

ಲಂಡನ್: ಆತ 31ವರ್ಷದ ಯುವಕ. ಎಚ್ಐವಿ ಸೋಂಕಿತ. ಆದರೆ ಕೊರಗುತ್ತ ಕುಳಿತುಕೊಳ್ಳದೆ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಲೊಗಾನೈರ್ ಸ್ಕಾಟಿಷ್ ಏರ್ಲೈನ್ನಲ್ಲಿ ಕಮರ್ಷಿಯಲ್ ಪೈಲಟ್ ಆಗಿ ಕೆಲಸ ಮಾಡಲು ಸಜ್ಜಾಗಿದ್ದಾರೆ.
ಈ ಮೂಲಕ ಯುರೋಪ್ನ ಮೊದಲ ಎಚ್ಐವಿ ಪೀಡಿತ ಕಮರ್ಷಿಯಲ್ ಪೈಲಟ್ ಎನಿಸಿಕೊಳ್ಳಲಿದ್ದಾರೆ. ಇದೊಂದು ಹೆಮ್ಮೆಯೇ ಅಲ್ಲವೇ?
ಎಚ್ಐವಿ ಎಂದರೇ ಭಯಾನಕ. ಅದೆಷ್ಟೋ ಜನರು ಈ ರೋಗದ ಹೆಸರು ಕೇಳುತ್ತಲೇ ಆತಂಕ್ಕೆ ಒಳಗಾಗುತ್ತಾರೆ. ಕುಗ್ಗಿ ಹೋಗುತ್ತಾರೆ. ಅಂಥದ್ದರಲ್ಲಿ ಯುವಕ ತನ್ನ ಆರೋಗ್ಯ ಹಾಳಾಗುತ್ತಿದ್ದರೂ ಲೆಕ್ಕಿಸದೆ, ಕೊರಗದೆ ಪೈಲಟ್ ಆಗಿದ್ದು...!
ಇಂಗ್ಲೆಂಡ್ನ ಸ್ಟೋಕ್ ಆನ್ ಟ್ರೆಂಟ್ನ ಜೇಮ್ಸ್ ಬುಶೆ ಎಂಬ ಯುವಕನೇ ಈ ಸಾಧನೆ ಮಾಡಿದ್ದು. ಪೈಲಟ್ ಆಗಲು ಅಗತ್ಯವಿದ್ದ ತರಬೇತಿಗಳು ಮುಕ್ತಾಯವಾಗಿದ್ದು ಶೀಘ್ರದಲ್ಲೇ ಗ್ಲ್ಯಾಸ್ಗೋ ಏರ್ಪೋರ್ಟ್ನಿಂದ ಸಂಚಾರ ಮಾಡುವ ಲೊಗಾನೈರ್ ವಿಮಾನಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಎಚ್ಐವಿ ಸೋಂಕು ತಗುಲಿರುವ ಈ ಯುವಕನನನ್ನು ಪೈಲಟ್ ಆಗಿ ನೇಮಕ ಮಾಡಿಕೊಳ್ಳಲು ನಾಗರಿಕ ವಿಮಾನಯಾನ ಪ್ರಾಧಿಕಾರ ಮೊದಲು ಹಿಂದೇಟು ಹಾಕಿತು. ಆದರೆ ಬಳಿಕ ಈ ಯುವಕನಿಗಾಗಿ ತನ್ನ ನಿಯಮಗಳನ್ನೇ ಬದಲಿಸಿಕೊಂಡು, ಒಪ್ಪಿಗೆ ಸೂಚಿಸಿದೆ.
ಬುಶೆ ಅವರು ತಮ್ಮ ಬಗ್ಗೆ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ಪೈಲಟ್ ಅಂಥೋನಿ ಎಂಬ ಹೆಸರಿನಲ್ಲಿರುವ ತಮ್ಮ ಟ್ವಿಟರ್ ಖಾತೆಯಲ್ಲಿ ಸಂಪೂರ್ಣವಾಗಿ ವಿವರಣೆ ಬರೆದಿದ್ದಾರೆ.
