ಬೆಂಗಳೂರಿನಲ್ಲಿ ಸ್ಟಾರ್ಟಪ್ ಪಾರ್ಕ್ ಸ್ಥಾಪನೆ: ಸಚಿವ ಎಂ.ಬಿ.ಪಾಟೀಲ ಮಾಹಿತಿ

Venturise 2nd
Published on

ಬೆಂಗಳೂರು: ದೇಶದ ನವೋದ್ಯಮಗಳ ರಾಜಧಾನಿ ಎಂದು ಹೆಸರಾದ ಬೆಂಗಳೂರಿನಲ್ಲಿ ಪ್ರತ್ಯೇಕ ನವೋದ್ಯಮ ಉದ್ಯಾನ (ಸ್ಟಾರ್ಟಪ್ ಪಾರ್ಕ್) ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ ಗುರುವಾರ ಮಾಹಿತಿ ನೀಡಿದರು.

ಜಾಗತಿಕ ನವೋದ್ಯಮಗಳ ಸವಾಲಿನ ‘ವೆಂಚುರೈಸ್-24’ ಎರಡನೇ ಆವೃತ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ಜಪಾನ್, ದಕ್ಷಿಣಕೊರಿಯಾಗಳ ಮಾದರಿಯಲ್ಲಿ ನವೋದ್ಯಮಗಳ ಅಗತ್ಯಕ್ಕೆ ತಕ್ಕಂತೆ ಈ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು ಎಂದರು.

ಸ್ಥಳಾವಕಾಶ, ನಿವೇಶನ, ಸುಸಜ್ಜಿತ ಸೌಲಭ್ಯ ಒದಗಿಸಲಾಗುವುದು. ಬಳಕೆಗೆ ಸಿದ್ಧವಿರುವ ಕಚೇರಿಗಳು ಇಲ್ಲಿ ಇರಲಿವೆ. ವಿನೂತನ ಆಲೋಚನೆಗಳನ್ನು ಸುಸೂತ್ರವಾಗಿ ಕಾರ್ಯಗತಗೊಳಿಸಲು, ಪ್ರತಿಭಾನ್ವಿತ ನವೋದ್ಯಮಿಗಳಿಗೆ ಪೂರಕ ಪರಿಸರ ನಿರ್ಮಿಸಲಾಗುವುದು ಎಂದು ತಿಳಿಸಿದರು.

ನವೋದ್ಯಮ ಸವಾಲು ಉಪಕ್ರಮವು ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಬೆಳೆಸುವ ಮಹತ್ವಾಕಾಂಕ್ಷೆ ಹೊಂದಿದೆ. ಜಾಗತಿಕ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ, ಮಾರ್ಗದರ್ಶನ ಕಾರ್ಯಕ್ರಮ ವಿಸ್ತರಿಸಿ ಉತ್ತಮಗೊಳಿಸಲು ಬದ್ಧರಾಗಿದ್ದೇವೆ ಎಂಬ ಎಂ.ಬಿ.ಪಾಟೀಲ ಭರವಸೆ ನೀಡಿದರು.

2.50 ಕೋಟಿ ರೂ. ಮೊತ್ತದ ಬಹುಮಾನ

ಈ ಬಾರಿ ನವೋದ್ಯಮ ಸವಾಲು ಮೂರು ಸುತ್ತುಗಳನ್ನು ಒಳಗೊಂಡಿದೆ. ಸವಾಲು ಗೆಲ್ಲಲು ಮುಂಚೂಣಿಯಲ್ಲಿರುವ ನವೋದ್ಯಮಗಳಿಗೆ 2.50 ಕೋಟಿ ರೂ. ಮೊತ್ತದ ಬಹುಮಾನ ಹಂಚಿಕೆಯಾಗಲಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ, ತೀರ್ಪುಗಾರರಿಗೆ ಮಾಹಿತಿ ನೀಡಲಾಗುತ್ತದೆ. ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ವಿವರಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ಪ್ರಕ್ರಿಯೆ 3-4 ತಿಂಗಳಲ್ಲಿ ಮುಗಿಯಲಿದ್ದು, ವಿಶ್ವದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಪ್ರವೇಶಗಳನ್ನು ಆಕರ್ಷಿಸುವ ಗುರಿಯಿದೆ ಎಂದು ಎಂ.ಬಿ.ಪಾಟೀಲ ವಿವರಿಸಿದರು.

ವೆಂಚುರೈಸ್ ಎರಡನೇ ಆವೃತ್ತಿಯು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ತಯಾರಿಕೆ, ಶುದ್ಧ ಇಂಧನ ವಾಹನ ಸಂಚಾರ, ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಗಮನ ಕೇಂದ್ರೀಕರಿಸಲಿದೆ.

ವಿಶ್ವದ ನವೋದ್ಯಮಗಳು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ, ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟಪ್‌ಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆಯಾಗಲಿದೆ.

ಪ್ರಮುಖರಾದ ಪಿಕ್ಸೆಲ್ ಸ್ಥಾಪಕ, ಸಿಇಒ ಅವೈಸ್ ಅಹ್ಮದ್, ನೊಪೊ ನ್ಯಾನೋ ಟೆಕ್ನಾಲಜಿಸ್ ಸಂಸ್ಥಾಪಕ, ಸಿಇಯ ಗಧಾಧರ್ ರೆಡ್ಡಿ, ಎಥೆರಿಯಲ್ ಮಷೀನ್ಸ್ ಸಹ ಸಂಸ್ಥಾಪಕ, ಸಿಇಒ ಕೌಶಿಕ್ ಮುಡ್ಡಾ ಮತ್ತು ಬೆಲಾಟ್ರಿಕ್ಸ್ ಏರೋಸ್ಪೇಸ್ ಸಿಇಒ ಹಾಗೂ ಸಿಟಿಒ ರೋಹನ್ ಗಣಪತಿ ಈ ಬಾರಿ ಮಾರ್ಗದರ್ಶನ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ ಪ್ರಕಾಶ್, ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಏಕರೂಪ್ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net