ಸಂಕಷ್ಟದಲ್ಲಿ ಸಿಲುಕಿದ ಎಸ್ಕಾಂಗಳು; ಸ್ಥಳೀಯ ಸಂಸ್ಥೆಗಳಿಂದ ಬಾಕಿ ಹಣ ವಸೂಲಿಗೆ ಕ್ರಮ

power
Published on

ಬೆಂಗಳೂರು:
ಸ್ಥಳೀಯ ಸಂಸ್ಥೆಗಳಿಂದ ಬರಬೇಕಾಗಿರುವ ಸುಮಾರು 15 ಸಾವಿರ ಕೋಟಿ ರೂ ಬಾಕಿ ಹಣವನ್ನು ಪಡೆದುಕೊಳ್ಳಲು ಮುಂದಾಗಿರುವ ಇಂಧನ ಇಲಾಖೆ, ಈ ಬಗ್ಗೆ ಸರ್ಕಾರಕ್ಕೂ ಮನವಿ ಮಾಡಿದೆ.
ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ತನಕ, ಪಟ್ಟಣ ಪಂಚಾಯಿತಿಯಿಂದ ಹಿಡಿದು ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ಬಾಕಿ ಉಳಿದುಕೊಂಡಿದೆ.
ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಬರಬೇಕಾಗಿರುವ ಬಾಕಿ ಹಣವನ್ನು ಭರಿಸಲು ಮುಂದಾಗಿದ್ದ ಸರ್ಕಾರ 3 ಸಾವಿರ ಕೋಟಿ ರೂ ನೆರವು ಒದಗಿಸಿತ್ತು. ಆದಾದ ಬಳಿಕ ಇಲ್ಲಿಯ ತನಕ ಯಾವ ಸರ್ಕಾರಗಳು ಈ ಬಾಕಿ ಹಣ ನೀಡುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಲಿಲ್ಲ.
200 ಯುನಿಟ್ ತನಕ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಈಗಾಗಲೇ ಸರ್ಕಾರ ಎಸ್ಕಾಂಗಳ ಬಿಲ್‌ನ್ನು ತುಂಬುತ್ತಿರುವುದು ಹೊರೆಯಾಗಿದೆ. ಇದರ ಜೊತೆಗೆ ಬಾಕಿ ಹಣವನ್ನು ಕಟ್ಟಬೇಕು ಎಂದರೆ ಇನ್ನಷ್ಟು ಹೊರೆಯಾಗಲಿದೆ. ಅದಕ್ಕಾಗಿ ಹಂತ ಹಂತವಾಗಿ ಹಣವನ್ನು ತುಂಬುವ ಯೋಜನೆಯನ್ನು ರೂಪಿಸಿ ಜಾರಿಗೆ ನೀಡಿದರೆ ಮಾತ್ರ ಎಸ್ಕಾಂಗಳ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎನ್ನುವ ಸಲಹೆಯನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಇಂಧನ ಸಚಿವರು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ನಷ್ಟದಲ್ಲಿರುವ ಎಸ್ಕಾಂಗಳಿಗೆ ಇರುವ ಬಾಕಿ ಹಣವನ್ನು ಭರಿಸಲು ಸರ್ಕಾರ ಯಾವ ಕ್ರಮವನ್ನು ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net