

ಮುಂಬೈ: ತಮ್ಮ ಬೋಲ್ಡ್ ಅಭಿನಯ ಹಾಗೂ ಲುಕ್ನಿಂದ ಬಾಲಿವುಡ್ನಲ್ಲಿ ಸದ್ದು ಮಾಡಿರುವ ನಟಿ ಇಶಾ ಗುಪ್ತಾ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮೌನ ಮುರಿದಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ತಮಗಾದ ಕಹಿ ಅನುಭವದ ಕುರಿತು ಬಹಿರಂಗವಾಗಿ ನಟಿ ಮಾತನಾಡಿದ್ದಾರೆ.
ಈ ಹಿಂದೆ ನಟಿಯರಾದ ಕಂಗನಾ ರಣಾವತ್, ಸ್ವರಾ ಭಾಸ್ಕರ್, ರಾಧಿಕಾ ಅಪ್ಟೆ ಸೇರಿದಂತೆ ಹಲವು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡಿ ಚಿತ್ರರಂಗದ ಕರಾಳ ಮುಖವನ್ನು ಬಯಲಿಗೆಳೆದದಿದ್ದರು. ಇದೀಗ ನಟಿ ಇಶಾ ಗುಪ್ತಾ ತಮಗೆ ಎದುರಾಗಿದ್ದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.
ಸ್ಪಾಟ್‌ಬಾಯ್‌ಗೆ ನೀಡಿದ ಸಂದರ್ಶನದಲ್ಲಿ ಇಶಾ ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ಎದುರಿಸಿದ ಭಯಾನಕ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮಾತನಾಡಿದ್ಧಾರೆ. ಸಹ-ನಿರ್ಮಾಪಕರ ಮಾತನ್ನು ನಾನು ನಿರಾಕರಿಸಿದಾಗ ನನ್ನನ್ನು ಸಿನಿಮಾದಿಂದ ಹೊರ ಹಾಕಿದರು. ಇದಾದ ನಂತರ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ನನಗೆ ಅವಕಾಶ ನೀಡಲಿಲ್ಲ. ಏಕೆಂದರೆ ನನ್ನಿಂದ ಅವರಿಗೆ ಏನು ಪ್ರಯೋಜನವೆಂದು ನೇರವಾಗಿ ಕೇಳುತ್ತಿದ್ದರು.
ಇಬ್ಬರು ಕಾಸ್ಟಿಂಗ್ ಕೌಚ್‌ನ ಬಲೆಗೆ ನನ್ನನ್ನು ದೂಕಲು ಪ್ರಯತ್ನಿಸಿದರು. ಅವರ ಯೋಜನೆ ನನಗೆ ಅರ್ಥವಾಗಿತ್ತು. ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅವರಿಂದ ಬಚಾವ್ ಆಗಲು ನಾನು ನನ್ನ ಮೇಕಪ್ ಆರ್ಟಿಸ್ಟ್‌ನನ್ನು ನನ್ನ ಕೋಣೆಯಲ್ಲಿ ಮಲಗಲು ಕರೆದೆ. ನನಗೆ ರಕ್ಷಣೆ ಸಿಕ್ಕಿದ್ದರಿಂದ ಅವರ ಆಸೆ ಈಡೇರಲಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ಸ್ಟಾರ್ ಮಕ್ಕಳ ಜೊತೆ ಅವರು ಈ ರೀತಿ ಮಾಡಲ್ಲ ಏಕೆಂದರೆ ಅವರ ಪೋಷಕರು ಇಂತಹವರನ್ನು ಕೊಲ್ಲುತ್ತಾರೆ. ನಾವು ಕೆಲಸ ಬೇಕಾದರೆ ಏನ್ ಬೇಕಾದರೂ ಮಾಡುತ್ತೇವೆ ಅಂತ ಇಂತಹವರು ಭಾವಿಸುತ್ತಾರೆ ಎಂದು ನಟಿ ಇಶಾ ಗುಪ್ತಾ ಬೇಸರ ವ್ಯಕ್ತಪಡಿಸಿದ್ದಾರೆ.