ದಿನಗೂಲಿ ಕಾರ್ವಿುಕರಿಗೆ ನಿಧಿ ಸ್ಥಾಪನೆ

corona move-1 mar 20
Published on

ಬೆಂಗಳೂರು: ಚಿತ್ರೀಕರಣ ಚಟುವಟಿಕೆಗಳು ಯಾವಾಗ ಬಂದ್ ಆದರೂ, ಮೊದಲು ಸಮಸ್ಯೆ ಎದುರಿಸುವುದು ಚಲನಚಿತ್ರ ಕ್ಷೇತ್ರದ ದಿನಗೂಲಿ ಕಾರ್ವಿುಕರು. ಏಕೆಂದರೆ, ಪ್ರತಿ ದಿನ ಸಿಗುವ ಸಂಬಳವನ್ನೇ ನಂಬಿರುವ ಅವರು ಚಿತ್ರೀಕರಣ ಚಟುವಟಿಕೆಗಳೇ ನಿಂತಾಗ ಎದುರಿಸುವ ಕಷ್ಟಗಳು ಹೇಳಲಸಾಧ್ಯ.

ಡಾ. ರಾಜಕುಮಾರ್ ಅವರ ಅಪಹರಣ ಆದ ಸಂದರ್ಭದಲ್ಲಿ ಚಿತ್ರೀಕರಣ ಚಟುವಟಿಕೆಗಳು ನಿಂತಾಗ, ಒಕ್ಕೂಟದ ವತಿಯಿಂದ ಕಾರ್ವಿುಕರಿಗೆ ದಿನಸಿ ಕೊಡಲಾಗಿತ್ತು. ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಈಗಲೂ ಅದು ಮುಂದುವರಿಯುತ್ತದಾ ಎಂಬ ಪ್ರಶ್ನೆ ಸಹಜ.

ಈ ಕುರಿತು ಕನ್ನಡ ಚಲನಚಿತ್ರ ಕಾರ್ವಿುಕರ ಮತ್ತು ತಂತ್ರಜ್ಞರ ಒಕ್ಕೂಟ ಬುಧವಾರ ಮಹತ್ವದ ಸಭೆಯೊಂದನ್ನು ಮಾಡಿದೆ. ಈ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದೆ. ಈ ಕುರಿತು ಮಾತನಾಡುವ ಒಕ್ಕೂಟದ ಅಧ್ಯಕ್ಷ ಅಶೋಕ್, ‘ಸದ್ಯದಲ್ಲೇ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ತುರ್ತನಿಧಿಗೆ ಹಣ ಬಿಡುಗಡೆ ಮಾಡುವುದಕ್ಕೆ ಕೇಳಲಿದ್ದೇವೆ. ಆ ಹಣದಿಂದ ಕಾರ್ವಿುಕರಿಗೆ ಅಗತ್ಯವಿರುವ ದಿನಸಿ, ಔಷಧಿಗೆ ಬಳಸಿಕೊಳ್ಳಲಾಗುತ್ತದೆ. ಇನ್ನು ಕನ್ನಡದ ಎಲ್ಲ ಪ್ರಮುಖ ಕಲಾವಿದರನ್ನು ಭೇಟಿ ಮಾಡಿ, ಅವರಿಂದ ಸಹಾಯ ಯಾಚನೆ ಮಾಡುವ ಯೋಚನೆ ಇದೆ. ಮಾ.31ರವರೆಗೂ ಚಿತ್ರೀಕರಣ ಚಟುವಟಿಕೆಗಳು ಇಲ್ಲ ಎಂದು ಅಧಿಕೃತ ಘೋಷಣೆಯಾಗಿದೆ. ಅದು ಇನ್ನಷ್ಟು ಕಾಲ ಮುಂದುವರಿದರೆ ಕಷ್ಟ. ಈ ನಿಟ್ಟಿನಲ್ಲಿ ಕಾರ್ವಿುಕರ ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ಹೇಳುತ್ತಾರೆ. ಈ ಮಧ್ಯೆ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಸಹ ಚಿತ್ರರಂಗದ ದಿನಗೂಲಿ ನೌಕರರಿಗೆ ಒಂದು ನಿಧಿ ಸ್ಥಾಪಿಸಿದ್ದು, ಕಲಾವಿದರು ಮತ್ತು ತಂತ್ರಜ್ಞರಿಗೆ ಆ ನಿಧಿಗೆ ಉದಾರವಾಗಿ ಧನಸಹಾಯ ಮಾಡುವಂತೆ ಕೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net