ಕಾರ್ಮಿಕರಿಗೆ ಇಎಸ್​ಐ ಆಸ್ಪತ್ರೆ ಸೌಲಭ್ಯ ದಕ್ಕಲಿ

klr esi
ಕೋಲಾರ ತಾಲೂಕಿನ ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇಎಸ್​ಐ ಆಸ್ಪತ್ರೆ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಸಂಸದ ಎಂ.ಮಲ್ಲೇಶ್​ ಬಾಬು ಉದ್ಘಾಟಿಸಿದರು. ಕೊತ್ತೂರು ಜಿ.ಮಂಜುನಾಥ್​, ಎಂ.ಎಲ್​.ಅನಿಲ್​ ಕುಮಾರ್​, ಮಮತಾ ಇದ್ದರು.
Published on

ಕೋಲಾರ: ಇಎಸ್​ಐ ಆಸ್ಪತ್ರೆಯು ಕಾರ್ಮಿಕರಿಗೆ ಆರೋಗ್ಯ ಧಾಮವಿದ್ದಂತೆ, ಸಕಾಲದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಇದರ ಸೌಲಭ್ಯ ಕಾರ್ಮಿಕರಿಗೆ ದೊರೆಯುವಂತೆ ಮಾಡಬೇಕು ಎಂದು ಸಂಸದ ಎಂ.ಮಲ್ಲೇಶ್​ಬಾಬು ಹೇಳಿದರು.

ತಾಲೂಕಿನ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 100 ಹಾಸಿಗೆಗಳ ಇಎಸ್​ಐ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಲಾಂತರ ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಗೆ ಇಎಸ್​ಐ ಆಸ್ಪತ್ರೆ ಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಈಡೇರಿದೆ ಎಂದು ತಿಳಿಸಿದರು.

ಮಾಜಿ ಸಂಸದ ಎಸ್​.ಮುನಿಸ್ವಾಮಿ ಅವರ ಪರಿಶ್ರಮವೂ ಈ ಯೋಜನೆಯ ಹಿಂದೆ ಇದ್ದು, ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಕೂಡ ಒತ್ತು ನೀಡಿತ್ತು. ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಉತ್ತಮ ವೈದ್ಯಕಿಯ ಸೌಲಭ್ಯ ಸಿಗಲಿದೆ ಎಂದರು.

ಅಧಿಕಾರಿಗಳು, ಜನಪ್ರತಿನಿಧಿಗಳು, ವೈದ್ಯರು ತಿಳಿವಳಿಕೆ ಮೂಡಿಸಬೇಕು. ಇಲ್ಲದಿದ್ದರೆ ಚಿಕಿತ್ಸೆಗೆ ಕಾರ್ಮಿಕರು ಬರುವುದಿಲ್ಲ. ನರ್ಸಿಂಗ್​ ಹೋಂಗೆ ಹೋಗುತ್ತಾರೆ. ಹಾಗೆಯೇ ಗುಣಮಟ್ಟ ಕಾಯ್ದುಕೊಳ್ಳಬೇಕು. 32 ತಿಂಗಳಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಐದು ಎಕರೆಯಲ್ಲಿ 154 ಕೋಟಿ ರೂ. ಅನುದಾನದಲ್ಲಿ ಇಎಸ್​ಐ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದೆ. 48 ಸಾವಿರ ರೂ. ವಿಮಾ ನೌಕರರು ಹಾಗೂ ಸುಮಾರು 1.88 ಲಕ್ಷ ಕಾರ್ಮಿಕರಿಗೆ ನೆರವಾಗಲಿದೆ. ಜಿಲ್ಲೆಯಲ್ಲಿ ನರಸಾಪುರ, ವೇಮಗಲ್​ ಹಾಗೂ ಮಾಲೂರು ಕೈಗಾರಿಕಾ ಪ್ರದೇಶ ಇರುವುದರಿಂದ ಇಎಸ್​ಐ ಆಸ್ಪತ್ರೆ ನಿರ್ಮಿಸಬೇಕೆಂದು ಹಲವು ವರ್ಷಗಳ ಕೂಗೂ ಇತ್ತು ಎಂದು ಹೇಳಿದರು.

