

ಬ್ರಿಡ್ಜ್ವಾಟರ್: ಯುರೋಪಿಯನ್ ಯೂನಿಯನ್ ಮತ್ತು ಮೆಕ್ಸಿಕೋ ವಿರುದ್ಧ ಶೇ. 30ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೊಷಿಸಿದ್ದು, ಅದು ಆ. 1ರಿಂದ ಜಾರಿಗೆ ಬರಲಿದೆ. ಅಮೆರಿಕಕ್ಕೆ ವಲಸಿಗರು ಮತ್ತು ಫೆಂಟಾನಿಲ್ನ ಒಳಹರಿವನ್ನು ತಡೆಯಲು ಮೆಕ್ಸಿಕೋ ಸಹಾಯ ಮಾಡಿದೆ, ನಿಜ. ಆದರೆ, ಉತ್ತರ ಅಮೆರಿಕಕ್ಕೆ ಡ್ರಗ್ಸ್ ಕಳ್ಳಸಾಗಣೆಯಾಗದಂತೆ ತಡೆಯಲು ಅಗತ್ಯ ನೆರವನ್ನು ಮೆಕ್ಸಿಕೋ ನೀಡಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇನ್ನೊಂದೆಡೆ ಯುರೋಪಿ ಯನ್ ಯೂನಿಯನ್ಗೆ ಬರೆದ ಪತ್ರದಲ್ಲಿ, ‘ವ್ಯಾಪಾರ ಕೊರತೆ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದೆ.
ನಿಮ್ಮ ಸುಂಕ, ನೀತಿಗಳು ಮತ್ತು ವ್ಯಾಪಾರ ತಡೆಗಳಿಂದ ಉಂಟಾದ ದೀರ್ಘಕಾಲೀನ, ದೊಡ್ಡ ವ್ಯಾಪಾರ ಕೊರತೆಗಳಿಂದ ದೂರ ಸರಿಯಲು ನಾವು ತೀರ್ವನಿಸಿದ್ದೇವೆ’ ಎಂದು ಟ್ರಂಪ್ ತಿಳಿಸಿದ್ದಾರೆ. ಇದಕ್ಕೆ ಮುನ್ನ ಟ್ರಂಪ್ ಈ ವಾರದ ಆರಂಭದಲ್ಲಿ ಕೆನಡಾ ಮೇಲೆ ಶೇ. 35ರಷ್ಟು ಸುಂಕ ಹೆಚ್ಚಳದ ಪತ್ರವನ್ನು ಕಳುಹಿಸಿದ್ದಾರೆ. ಯುರೋಪಿಯನ್ ಯೂನಿಯನ್ನ ಮುಖ್ಯ ವ್ಯಾಪಾರ ಸಂಧಾನಕಾರ ಮಾರೋಸ್ ಶೆಫ್ರೋವಿಕ್, ತಮ್ಮ ಸರಕುಗಳ ಮೇಲಿನ ಹೆಚ್ಚಿನ ಸುಂಕವನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ವ್ಯಾಪಾರ ಒಪ್ಪಂದ ಸಾಧ್ಯವಾಗಬಹುದು ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಅದು ನಿಜವಾಗಲಿಲ್ಲ.
ಇಯು ಪ್ರತಿಕ್ರಿಯೆ ಏನು?
ಯುರೋಪಿಯನ್ ಯೂನಿಯನ್ನ ಹಿತಾಸಕ್ತಿಯನ್ನು ರಕ್ಷಿಸಲು ಎಲ್ಲ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ. ಇದರಲ್ಲಿ ಸೂಕ್ತ ಪ್ರತೀಕಾರ ಕ್ರಮಗಳೂ ಇರಬಹುದು ಎಂದು ಇಯು ಕಮಿಷನ್ ಅಧ್ಯಕ್ಷೆ ಉರ್ಸಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ. ಆದರೆ ಇದಕ್ಕೆ ಮುನ್ನವೇ ಟ್ರಂಪ್ ಇಯುಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ‘ಒಂದು ವೇಳೆ ಅಮೆರಿಕದ ಮೇಲೆ ಇಯು ಪ್ರತೀಕಾರ ಸುಂಕ ಹೇರಿದರೆ ನಾವು ನಮ್ಮ ಸುಂಕದ ಪ್ರಮಾಣವನ್ನು ಮತ್ತಷ್ಟು ಏರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ಇಟಲಿ ಸರ್ಕಾರ ಪ್ರತಿಕ್ರಿಯೆ ನೀಡಿ, ಯುರೋಪ್ ಒಕ್ಕೂಟ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಇಯು ಕಮಿಷನ್ನ ನಿಲುವುಗಳನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ತಿಳಿಸಿದೆ.
ಎಷ್ಟು ರಾಷ್ಟ್ರಗಳ ಮೇಲೆ ಸುಂಕ?
ಶನಿವಾರ ರವಾನಿಸಿರುವ ಪತ್ರಗಳನ್ನೂ ಸೇರಿಸಿದರೆ ಜು. 9ರಿಂದ ಈವರೆಗೆ ಟ್ರಂಪ್ 24 ದೇಶಗಳಿಗೆ ಮತ್ತು 27 ಸದಸ್ಯರಾಷ್ಟ್ರಗಳನ್ನು ಒಳಗೊಂಡ ಯುರೋಪಿಯನ್ ಯೂನಿಯನ್ ಮೇಲೆ ಸುಂಕ ಷರತ್ತುಗಳನ್ನು ಜಾರಿಗೊಳಿಸಿದಂತಾಗಿದೆ. ಟ್ರಂಪ್ ಏಪ್ರಿಲ್ 2ರಂದು ಬಹುತೇಕ ಎಲ್ಲ ದೇಶಗಳ ಮೇಲೆ ಭಾರಿ ಸುಂಕ ಘೊಷಿಸಿದ್ದರು. ನಂತರ ಆ ಆದೇಶವನ್ನು ಹಿಂತೆಗೆದುಕೊಂಡು, 3 ತಿಂಗಳ ಮಾತುಕತೆಗೆ ಅವಕಾಶ ಮಾಡಿಕೊಟ್ಟಿದ್ದರು. ಆ ಗಡುವು ಜು. 9ರಂದು ಅಂತ್ಯವಾಗಿದೆ.