ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಸಿಖ್ಖರು, ಹಿಂದೂಗಳನ್ನು ತೆರವುಗೊಳಿಸಿ: ಕಾಂಗ್ರೆಸ್ ನಾಯಕನ ಮನವಿ

taliban
Published on

ನವದೆಹಲಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನೀಯರು ಹೆಚ್ಚು ಹೆಚ್ಚು ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ಮೂಲದ ಸಿಖ್ ಮತ್ತು ಹಿಂದೂ ಸಮುದಾಯದ ಜನರ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್​ ನಾಯಕ ಜೈವೀರ್​ ಶೇರ್​ಗಿಲ್​ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಅವರಿಗೆ ಎರಡು ಪುಟದ ಪತ್ರ ಬರೆದಿರುವ ಶೇರ್​ಗಿಲ್​, ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಭಾರತೀಯ ಮೂಲದವರನ್ನು ಕೊಲ್ಲುವ ಹಟ ಹೊಂದಿರುವ ತಾಲಿಬಾನ್​ಗೆ, ಅಲ್ಲಿ ಸಿಕ್ಕಿಹಾಕಿಕೊಂಡಿರುವ 650 ಸಿಖ್ಖರು ಮತ್ತು 50 ಹಿಂದೂಗಳು ಸುಲಭದ ಟಾರ್ಗೆಟ್​ಗಳಾಗಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್​​ನ ರಾಷ್ಟ್ರೀಯ ವಕ್ತಾರರೂ ಆಗಿರುವ ಜೈವೀರ್​ ಶೇರ್​ಗಿಲ್​, 'ಸಿಖ್​ ಸಮುದಾಯಕ್ಕೆ ಸೇರಿದ ಭಾರತೀಯ ನಾಗರೀಕನಾಗಿ ನನ್ನ ವೈಯಕ್ತಿಕವಾಗಿ ಸಾಮರ್ಥ್ಯದಲ್ಲಿ ಈ ಪತ್ರ ಬರೆದಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿರುವ ಹಿಂದೂಗಳು ಅಥವಾ ಸಿಖ್ಖರನ್ನು ವಿಶೇಷ ವೀಸಾ ನೀಡಿ ತೆರವುಗೊಳಿಸಬೇಕು. ಜೊತೆಗೆ ಯುದ್ಧಸಂತ್ರಸ್ತ ಭಾರತೀಯ ಮೂಲದ ಜನರಿಗೆ ಆರ್ಥಿಕ ಭದ್ರತೆ ಒದಗಿಸಬೇಕೆಂದು ಕೋರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net