ಶಾಸಕ ಕೊತ್ತೂರು ಜಿ.ಮಂಜುನಾಥ್​ ಮಾತನಾಡಿ, ದೇಶದ ಪ್ರಗತಿಯಲ್ಲಿ ಕಾರ್ಮಿಕರ ಶ್ರಮ ಸಾಕಷ್ಟಿದೆ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ಸರ್ಕಾರಗಳ ಮೇಲಿದ್ದು, ಬೇಡಿಕೆಯಂತೆ ಇಎಸ್​ಐ ಕನಸು ನನಸಾಗಿದೆ, ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ಆಸ್ಪತ್ರೆ ಇದು ಎಂದು ಅಭಿಪ್ರಾಯಪಟ್ಟರು.

ಇಎಸ್​ಐ ಆಸ್ಪತ್ರೆಯಲ್ಲಿ ಉನ್ನತಮಟ್ಟದ ಚಿಕಿತ್ಸೆ ದೊರೆಯದೆ, ಇಲ್ಲಿಂದ ಬೇರೆ ಕಡೆ ಚಿಕಿತ್ಸೆಗೆ ಶಿಫಾರಸು ಮಾಡುತ್ತದೆ. ಈ ಆಸ್ಪತ್ರೆಯನ್ನು ಮಗುವಿನಂತೆ ಕಾಪಾಡಿಕೊಳ್ಳಬೇಕು. ನೀರು, ವಿದ್ಯುತ್​ ಸೌಲಭ್ಯವನ್ನು ಪಂಚಾಯಿತಿಯಿಂದ ಒದಗಿಸಬೇಕು. ಗುತ್ತಿಗೆದಾರರು ಕಟ್ಟಡ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಮಾತನಾಡಿ, ಪ್ರಸ್ತುತ 100 ಬೆಡ್​ ಇರುವ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದ್ದು, ಮುಂದೆ 200 ಬೆಡ್​ ಆಸ್ಪತ್ರೆ ಆಗಬೇಕು. ಆದಷ್ಟು ಬೇಗ ಲೋಕಾರ್ಪಣೆ ಆಗಲು ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯೆ ಮಮತಾ, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್​ ಸದಸ್ಯ ಸೀಸಂದ್ರ ಗೋಪಾಲಗೌಡ, ಕೇಂದ್ರ ಸರ್ಕಾರದ ಕಾರ್ಮಿಕ ರಾಜ್ಯ ವಿಮಾ ನಿಗಮದ ಅಧಿಕಾರಿ ರಾಜೇಶ್​ಕುಮಾರ್​, ಅಕ್ಷತಾ, ಜಿಲ್ಲಾ ಅಧೀಕ್ಷಕ ಕೆಜಿಎಫ್​ನ ರವಿ ಚಂದ್ರಶೇಖರ್​, ಮುಖಂಡರಾದ ಚಂಜಿಮಲೆ ರಮೇಶ್​, ಮೈಲಾಂಡಹಳ್ಳಿ ಮುರಳಿ ಹಾಜರಿದ್ದರು.

ನವದೆಹಲಿಯ ವರ್ಚುವಲ್​ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಕೇಂದ್ರ ಆಯುಷ್​ ಮಂತ್ರಿ ಪ್ರತಾಪ್​ ರಾವ್​ ಗಣಪತ್​ ರಾವ್​ ಜಾಧವ್​, ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್​ ಮಂಡವಿಯಾ, ಕೇಂದ್ರ ಕಾರ್ಮಿಕ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಚಿವೆ ಅನುಪ್ರಿಯ ಪಟೇಲ್​ ಇದ್ದರು.

ವರ್ಚುವಲ್​ ಮೂಲಕ ಶಂಕುಸ್ಥಾಪನೆ

ಕೋಲಾರ ತಾಲೂಕಿನ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ 100 ಹಾಸಿಗೆಗಳ ಇಎಸ್​ಐ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ವರ್ಚುವಲ್​ ವೇದಿಕೆ ಮೂಲಕ ನರೇಂದ್ರ ಮೋದಿ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು. ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನರಸಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರ ಭಾಷಣವನ್ನು ದೊಡ್ಡ ಪರದೆಯಲ್ಲಿ ನೇರ ಪ್ರಸಾರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net