

EV Revolution: ಎಲೆಕ್ಟ್ರಿಕ್ ವಾಹನಗಳ (ಇವಿ) ಕ್ರಾಂತಿ ಸಾರಿಗೆ ವಲಯವನ್ನು ಪರಿವರ್ತಿಸುವುದಷ್ಟೇ ಅಲ್ಲದೇ, ಸ್ವಚ್ಛ, ಆರೋಗ್ಯಕರ ಮತ್ತು ಮುಂಬೈಯನ್ನು ಆರ್ಥಿಕವಾಗಿ ಬಲಿಷ್ಠವಾಗಿಸುತ್ತದೆ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರನಾಯಕ್ ಮಂಗಳವಾರ (ಸೆಪ್ಟೆಂಬರ್ 9) ಹೇಳಿದ್ದಾರೆ.
"ಬದಲಾವಣೆಯ ಚಕ್ರಗಳು - ಮುಂಬೈನ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಇವಿ ಅಳವಡಿಕೆ ಜಾಗೃತಿ" ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸರನಾಯಕ್, ಪರಿಸರ ಸ್ನೇಹಿ ನಗರವನ್ನು ನಿರ್ಮಿಸುವುದು ಸಾಮೂಹಿಕ ಜವಾಬ್ದಾರಿಯಾಗಿದ್ದು, ಇಂತಹ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಆಗ ಮಾತ್ರ ಉತ್ತಮ ವಾತಾವರಣ ಪಡೆಯಲು ಸಾಧ್ಯ ಎಂದರು.
ಇದನ್ನೂ ಓದಿ:ಹೆಕ್ಟೇರ್ ಗೆ ರೂ.50 ಸಾವಿರ ಪರಿಹಾರ ಕೊಡಿ
ವಿದ್ಯುತ್ ವಾಹನ ನೀತಿಯಡಿಯಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರವನ್ನು ಹಸಿರು ಚಲನಶೀಲತೆಯ ಕೇಂದ್ರವನ್ನಾಗಿ ಮಾಡುವ ರಾಜ್ಯ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಸಚಿವರು, ಈ ಕಾರ್ಯಾಚರಣೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳುವಲ್ಲಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಸಕ್ರಿಯ ಭಾಗವಹಿಸುವಿಕೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಇವುಗಳ ಬಳಕೆಯ ಪರಿಣಾಮವನ್ನು ಉಲ್ಲೇಖಿಸಿದ ಸಚಿವರು, ಇದು ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ನಗರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ, ನಗರದ ನಾಗರಿಕರು, ನೀತಿ ನಿರೂಪಕರು ಮತ್ತು ಚಾಲಕರ ಸಾಮೂಹಿಕ ಜವಾಬ್ದಾರಿಯು ಮುಂಬೈ ಹಸಿರು ಸಾರಿಗೆಗೆ ಮಾದರಿ ನಗರವಾಗಿ ವಿಕಸನಗೊಳಿಸುತ್ತದೆ ಎಂದರು.
ಈ ರೀತಿಯ ವಾಹನಗಳು ಪರಿಸರ ಸ್ನೇಹಿ ಪರ್ಯಾಯಗಳಷ್ಟೇ ಅಲ್ಲ, ಸಾರ್ವಜನಿಕ ಸಾರಿಗೆ ಚಾಲಕರಿಗೆ ಆರ್ಥಿಕ ಸಬಲೀಕರಣದ ಸಾಧನಗಳೂ ಆಗಿವೆ. ಅವು ಚಾಲಕರನ್ನು ಏರಿಳಿತದ ಇಂಧನ ವೆಚ್ಚದಿಂದ ಮುಕ್ತಗೊಳಿಸುವುದರ ಜೊತೆಗೆ ಉತ್ತಮ ಗಳಿಕೆಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ರಾಜ್ಯ ಸರ್ಕಾರವು ಪ್ರೋತ್ಸಾಹ ಧನ, ಸಬ್ಸಿಡಿ ಮತ್ತು ಚಾರ್ಜಿಂಗ್ ಸ್ಟೇಷನ್‌ಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ವಿದ್ಯುತ್ ವಾಹನಗಳ ಅಳವಡಿಕೆಗೆ ತೀವ್ರವಾಗಿ ಒತ್ತು ನೀಡುತ್ತಿದೆ. ಮುಂಬೈನ ದೈನಂದಿನ ಪ್ರಯಾಣದ ಪ್ರಮುಖ ಭಾಗವಾಗಿರುವ ಆಟೋ ಮತ್ತು ಟ್ಯಾಕ್ಸಿ ವಾಹನಗಳ ನಡುವೆ ವಿದ್ಯುತ್ ವಾಹನಗಳ ಬಳಕೆಯನ್ನು ವಿಸ್ತರಿಸುವ ತಂತ್ರಗಳ ಬಗ್ಗೆಯೂ ಅಧಿಕಾರಿಗಳು ಈ ಸಂದರ್ಭದಲ್ಲಿ ಚರ್ಚಿಸಿದರು.(ಏಜೆನ್ಸೀಸ್)