ನವದೆಹಲಿ: ಕೆನಡಾದ ಪ್ರಧಾನಿ ರೇಸ್ನಲ್ಲಿ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ(Chandra Arya) ನಾಮಪತ್ರ ಸಲ್ಲಿಸಿದ್ದಾರೆ. ಅದೆ ವೇಳೆ ಕೆನಡಾ ಪಾರ್ಲಿಮೆಂಟ್ನಲ್ಲಿ ತನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡಿದರು ಎಂಬ ವಿಡಿಯೋ ಇಂದು ಅಂದರೆ ಶುಕ್ರವಾರ (ಜನವರಿ 17) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ: Mahakumbh 2025 | ಫೆ.28ರವರೆಗೆ ಪ್ರಯಾಗ್ರಾಜ್ನಲ್ಲಿ ನಿಷೇಧಾಜ್ಞೆ ಜಾರಿ; ಕಾರಣ ಏನು ಗೊತ್ತಾ?
ವೈರಲ್ ವಿಡಿಯೋದಲ್ಲಿ ಸದನವನ್ನು ಉದ್ದೇಶಿಸಿ ಆರ್ಯ ಅವರು ತಮ್ಮ ಪರಂಪರೆಯ ಬಗ್ಗೆ ಅಪಾರ ಹೆಮ್ಮೆಯಿಂದ ಮಾತನಾಡಿದ್ದಾರೆ. ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಲು ಗ್ರಾಮದ ವ್ಯಕ್ತಿಯೊಬ್ಬರು ಕೆನಡಾದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು, ಈಗ ಈ ಗೌರವಾನ್ವಿತ ಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡುತ್ತಿರುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳುತ್ತಾ, ರಾಷ್ಟ್ರಕವಿ ಕುವೆಂಪು ಅವರ ಹಾಗೂ ಪ್ರಸಿದ್ಧ ನಟ ಡಾ.ರಾಜ್‌ಕುಮಾರ್ ಅವರು ಹಾಡಿದ ಪ್ರಸಿದ್ಧ ಹಾಡಿನ ಸಾಲನ್ನು ಹೇಳಿದರು. ಎಲ್ಲಾದರೂ ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಹೇಳುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾರೆ.
ಆದರೆ ವೈರಲ್ ಆಗುತ್ತಿರುವ ಈ ವಿಡಿಯೋ ನಾಮಪತ್ರ ಸಲ್ಲಿಸುವಾಗ ಕೆನಡಾ ಪಾರ್ಲಿಮೆಂಟ್ನಲ್ಲಿ ಚಂದ್ರ ಆರ್ಯ ಅವರು ಮಾತನಾಡಿರುವುದಲ್ಲ. ಈ ವಿಡಿಯೋ ಇಂದಿನದ್ದಲ್ಲ, ಹಳೆಯದ್ದು ಎಂಬುದು ತಿಳಿದು ಬಂದಿದೆ. ಇದನ್ನು ಸ್ವತಃ ಚಂದ್ರ ಆರ್ಯ ಅವರೇ ಮೇ 20, 2022ರಂದು ಹಂಚಿಕೊಂಡಿದ್ದಾರೆ. ಹಾಗೂ ಶೀರ್ಷಿಕೆಯಲ್ಲಿ ಕೆನಡಾದ ಸಂಸತ್ತಿನಲ್ಲಿ ನಾನು ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಕನ್ನಡ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 5 ಕೋಟಿ ಜನರು ಮಾತನಾಡುತ್ತಾರೆ. ಭಾರತದ ಹೊರಗಿನ ಜಗತ್ತಿನ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು ಎಂದು ಬರೆದಿದ್ದಾರೆ.
I spoke in my mother tongue (first language) Kannada in Canadian parliament.
This beautiful language has long history and is spoken by about 50 million people.
