ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್​ ಹಸಿನಾ ಆರೋಪ | Sheikh Hasina

Untitled design - 2025-01-18T142303.532
Published on

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರು ಅಧಿಕಾರದಿಂದ ಕೆಳಗಿಳಿದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ತನ್ನನ್ನು ಮತ್ತು ತನ್ನ ತಂಗಿ ಶೇಖ್ ರೆಹಾನಾ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಹಸೀನಾ ಹೇಳಿದ್ದಾರೆ. ಬಾಂಗ್ಲಾದೇಶ ಅವಾಮಿ ಲೀಗ್ ಪಾರ್ಟಿಯ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ಆಡಿಯೊ ಭಾಷಣದಲ್ಲಿ ಅವರು ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾನು ಮತ್ತು ರೆಹಾನಾ ಸ್ವಲ್ಪದರಲ್ಲೇ ಪಾರಾದೆವು. ಕೇವಲ 20-25 ನಿಮಿಷಗಳ ವ್ಯತ್ಯಾಸದಿಂದ ನಮ್ಮ ಪ್ರಾಣ ಉಳಿಯಿತು. ತನ್ನನ್ನು ಕೊಲ್ಲಲು ಹಲವಾರು ಸಂಚು ರೂಪಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆಗಸ್ಟ್ 21ರ ಹತ್ಯೆಗಳಿಂದ ಬದುಕುಳಿದಿರುವುದು ಅಥವಾ ಕೋಟ್ಲಿಪಾರಾದಲ್ಲಿ ಬಾಂಬ್‌ನಿಂದ ಬದುಕುಳಿದಿರುವುದು ಮತ್ತು 2024ರ ಆಗಸ್ಟ್ 5ರಂದು ಬದುಕಿರುವುದು ಅಲ್ಲಾಹನ ಇಚ್ಛೆಯಿಂದ ಸಂಭವಿಸಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಾ ನನ್ನನ್ನು ಕಾಪಾಡಿದ್ದಾರೆ. ಇಲ್ಲದಿದ್ದರೆ ನಾನು ಈ ಬಾರಿ ಉಳಿಯುತ್ತಿರಲಿಲ್ಲ! ನಾನು ಬೇರೆ ಏನಾದರೂ ಮಾಡಬೇಕೆಂದು ಅಲ್ಲಾ ಬಯಸುತ್ತಾರೆ. ಆದರೆ ನನ್ನ ದೇಶವಿಲ್ಲದೆ ಮತ್ತು ನನ್ನ ಮನೆಯಿಲ್ಲದೆ ಬದುಕುತ್ತಿದ್ದೇನೆ. ಎಲ್ಲವೂ ಸುಟ್ಟು ಕರಕಲಾಗಿದೆ ನಾನು ಬಳಲುತ್ತಿದ್ದೇನೆ ಎಂದು ಹಸೀನಾ ಹೇಳಿದ್ದಾರೆ.

ವಾಸ್ತವವಾಗಿ ಕಳೆದ ವರ್ಷ ಪ್ರತಿಭಟನಾನಿರತ ವಿದ್ಯಾರ್ಥಿಗಳು ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಇದರ ಅಡಿಯಲ್ಲಿ 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ 30 ಪ್ರತಿಶತ ಸರ್ಕಾರಿ ಉದ್ಯೋಗಗಳನ್ನು ಮೀಸಲಿಡಲಾಗಿದೆ. ಆದರೆ, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿಚಾರದಲ್ಲಿ ಆರಂಭವಾದ ಪ್ರತಿಭಟನೆಗಳು ದೇಶಾದ್ಯಂತ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡವು. ಇದಾದ ನಂತರ ಪರಿಸ್ಥಿತಿ ಹದಗೆಟ್ಟಿತು. ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಬೇಕಾಯಿತು.

ವಾರಗಳ ಪ್ರತಿಭಟನೆ ಮತ್ತು ಘರ್ಷಣೆಗಳ ನಂತರ ಬಾಂಗ್ಲಾದೇಶದ ಆಗಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲಾಯಿತು. ಈ ಅವಧಿಯಲ್ಲಿ ನಡೆದ ಹಿಂಸಾಚಾರದಲ್ಲಿ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಶೇಖ್​ ಹಸೀನಾ ಅವರು ಬಾಂಗ್ಲಾದೇಶದಿಂದ ಭಾರತಕ್ಕೆ ಪಲಾಯನ ಮಾಡಿದ ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ರಚಿಸಲಾಯಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net