

ಬೆಂಗಳೂರು: ಪೊಲೀಸರಿಗೆ ಅಗತ್ಯ ತಂತ್ರಜ್ಞಾನದ ತರಬೇತಿ ನೀಡುವ ನಿಟ್ಟಿನಲ್ಲಿ ‘ಬೆಂಗಳೂರು ಸೈಬರ್‌ಸ್ಪೇರ್ ಸೆಂಟರ್ ಫಾರ್ ಎಕ್ಸಲೆನ್ಸ್’ (ಬಿಸಿಸಿಇ) ಕೇಂದ್ರ ತೆರೆಯಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ಖಾಸಗಿ ಹೋಟೆಲ್‌ನಲ್ಲಿ ನಗರ ಪೊಲೀಸರು ಮತ್ತು 50 ಐಟಿ-ಬಿಟಿ ಕಂಪನಿ ಮುಖ್ಯಸ್ಥರು ಒಳಗೊಂಡ ‘ಟೆಕ್‌ಫ್ಯೂಶನ್ ಸನ್‌ರೈಸ್ ಸಮಿಟ್- 2023’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಗತ್ತಿನಲ್ಲಿ ಬೆಂಗಳೂರು ನಗರ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂದೆ ಇದೆ. ಸೈಬರ್ ಸೆಕ್ಯೂರಿಟಿ ಕೌಶಲ ಜ್ಞಾನ ಪೊಲೀಸರೊಂದಿಗೆ ಹಂಚಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು ಎಂದರು ತಿಳಿಸಿದರು.
ಪೊಲೀಸ್ ಇಲಾಖೆಗೆ ಇಂಜಿನಿಯರಿಂಗ್, ಎಂಎಸ್ಸಿ ಇನ್ನಿತರ ತಾಂತ್ರಿಕ ಪದವೀಧರರು ಸೇರುತ್ತಿದ್ದಾರೆ. ಇವರನ್ನು ಗುರುತಿಸಿ ಐಟಿ ಕಂಪನಿಗಳ ಸಹಭಾಗಿತ್ವದಲ್ಲಿ ಸೈಬರ್ ಸೆಕ್ಯೂರಿಟಿ ಕುರಿತು ತರಬೇತಿ ನೀಡಲಾಗುವುದು. ಇದಕ್ಕಾಗಿಯೇ ‘ಬೆಂಗಳೂರು ಸೈಬರ್‌ಸ್ಪೇರ್ ಸೆಂಟರ್ ಫಾರ್ ಎಕ್ಸಲೆನ್ಸ್’ ಕೇಂದ್ರ ತೆರೆಯಲಾಗುತ್ತದೆ ಎಂದರು.
ಸಭೆಯಲ್ಲಿ 50ಕ್ಕೂ ಹೆಚ್ಚು ಐಟಿ ಕಂಪನಿ ಮುಖಸ್ಥರು ಭಾಗವಹಿಸಿದ್ದರು. ಬೆಂಗಳೂರು ಸ್ೇ ಸಿಟಿ ಖ್ಯಾತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿದ್ದಾರೆ. ಟ್ರಾಫಿಕ್ ಸಮಸ್ಯೆ, ಸೈಬರ್ ಕ್ರೈಂ ಮುಖ್ಯವಾಗಿವೆ. ಈಗಾಗಲೇ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಬೆಂಗಳೂರು ನಗರ ಪೊಲೀಸರು ಕೈಗೊಂಡಿದ್ದು, ಯಶಸ್ವಿಯಾಗಿದ್ದಾರೆ. ಸೈಬರ್ ಕ್ರೈಂ ಮಾಡುವವರನ್ನು ಮಟ್ಟಹಾಕಲು ತಮ್ಮ ಕಂಪನಿಗಳಲ್ಲಿ ಲಭ್ಯವಿರುವ ಸಂಶೋಧನಾ ಸೌಲಭ್ಯ, ಪ್ರಯೋಗಾಲಯಗಳನ್ನು ಬಳಸಿಕೊಳ್ಳುವಂತೆ ಐಟಿ ಕಂಪನಿಗಳ ಮುಖ್ಯಸ್ಥರು ಮುಂದೆ ಬಂದಿದ್ದಾರೆ. ತಂತ್ರಜ್ಞಾನದ ಸಹಕಾರವನ್ನು ಪಡೆಯಲಾಗುವುದು. ಇದೆ ಮೊದಲ ಬಾರಿಗೆ ‘ಟೆಕ್‌ಫ್ಯೂಶನ್ ಸನ್‌ರೈಸ್ ಸಮಿಟ್’ ಏರ್ಪಡಿಸಲಾಗಿದೆ. ಇದೇ ರೀತಿ ಪ್ರತಿವರ್ಷ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್, ಡಿಜಿಪಿಗಳಾದ ಕಮಲ್ ಪಂತ್, ಸಿ.ಎಚ್. ಪ್ರತಾಪ್ ರೆಡ್ಡಿ, ಪೊಲೀಸ್ ಆಯುಕ್ತ ಬಿ. ದಯಾನಂದ್, ಜಂಟಿ ಆಯುಕ್ತ ಎಂ.ಎನ್. ಅನುಚೇತ್, ಸತೀಶ್‌ಕುಮಾರ್, ರಮಣ್ ಗುಪ್ತ ಮತ್ತಿತರ ಹಿರಿಯ ಐಪಿಎಸ್ ಅಧಿಕಾರಿಗಳು ಭಾಗವಹಿಸಿದ್ದರು.
