

ಲಖನೌ(ಉತ್ತರಪ್ರದೇಶ): ಆನ್‌ಲೈನ್ ಗೇಮ್, ಜೂಜಾಟವು ಯುವಕರು, ಮಕ್ಕಳೆನ್ನದೆ ಎಲ್ಲರನ್ನೂ ಹಾಳುಗೆಡವುತ್ತಿರುವುದು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕಾಣಬಹುದು. ಗೇಮ್ ಆ್ಯಪ್ಗಳ ಮೂಲಕ ಜೂಜಾಟದಲ್ಲಿ ತೊಡಗುತ್ತಿರುವ ಅಮಾಯಕ ಯುವಜನರು ಅಮೂಲ್ಯ ಸಮಯ ವ್ಯರ್ಥಮಾಡಿಕೊಳ್ಳುತ್ತಿದ್ದು, ಮನೆಯಲ್ಲಿ ಸಿಕ್ಕ ಹಣ, ಆಭರಣ ಏನನ್ನೂ ಬಿಡದೆ ಹೊತ್ತೊಯ್ದು ಮಾರಿ ಇಡೀ ಕುಟುಂಬವನ್ನು ನರಕದ ಕೂಪಕ್ಕೆ ತಳ್ಳುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೌದು, ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಘೂಗಲ್‌ಪುರ ಗ್ರಾಮದ ಯುವಕ ತನ್ನ ಸಹೋದರಿಯ ಮದುವೆಗಾಗಿ ಕುಟುಂಬ ಸದಸ್ಯರು ಸಂಗ್ರಹಿಸಿದ್ದ 5.5 ಲಕ್ಷ ರೂ.ಗಳನ್ನು ಆನ್‌ಲೈನ್ ಗೇಮ್ ಆಡಿ ಕಳೆದುಕೊಂಡು ಮನೆಯವರು ದಿಗ್ಭ್ರಾಂತಿಗೆ ಒಳಗಾಗುವಂತೆ ಮಾಡಿದ್ದಾನೆ.
ಆನ್‌ಲೈನ್ ಗೇಮ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಇಟಾವಾ ಜಿಲ್ಲೆಯ ಘೂಗಲ್‌ಪುರದ ಅಂಕಿತ್ ಯಾದವ್ ಹಣ ಕಳೆದುಕೊಂಡು ಪಾಲಕರ ಬೈಗುಳ ತಪ್ಪಿಸಿಕೊಳ್ಳಲು ದುಷ್ಕರ್ಮಿಗಳು ನನ್ನನ್ನು ಕಾರಿನಲ್ಲಿ ಅಪಹರಿಸಿ, ಹಣ ಕಸಿದುಕೊಂಡಿದ್ದಾರೆ ಎಂದು ಕಥೆ ಕಟ್ಟಿ ಹೇಳಿದ್ದ. ಆದರೆ ಈತನ ಬಗ್ಗೆ ಅನುಮಾನಗೊಂಡು ಕುಟುಂಬದವರು ಸಂಬಂಧಿ ಸಂಜೀವಕುಮಾರ್ ಯಾದವ್ ಗೆ ತಿಳಿಸಿದ್ದಾರೆ. ಆತ ಪೊಲೀಸರಿಗೆ ದೂರು ನೀಡಿದ್ದು, ತನಿಖೆಯಲ್ಲಿ ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡಿರುವ ಸತ್ಯ ಬಹಿರಂಗವಾಗಿದೆ.