ಎಸ್ಸೆಸ್ಸೆಲ್ಸಿಯಲ್ಲಿ 15ನೇ ಸ್ಥಾನಕ್ಕೆ ಜಿಗಿದ ಯಾಲಕ್ಕಿ ನಾಡು; ಬ್ಯಾಡಗಿ ಫಸ್ಟ್ ಹಿರೇಕೆರೂರ ಲಾಸ್ಟ್

9-RNR-04
Published on

ಹಾವೇರಿ: 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕಳೆದ ಬಾರಿ 22ನೇ ಸ್ಥಾನದಲ್ಲಿದ್ದ ಹಾವೇರಿ ಜಿಲ್ಲೆ ಈ ಬಾರಿ 15 ಸ್ಥಾನಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ 7 ಸ್ಥಾನ ಹೆಚ್ಚಿಸಿಕೊಳ್ಳುವ ಮೂಲಕ ಯಾಲಕ್ಕಿ ಕಂಪಿನ ನಾಡು ಹಾವೇರಿ ಗಣನೀಯ ಸಾಧನೆ ಕಂಡಿದೆ.
ಈ ಬಾರಿ ಜಿಲ್ಲೆಯಲ್ಲಿ 21,923 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 17,175 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 78.34ರಷ್ಟು ಫಲಿತಾಂಶ ಬಂದಿದೆ. ಕಳೆದ 2022-23ನೇ ಸಾಲಿನಲ್ಲಿ 22ನೇ ಸ್ಥಾನಕ್ಕೆ ಕುಸಿದಿದ್ದ ಶೈಕ್ಷಣಿಕ ಕ್ಷೇತ್ರ ಈ ಬಾರಿ 15ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದೆ ಇದ್ದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ತರಬೇತಿ ಕೊಡಿಸಲಾಗಿತ್ತು. ಅಲ್ಲದೆ ಜಿಲ್ಲೆಯಲ್ಲಿ ವಿವಿಧ ಸಂಘ-ಸಂಸ್ಥೆಯವರು, ಶಿಕ್ಷಣ ಪ್ರೇಮಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಿದ್ದರು. ಇದರ ಫಲವಾಗಿ ಈ ವರ್ಷ ರಾಜ್ಯಕ್ಕೆ ಹಾವೇರಿ ಜಿಲ್ಲೆಗೆ 15ನೇ ಸ್ಥಾನ ದೊರೆತಿದೆ. ಅಲ್ಲದೆ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 51 ಶಾಲೆಗಳ ಫಲಿತಾಂಶ ಶೇ. 100ರಷ್ಟಾಗಿರುವುದು ವಿಶೇಷವಾಗಿದೆ.
ಜಿಲ್ಲೆಗೆ ಟಾಪರ್ ಇವರು…
ಕನ್ನಡ ಮಾಧ್ಯಮದಲ್ಲಿ ಬ್ಯಾಡಗಿಯ ಬಿಇಎಸ್ ಪ್ರೌಢಶಾಲೆ ವಿದ್ಯಾರ್ಥಿ ಹೇಮಂತ ಚತ್ರದ ಹಾಗೂ ಮೋಟೆಬೆನ್ನೂರಿನ ವಿ.ಬಿ. ಕಳಸೂರಮಠ ಶಾಲೆಯ ತರುಣ ಹಿರೇಮಠ ಶೇ. 98.72 ಅಂಕಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಸವನಾಳದ ಸರ್ಕಾರಿ ಪ್ರೌಢಶಾಲೆಯ ಅರುಂದತಿ ಅಮತೇನವರ ಶೇ. 98.08ರಷ್ಟು ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ ಹಾವೇರಿಯ ಸೇಂಟ್‌ಆನ್ಸ್ ಪ್ರೌಢಶಾಲೆಯ ಸಿಂಚನಾ ಓಲೇಕಾರ ಶೇ. 99.20 ಅಂಗಳಿಸಿ ಜಿಲ್ಲೆಗೆ ಪ್ರಥಮ, ಶಿಗ್ಗಾಂವಿಯ ಜೆಎಂಜೆ ಪ್ರೌಢಶಾಲೆಯ ಅಮಿತ ಕೆಲಗೇರಿ ಹಾಗೂ ಚಿಕ್ಕೇರೂರ ಎಂಡಿಆರ್‌ಎಸ್ ಶಾಲೆಯ ಸರ್ವಮಂಗಳಾ ಸಾವಕಾರ ಶೆ. 99.04 ಅಂಕಗಳಿಸಿ ದ್ವಿತೀಯ ಹಾಗೂ ಅಕ್ಕಿಆಲೂರ ಕಿತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೇಹಾ ಹಳಿಯಾಳ ಹಾಗೂ ಹಂಸಬಾವಿ ಡಾ. ಬಸವರಾಜ ಕೆರೂಡಿ ಪ್ರೌಢಶಾಲೆಯ ಗುಣಶ್ರೀ ದೇಸಾಯಿ ಶೇ. 98.88ರಷ್ಟು ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಉರ್ದು ಮಾಧ್ಯಮದಲ್ಲಿ ಹಾನಗಲ್ಲ ಹರಜತ ಮಖಬೂಲಿಯಾ ಪ್ರೌಢಶಾಲೆಯ ಬೀಬಿ ಸಕೀನಾ ಸುಂಕದ ಶೇ. 97.60ರಷ್ಟು ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ, ಹಾವೇರಿ ಸರ್ಕಾರಿ ಉರ್ದು ಪ್ರೌಢಶಾಲೆಯ ಉಮ್ಮೆ ಹಿತಜಾ ದೊಡ್ಮನಿ ಶೇ. 97.44ರಷ್ಟು ಅಂಕಗಳಿಸಿ ದ್ವೀತಿಯ, ಕನವಳ್ಳಿ ಸರ್ಕಾರಿ ಉರ್ದು ಪ್ರೌಢಶಾಲೆಯ ಸಬ್ರೀನ್ ಕಬ್ಬೂರ ಶೇ. 96.64ರಷ್ಟು ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net