ಸೈಬರ್‌ಸ್ಪೇರ್ ಸೆಂಟರ್ ಫಾರ್ ಎಕ್ಸಲೆನ್ಸ್ ಸ್ಥಾಪನೆ ಮೂಲಕ ಸೈಬರ್‌ಸ್ಪೇರ್ ಸಂಶೋಧನಾ ಪ್ರಯೋಗಾಲಯ ತೆರೆಲಾಗುತ್ತದೆ. ಅತ್ಯಾಧುನಿಕ ಅವಿಷ್ಕಾರಗಳಿಗೆ ಪ್ರೋತ್ಸಾಹಿಸುವುದು ಮತ್ತು ಕಾನೂನು ಜಾರಿಯೊಂದಿಗೆ ಸಾರ್ವಜನಿಕ ಸುರಕ್ಷತೆ ಹೆಚ್ಚು ಒತ್ತು ಕೊಡಲಾಗುವುದು. ಗೃಹ ಇಲಾಖೆ ಮತ್ತು ಬಯೋಟೆಕ್ ಕಂಪನಿಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಸೈಬರ್ ೈರ್‌ವಾಲ್ ನಿರ್ಮಿಸುವುದು, ಸಾಮಾಜಿಕ ಮಾಧ್ಯಮದ ಮೇಲ್ವಿಚಾರಣೆ ವಹಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ ಹೊಸ ಸಂಶೋಧನೆ, ಕಾರ್ಯಾಗಾರಗಳನ್ನು ಏರ್ಪಡಿಸುವುದು, ಸೈಬರ್ ಸೆಕ್ಯೂರಿಟಿ ಕುರಿತು ಪೊಲೀಸರಿಗೆ ತರಬೇತಿ, ಸಾರ್ವಜನಿಕರಿಗೆ ಜಾಗೃತಿ, ಶಿಕ್ಷಣ ನೀಡುವುದರಲ್ಲಿ ತೊಡಗಿಸಿಕೊಳ್ಳುವುದು ಮೂಲ ಉದ್ದೇಶವಾಗಿದೆ. ಇದಕ್ಕೆ ಬೇಕಾದ ಅನುಧಾನವನ್ನು ಗೃಹ ಇಲಾಖೆ ಮತ್ತು ಬಯೋಟೆಕ್ ಕಂಪನಿಗಳು ವಹಿಸಲಿವೆ. ಇದೊಂದು ದೀರ್ಘಕಾಲದ ಯೋಜನೆಯಾಗಿದ್ದು, ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ‘ಪೊಲೀಸ್ ಡೇ’ ಜಾರಿಗೆ ತರಲು ಉದ್ದೇಶ ಹೊಂದಲಾಗಿದೆ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು. ಠಾಣಾ ವ್ಯಾಪ್ತಿಯಲ್ಲಿ ಇರುವ ಶಾಲಾ-ಕಾಲೇಜಿಗೆ ಸ್ಥಳೀಯ ಪೊಲೀಸರು ಭೇಟಿ ಕೊಟ್ಟು ವಿದ್ಯಾರ್ಥಿಗಳಲ್ಲಿ ಅಪರಾಧ ಚಟುವಟಿಕೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಪೊಲೀಸರು ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಾರೆ. ಅವರ ಉದ್ದೇಶ ಏನು, ಅವರ ಸೇವೆ ಸಮಾಜಕ್ಕೆ ಎಷ್ಟು ಮುಖ್ಯವಾಗಿದೆ ಎಂಬುದನ್ನು ತಿಳಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲಾಗುತ್ತದೆ ಎಂದರು.