This is the first time Kannada is spoken in any parliament in the world outside of India. pic.twitter.com/AUanNlkETT— Chandra Arya (@AryaCanada) May 19, 2022
ಇತ್ತೀಚೆಗೆ ಚಂದರ ಆರ್ಯ ಅವರು ನಾನು ಕೆನಡಾದ ಮುಂದಿನ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಘೋಷಿಸಿದ್ದರು. ಇದರಿಂದ ನಾನು ನಮ್ಮ ದೇಶವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು. ಕೆನಡಾಕ್ಕೆ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರದ ನಾಯಕತ್ವದ ಅಗತ್ಯವಿದೆ. ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಎಲ್ಲಾ ಕೆನಡಿಯನ್ನರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಕೆನಡಾ ಇಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದರು.
ಪ್ರಧಾನಿಯಾಗುವ ತಮ್ಮ ಉದ್ದೇಶದ ಬಗ್ಗೆ ಮಾತನಾಡಿದ ಚಂದ್ರ ಆರ್ಯ, ಕೆನಡಾಕ್ಕೆ ಆರ್ಥಿಕತೆಯನ್ನು ಮರುನಿರ್ಮಾಣ ಮಾಡುವುದು, ದೇಶಕ್ಕೆ ಸಮೃದ್ಧಿಯನ್ನು ಮರುಸ್ಥಾಪಿಸುವುದು ಮತ್ತು ಎಲ್ಲಾ ಕೆನಡಿಯನ್ನರಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವಂತಹ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕತ್ವದ ಅಗತ್ಯವಿದೆ ಎಂದು ಹೇಳಿದರು. ಅವರು ಕೆನಡಾವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದರು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ತಿಳಿಸಿದರು.
ಕರ್ನಾಟಕದವರಾದ ಚಂದ್ರ ಆರ್ಯ
ಚಂದ್ರ ಆರ್ಯ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ದ್ವಾರಲು ಗ್ರಾಮದಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದರು. 2006ರಲ್ಲಿ ಕೆನಡಾಕ್ಕೆ ತೆರಳಿದ ನಂತರ ಅವರು ಮೊದಲು ಇಂಡೋ-ಕೆನಡಾ ಒಟ್ಟಾವಾ ಬಿಸಿನೆಸ್ ಚೇಂಬರ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ 2015ರಲ್ಲಿ ಕೆನಡಾದ ಫೆಡರಲ್ ಚುನಾವಣೆಯಲ್ಲಿ ನೇಪಿಯನ್ ರೈಡಿಂಗ್‌ಗೆ ಸಂಸದರಾದರು. ಅವರು 2019 ಮತ್ತು 2021 ರಲ್ಲಿ ಮರು ಆಯ್ಕೆಯಾದರು.
ಚಂದ್ರ ಆರ್ಯ ಅವರು ಕೆನಡಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ವಿಶೇಷವಾಗಿ ಭಾರತೀಯ ಸಮುದಾಯ ಮತ್ತು ಕೆನಡಾದ ಸಮಾಜದ ಪ್ರಮುಖ ವಿಷಯಗಳ ಬಗ್ಗೆ ಅವರು 2022ರಲ್ಲಿ ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಿದರು ಮತ್ತು ಟೊರೊಂಟೊದಲ್ಲಿನ ಹಿಂದೂ ದೇವಾಲಯಗಳ ಧ್ವಂಸ ಪ್ರಕರಣಗಳಲ್ಲಿ ಧ್ವನಿ ಎತ್ತಿದರು. ಈ ದಾಳಿಗೆ ಖಲಿಸ್ತಾನಿ ಉಗ್ರರೆ ಕಾರಣ ಎಂದು ಹೊಣೆಯನ್ನು ಹೊರಿಸಿದರು.(ಎಜೆನ್ಸೀಸ್)
H-1B ವೀಸಾ ಪ್ರೋಗ್ರಾಂನಲ್ಲಿ ಇಂದಿನಿಂದ ಹೊಸ ನಿಯಮಗಳು ಜಾರಿ; ಭಾರತೀಯರಿಗೆ ಪ್ರಯೋಜನವಿದೆಯೇ?