

ನವದೆಹಲಿ: ಪೆಟ್ರೋಲ್ನಲ್ಲಿ ಶೇ. 20ರಷ್ಟು ಇಥೆನಾಲ್ ಮಿಶ್ರಣ ಮಾಡುವುದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತದೆ ಎಂಬ ವಾದದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
‘ಪ್ರಪಂಚದ ಎಲ್ಲಿಯಾದರೂ ಇಥೆನಾಲ್ ಪೆಟ್ರೋಲ್ನಿಂದ ಒಂದು ವಾಹನಕ್ಕೆ ಸಮಸ್ಯೆಯಾಗಿದೆ ಎಂದು ತೋರಿಸಿ!’ ಎಂದು ಅವರು ಸವಾಲು ಹಾಕಿದ್ದಾರೆ. ಶೃಂಗಸಭೆಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಥೆನಾಲ್ ಪೆಟ್ರೋಲ್ನ ಮೈಲೇಜ್ನ ಮೇಲಿನ ಪರಿಣಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದರು. ‘ಇದು ಚರ್ಚೆಯ ವಿಷಯವೇ ಅಲ್ಲ. ರಾಜಕೀಯವಾಗಿ ಇದನ್ನು ಹೇಳಬೇಕಾ ಬೇಡವಾ ಅಂತ ನನಗೆ ಗೊತ್ತಿಲ್ಲ. ಆದರೆ ಇದರ ಹಿಂದೆ ಪೆಟ್ರೋಲಿಯಂ ಲಾಬಿಯ ಕೈವಾಡವಿದೆ ಎನಿಸುತ್ತದೆ. ನಾನು ಒಂದು ಓಪನ್ ಚಾಲೆಂಜ್ ನೀಡುತ್ತೇನೆ. ಇಥೆನಾಲ್ನಿಂದ ಸಮಸ್ಯೆಯಾಗಿದೆ ಎಂಬುದನ್ನು ಯಾರಾದರೂ ಸಾಬೀತುಪಡಿಸಿ ತೋರಿಸಲಿ’ ಎಂದು ಹೇಳಿದರು. ಸ್ಥಳೀಯವಾಗಿ ಉತ್ಪಾದನೆಯಾದ ಇಥೆನಾಲ್ ಬಳಕೆ ಭಾರತದ ಆಮದು ವೆಚ್ಚವನ್ನು ಕಡಿಮೆ ಮಾಡುತ್ತದೆ. ಮಾಲಿನ್ಯವನ್ನು ತಗ್ಗಿಸುತ್ತದೆ. ಕಬ್ಬಿನ ದರ 1,200ರಿಂದ 2,600 ರೂ.ಗೆ ಏರಿಕೆಯಾಗಿದೆ, ಇದಕ್ಕೆ ಇಥೆನಾಲ್ ಉತ್ಪಾದನೆಯೇ ಕಾರಣ. ಇದರಿಂದ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಕಬ್ಬಿನ ಕೃಷಿಯ ವಿಸ್ತೀರ್ಣ 3 ಪಟ್ಟು ಹೆಚ್ಚಾಗಿದೆ. ಇದು ರೈತರ ಆದಾಯವನ್ನು ಹೆಚ್ಚಿಸಿದೆ. ಈ ವೈವಿಧಿ್ಯಕರಣದಿಂದ ಕೃಷಿಯ ಜಿಡಿಪಿ ಪಾಲು ಶೇ. 12ರಿಂದ 22ಕ್ಕೆ ಏರುತ್ತದೆ ಎಂದು ಅವರು ವಾದಿಸಿದರು.