ನಾನು ಲೊಗಾನೈರ್ಗೆ ಸದಾ ಕೃತಜ್ಞನಾಗಿರುತ್ತೇನೆ. ಏನು ಹೇಳಬೇಕು ಗೊತ್ತಾಗದಷ್ಟು ಭಾವಪರವಶನಾಗಿದ್ದೇನೆ. ನನ್ನ ಪಾಲಿಗೆ ಇದು ಹೆಮ್ಮೆಯ ಕ್ಷಣ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಬರೀ ನಾನೊಬ್ಬನಲ್ಲ, ನನ್ನಂತೆ ಅದೆಷ್ಟೋ ಜನ ಎಚ್ಐವಿ ಸೋಂಕಿಗೆ ಒಳಗಾದವರು ಇದ್ದಾರೆ. ಅವರೆಲ್ಲರೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಮುಂದಾಗಬೇಕು. ತಮ್ಮ ಪರಿಸ್ಥಿತಿಯಿಂದ ನಿಯಂತ್ರಣಕ್ಕೆ ಒಳಗಾದವರು ಅದನ್ನು ಮೀರಲು ಸಿದ್ಧರಾಗಬೇಕು ಎಂದು ಉತ್ಸಾಹ ತುಂಬುವ ವಾಕ್ಯಗಳನ್ನು ಬರೆದಿದ್ದಾರೆ.
ಬುಶೆ ಅವರಿಗೆ ಕಳೆದ 5 ವರ್ಷಗಳ ಹಿಂದೆ ಎಚ್ಐವಿ ಸೋಂಕು ಇರುವುದು ಗೊತ್ತಾಯಿತು. ಆದರೆ ಅವರು ತಮ್ಮ 15ನೇ ವರ್ಷದಿಂದಲೇ ಸಣ್ಣ ಏರ್ಕ್ರಾಫ್ಟ್ಗಳಲ್ಲಿ ಹಾರಾಟ ನಡೆಸುವುದನ್ನು ಕಲಿಯುತ್ತಿದ್ದರು. ಯಾಕೆಂದರೆ ಪೈಲಟ್ ಆಗಬೇಕು ಎನ್ನುವುದು ಅವರ ಬಾಲ್ಯದ ಕನಸಾಗಿತ್ತು.
ಆದರೆ ಅವರು ಎಚ್ಐವಿ ಪೀಡಿತರಾಗಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ನೋಡಿದ ನಾಗರಿಕ ವಿಮಾನಯಾನ ಪ್ರಾಧಿಕಾರ ಬುಶೆ ಅವರಿಗೆ ತರಬೇತಿ ನೀಡಲೂ ನಿರಾಕರಿಸಿತ್ತು. ಯುರೋಪಿಯನ್ ವಿಮಾನಯಾನ ಸುರಕ್ಷತಾ ಪ್ರಾಧಿಕಾರದ ನಿಯಮದ ಅನ್ವಯ ಇದು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಬಳಿಕ ತನ್ನ ಯುಕೆದಲ್ಲಿ ತನ್ನ ನಿಯಮಗಳನ್ನು ಸಡಿಲಿಸಿಕೊಂಡು ಅವಕಾಶ ಕೊಟ್ಟಿದೆ. ನವೆಂಬರ್ನಿಂದಲೂ ಬುಶೆ ಅವರು ಟ್ರೇನಿಂಗ್ ಪಡೆಯುತ್ತಿದ್ದು ಈಗ ಪೈಲಟ್ ಆಗಲು ಅರ್ಹತೆ ಪಡೆದಿದ್ದಾರೆ.
ನಾನು ಈ ರೋಗವನ್ನು ಮರೆಯಬೇಕು. ನನ್ನ ಜೀವನಕ್ಕಾಗಲೀ, ಆರೋಗ್ಯಕ್ಕಾಗಿ ಎಚ್ಐವಿ ಸೋಂಕಿನಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬುಶೆ ಅವರು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಹಾಗೂ ಕೆಲಸಕ್ಕೆ ಸೇರಲು ಉತ್ಸುಕರಾಗಿದ್ದಾರೆ.(ಏಜೆನ್ಸೀಸ್)