿಕೆ ನೋಡಿದರೆ ಮುಂದೆ ಎಂತಹ ದಿನಗಳು ಎದುರಾಗಲಿವೆ ಎಂಬುದು ಅರ್ಥವಾಗುತ್ತದೆ. ಮಿನಿಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿ ಒಡೆದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. |ಇಂಚರ ಗೋವಿಂದರಾಜು, ಎಂಎಲ್ಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net